

CSK vs KKR : ನಿನ್ನೆ (ಏ.11) ಚೆಪಾಕ್ನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಸಿಎಸ್ಕೆ ತಂಡಕ್ಕೆ ವ್ಯಾಪಕ ಟೀಕೆಗಳು ಹರಿದುಬಂದಿವೆ. ಐಪಿಎಲ್ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿದ ಬಲಿಷ್ಠ ತಂಡವೊಂದು ಇದೀಗ ಗೆಲುವಿಗಾಗಿ ತೀರ ಪರದಾಡುತ್ತಿರುವುದು ಮತ್ತು ಅಂಕಪಟ್ಟಿಯ ಕೊನೆ ಸ್ಥಾನಕ್ಕೆ ಸೆಣಸಾಡುತ್ತಿರುವುದು ಸದ್ಯ ಕ್ರಿಕೆಟ್ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಕೆಕೆಆರ್, ಧೋನಿ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ತವರಿನಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆಗೆ ಉತ್ತಮ ಆರಂಭವೂ ಸಿಗಲಿಲ್ಲ, ಮಧ್ಯ ಕ್ರಮಾಂಕದಲ್ಲಿ ಆಗಮಿಸಿದ ಬ್ಯಾಟರ್ಗಳೂ ಕಳಪೆ ಪ್ರದರ್ಶನ ನೀಡಿ, ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಇದರಿಂದ ಸಿಎಸ್ಕೆ 20 ಓವರ್ ಅಂತ್ಯಕ್ಕೆ ಕೇವಲ 103 ರನ್ ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೆಕೆಆರ್, 10.1 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 107 ರನ್ ಬಾರಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಮತ್ತೊಮ್ಮೆ ತವರಿನಲ್ಲಿ ಭಾರೀ ಮುಖಭಂಗ ಅನುಭವಿಸಿದ ಸಿಎಸ್ಕೆ, ಸತತ ಐದನೇ ಸೋಲಿಗೆ ಗುರಿಯಾಯಿತು.
ಈ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆ ಅವರನ್ನು ತಂಡದಿಂದ ಕೈಬಿಡಲಾಯಿತು. ಹೀಗಿರುವಾಗ ತಂಡದ ನಾಯಕನ ಜವಾಬ್ದಾರಿಯನ್ನು ಮತ್ತೊಮ್ಮೆ ಹೊತ್ತ ಮಹೇಂದ್ರ ಸಿಂಗ್ ಧೋನಿ, ತಮ್ಮ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುತ್ತಾರೆ ಎಂದೇ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಅದ್ಯಾಕೋ ಸಿಎಸ್ಕೆಗೆ ಸೋಲಿನ ರುಚಿ ಬಹಳ ಇಷ್ಟವಾದಂತೆ ಕಾಣಿಸುತ್ತಿದೆ. ಸೋಲಿನಿಂದ ಹೊರಬರಲು ತೀರ ಪರದಾಡುತ್ತಿದೆ. ಧೋನಿ ನಾಯಕತ್ವದಲ್ಲಿಯೇ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲವಾಗಿದೆ. ಸಿಎಸ್ಕೆ ಸೋಲನ್ನು ಒಪ್ಪಿಕೊಳ್ಳದ ಮಾಜಿ ಹಿರಿಯ ಕ್ರಿಕೆಟಿಗ ರವಿ ಶಾಸ್ತ್ರಿ, ಧೋನಿ ತಂಡದ ಬಗ್ಗೆ ಅತೀವ ಬೇಸರ ಹೊರಹಾಕಿದರು.
ರಚಿನ್ ರವೀಂದ್ರ, ಡಿವಾನ್ ಕಾನ್ವೆ, ಜಡೇಜಾ, ಧೋನಿ, ತ್ರಿಪಾಠಿ ಯಾರು ಉತ್ತಮವಾಗಿ ಕಾಣದೆ ಇದ್ದದ್ದನ್ನು ಕಂಡು ಕೆಂಡಮಂಡಲಗೊಂಡ ರವಿಶಾಸ್ತ್ರಿ, ಸತತ ಐದನೇ ಸೋಲು ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನೋಡುತ "ಇದಕ್ಕೆಲ್ಲ ಕ್ಷಮೆಯೇ ಇಲ್ಲ! ಈ ಸೋಲು ಒಪ್ಪುವಂತದ್ದಲ್ಲ" ಎಂದು ಬೇಸರ ವ್ಯಕ್ತಪಡಿಸಿದರು. ಕಮೆಂಟರಿ ಬಾಕ್ಸ್ನಲ್ಲಿ ಕುಳಿತಿದ್ದ ದಿಗ್ಗಜ ಕ್ರಿಕೆಟಿಗ, ಧೋನಿ ಪಡೆ ಸೋಲುತ್ತಿದ್ದಂತೆ ತಮ್ಮ ಮನದಾಳದ ಮಾತನ್ನು ಮುಕ್ತವಾಗಿ ವ್ಯಕ್ತಪಡಿಸಿದರು. ಇನ್ನು ತಮ್ಮ ನೆಚ್ಚಿನ ತಂಡದ ಸರಣಿ ಸೋಲನ್ನು ಕಂಡ ಕ್ರಿಕೆಟ್ ಪ್ರೇಮಿಗಳು ಜಾಲತಾಣಗಳಲ್ಲಿ ಫ್ರಾಂಚೈಸಿಯನ್ನು ಟೀಕಿಸಿ, ಛೀಮಾರಿ ಹಾಕಿದ್ದಾರೆ,(ಏಜೆನ್ಸೀಸ್).