

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡು ಅಭಿವೃದ್ಧಿಯಾಗಿರುವ ಸಾಧನೆ ಬಿಟ್ಟರೆ ಚತುಷ್ಪಥದ ಉದ್ದಕ್ಕೂ ಸ್ಥಳೀಯ ಗ್ರಾಮಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಇನ್ನು ಹಾಗೇ ಇವೆ. ಪ್ರಮುಖವಾಗಿ ಬಸ್ ನಿಲ್ದಾಣಗಳು ಇಲ್ಲದಿರುವುದು. ಕುಂದಾಪುರ ತಾಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹೆಮ್ಮಾಡಿ ಇದಕ್ಕೊಂದು ಸ್ಪಷ್ಟ ನಿದರ್ಶನ.
ಕೊಲ್ಲೂರಿಗೆ ಸಾಗಬೇಕಾದರೆ ಹೆಮ್ಮಾಡಿ ಮೂಲಕವೇ ಹೋಗಬೇಕು. ತಾಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹೆಮ್ಮಾಡಿಯಲ್ಲಿ ನಾಲ್ಕು ರಸ್ತೆಗಳು ಕೂಡುತ್ತಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಹೆಮ್ಮಾಡಿ ಮೂಲಕ ತಾಲೂಕು, ಜಿಲ್ಲೆಯ ವಿವಿಧೆಡೆ ಪ್ರಯಾಣಿಸುತ್ತಿರುತ್ತಾರೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡು 5 ವರ್ಷ ಕಳೆದರೂ ಹೆಮ್ಮಾಡಿ ಪೇಟೆಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಗೊಂಡಿಲ್ಲ.
ಅಂಗಡಿ, ಹೋಟೆಲ್‌ಗಳೇ ಆಸರೆ
ಕೊಲ್ಲೂರು, ಮಾರಣಕಟ್ಟೆ, ಮುದೂರು ಕಡೆ ಹೋಗುವ ಬಸ್‌ಗಳು ಹೆಮ್ಮಾಡಿ ಮಾರ್ಗವಾಗಿಯೇ ಹೋಗುತ್ತವೆ. ಇಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿರುತ್ತದೆ. ಮಳೆ, ಬಿಸಿಲಿನಲ್ಲೂ ರಸ್ತೆ ಬದಿಯಲ್ಲೇ ನಿಲ್ಲಬೇಕು. ಯಾವುದೋ ಅಂಗಡಿ, ಹೋಟೆಲ್‌ಗಳ ಮುಂಭಾಗದಲ್ಲಿ ನಿಂತುಕೊಳ್ಳಬೇಕಾದ ಸ್ಥಿತಿ ಇದೆ. ನಿಂತುಕೊಳ್ಳಲು ಕೂಡಾ ಸರಿಯಾದ ಸ್ಥಳವಿಲ್ಲ. ಹೆಮ್ಮಾಡಿಯಿಂದ ಕುಂದಾಪುರ ಕಡೆ ಹೋಗಲು ನಿಂತುಕೊಳ್ಳಲು ಜಾಗವೇ ಇಲ್ಲ. ಇರುವ ಸಣ್ಣ ಜಾಗವೂ ಕಟೌಟ್‌ಗಳಿಂದ ತುಂಬಿ ಹೋಗಿದೆ.
ಹೆಮ್ಮಾಡಿ ಸರ್ಕಲ್‌ನಲ್ಲಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಸ್ಥಳಾವಕಾಶದ ಕೊರತೆ ಇದೆ. ಆದರೆ ಇಚ್ಛಾಶಕ್ತಿ ಇದ್ದರೆ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಬಹುದು. ಈ ಬಗ್ಗೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಮರವಂತೆ, ಬೈಂದೂರು, ಗಂಗೊಳ್ಳಿ, ಆಲೂರು ಕಡೆ ಹೋಗುವ ಪ್ರಯಾಣಿಕರು ಕೂಡಾ ಬಿಸಿಲು, ಮಳೆಯಲ್ಲಿ ನಿಂತುಕೊಳ್ಳಬೇಕು. ಬೆಳಗ್ಗೆಯಿಂದ ಸಂಜೆ ತನಕ ಇಲ್ಲಿ ಬಿಸಿಲ ಝಳ ಇರುತ್ತದೆ. ಆ ಬಿಸಿಲಿನಲ್ಲಿ ಬಸ್‌ಗಳಿಗೆ ಕಾಯುತ್ತಾ ನಿಲ್ಲಬೇಕು. ಮಳೆಗಾಲದಲ್ಲಂತೂ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುತ್ತಾರೆ. ಅಭಿವೃದ್ಧಿಯಾಗುತ್ತಿರುವ ಹೆಮ್ಮಾಡಿ ಪೇಟೆಯಲ್ಲಿ ಸುಸಜ್ಜಿತವಾದ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡು 5 ವರ್ಷ ಕಳೆದರೂ ಹೆಮ್ಮಾಡಿಯಲ್ಲಿ ಮಾತ್ರ ಎರಡು ಭಾಗಗಳಲ್ಲಿ ಬಸ್ ತಂಗುದಾಣ ನಿರ್ಮಾಣವಾಗಿಲ್ಲ. ಬೆಳೆಯುತ್ತಿರುವ ಹೆಮ್ಮಾಡಿಯಂತಹ ಪೇಟೆಯಲ್ಲಿ ಒಂದು ಸುಸಜ್ಜಿತ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಬೇಕು. -ಹರೀಶ್, ಸ್ಥಳೀಯ ನಿವಾಸಿ ಹೆಮ್ಮಾಡಿ.