ಬೆಳ್ತಂಗಡಿ: ಕಳಂಕ ರಹಿತ, ಶುದ್ಧಹಸ್ತ, ತೆರೆದ ಪುಸ್ತಕ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಸಿದ್ದರಾಮಯ್ಯ ಇದೀಗ ಮುಡಾದ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆ ಎದುರಿಸಬೇಕಾಗಿ ಬಂದಿರುವುದರಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಅಥವಾ ಇತರ ಹುದ್ದೆಯಲ್ಲಿದ್ದಾಗ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಶಂಕೆಯನ್ನು ನ್ಯಾಯಾಲಯ ವ್ಯಕ್ತಪಡಿಸಿದ್ದು, ರಾಜ್ಯಪಾಲರು ವಿವೇಚನಾಯುತ ಆದೇಶ ಹೊರಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಇದು ಮುಖ್ಯಮಂತ್ರಿ ಮತ್ತು ಅವರ ಬೆಂಬಲಿಗರ ಆರೋಪ ಸುಳ್ಳು ಎಂಬುದನ್ನು ಎತ್ತಿ ತೋರಿಸಿದೆ ಎಂದಿದ್ದಾರೆ.
ಈಗಾಗಲೇ ಗ್ಯಾರಂಟಿಗಳಿಂದಾಗಿ, ವಾಲ್ಮೀಕಿ, ಮುಡಾ ಹಗರಣಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಸ್ತಬ್ಧವಾಗಿದೆ. ಸತ್ಯ ಹರಿಶ್ಚಂದ್ರನಂತೆ, ಪರಿಶುದ್ಧನಂತೆ ಪೋಸು ಕೊಡುವ ಸಿದ್ದರಾಮಯ್ಯ, ಯಡಿಯೂರಪ್ಪ ಅವರ ವಿಚಾರದಲ್ಲಿ ನೈತಿಕತೆಯ ಬಗ್ಗೆ ಭಾರಿ ಮಾತನಾಡಿದ್ದರು. ಇಷ್ಟೆಲ್ಲ ಬೆಳವಣಿಗೆಯ ನಂತರ ರಾಜೀನಾಮೆ ನೀಡುವುದಿಲ್ಲ ಎನ್ನುವುದು ಭಂಡತನ ಅಲ್ಲದೆ ಮತ್ತೇನು? ಈಗ ಮುಕ್ತ ತನಿಖೆಗೆ ಅವಕಾಶ ಕಲ್ಪಿಸಲೋಸುಗ ನೈತಿಕ ಆಧಾರದಲ್ಲಾದರೂ ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸುವುದು ಅನಿವಾರ್ಯ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.