PSL ಮುಂದೆ ನಿಮ್ಮ IPL ಏನೇನೂ ಅಲ್ಲ! ​ರಾಷ್ಟ್ರೀಯ ತಂಡ ವಿಫಲವಾಗಿದ್ದೇ ನಮಗೆ... ಹಸನ್ ಅಲಿ ಕಿಡಿ

ವಿಜಯವಾಣಿ - 2025-04-10T115755.136
Published on

PSL: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್​ 18ನೇ ಆವೃತ್ತಿಯ ಪಂದ್ಯಗಳು ರೋಚಕತೆಗೆ ಸಾಕ್ಷಿಯಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಉತ್ಸಾಹ, ಕುತೂಹಲ ಎಂದಿಗಿಂತ ದುಪ್ಪಟ್ಟಾಗಿದೆ. ಆರ್​ಸಿಬಿ, ಡೆಲ್ಲಿ ಕ್ಯಾಪಿಟಲ್ಸ್​, ಗುಜರಾತ್ ಟೈಟನ್ಸ್​, ಪಂಜಾಬ್​ ಕಿಂಗ್ಸ್​, ಕೋಲ್ಕತ ನೈಟ್​ ರೈಡರ್ಸ್​, ರಾಜಸ್ಥಾನ ರಾಯಲ್ಸ್ ತಂಡಗಳು ಉತ್ತಮ ಆಲ್​ರೌಂಡ್ ಪ್ರದರ್ಶನದ ಮೂಲಕ ಅಂಕಪಟ್ಟಿಯಲ್ಲಿ ಮಿಂಚುತ್ತಿದೆ. ಹೀಗಿರುವಾಗ ಮತ್ತೊಮ್ಮೆ ಪಾಕ್​ ತನ್ನ ದ್ವೇಷದ ಜ್ವಾಲೆಯನ್ನು ಭಾರತೀಯ ಕ್ರಿಕೆಟ್​ ಮೇಲೆ ಚಿಮ್ಮಿದೆ.

ಇದೇ ಏ.11ರಿಂದ ಆರಂಭವಾಗಲಿರುವ ಪಾಕಿಸ್ತಾನ ಸೂಪರ್​​ ಲೀಗ್​ಗೆ ಅಧಿಕೃತ ಚಾಲನೆ ಸಿಗಲಿದ್ದು, ಇಸ್ಲಾಮಾಬಾದ್​ ಯುನೈಟೆಡ್​ ಮತ್ತು ಲಾಹೋರ್​ ಕ್ವಾಲೆಂಡರ್ಸ್​ ತಂಡಗಳು ಶುಭಾರಂಭ ಪಂದ್ಯದಲ್ಲಿ ಮುಖಾಮುಖಿಯಾಗಿ ಸೆಣಸಲಿವೆ. ಇದೇ ವಿಷಯವನ್ನು ಮುಂದಿಟ್ಟು ಐಪಿಎಲ್​ ಅನ್ನು ಟೀಕಿಸಿರುವ ಪಾಕ್ ವೇಗಿ ಹಸನ್​ ಅಲಿ, “ನಮ್ಮಲ್ಲಿ ಉತ್ತಮ ಪ್ರದರ್ಶನಗಳು ಕಾಣಲು ಸಿಕ್ಕರೆ ಎಲ್ಲರೂ ಪಿಎಸ್​ಎಲ್​ನ ಮಾತ್ರ ನೋಡುತ್ತಾರೆ. ಆಗ ಐಪಿಎಲ್​ಗೆ ಪ್ರಾಮುಖ್ಯತೆಯೇ ಇರಲ್ಲ. ಐಪಿಎಲ್​ ಬದಲಿಗೆ ಎಲ್ಲರೂ ಪಿಎಸ್​ಎಲ್​ ವೀಕ್ಷಿಸುತ್ತಾರೆ” ಎಂದು ಹೇಳಿದ್ದಾರೆ. ಇದು ನೆಟ್ಟಿಗರನ್ನು ಕೆರಳಿಸಿದೆ.

"ನಮ್ಮ ರಾಷ್ಟ್ರೀಯ ತಂಡವು ಉತ್ತಮ ಪ್ರದರ್ಶನ ನೀಡದಿದ್ದಾಗ, ಅದು ಪಿಎಸ್ಎಲ್​ ನಂತಹ ಉತ್ತಮ ಟಿ20 ಲೀಗ್‌ಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಚಾಂಪಿಯನ್ಸ್ ಟ್ರೋಫಿ ಮತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಕಾರಣ, ನಮ್ಮಲ್ಲಿ ಹೊಸ ಆಟಗಾರರಿಗೆ ಹೆಚ್ಚು ಅವಕಾಶಗಳನ್ನು ನೀಡಲಾಯಿತು ಮತ್ತು ಅವರು ತಂಡದಲ್ಲಿ ಸ್ಥಿರವಾಗಲು ಸಮಯ ಬೇಕಾಯಿತು. ಪಾಕಿಸ್ತಾನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದಾಗ, ಪಿಎಸ್‌ಎಲ್‌ಗೆ ಹೆಚ್ಚಿನ ಉತ್ತೇಜನ ಸಿಗುತ್ತದೆ. ಈ ಲೀಗ್​ನಲ್ಲಿ ನಮ್ಮ ಅಭಿಮಾನಿಗಳನ್ನು ಸಂತೋಷಪಡಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ" ಎಂದು ಭರವಸೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net