ಎಸ್ಸಿ ಸಮುದಾಯದ ಏಳಿಗೆಗೆ ಒಳಮೀಸಲಾತಿ

misalu
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪ್ರಾತಿನಿಧ್ಯತೆಗಾಗಿ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀಕ್ಷೆ ಅಗತ್ಯ. ಎಸ್‌ಸಿ ಮೀಸಲಾತಿ ವರ್ಗೀಕರಣ ಸಮೀಕ್ಷೆಯಿಂದ ಯಾವುದೇ ಕುಟುಂಬ ಹೊರಗುಳಿಯಬಾರದು ಎಂದು ತಹಸೀಲ್ದಾರ್ ಪ್ರತಿಭಾ ಆರ್. ಹೇಳಿದರು.

ಕಾಪು ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಮೀಕ್ಷೆದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ನ್ಯಾ.ಎಚ್.ಎನ್.ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತು ಕ್ರಮ ವಹಿಸಲು ಸರ್ಕಾರದಿಂದ ನಡೆಸಲಾಗುತ್ತಿರುವ ಸಮೀಕ್ಷೆ ಇದಾಗಿದೆ. ಮೇ 5ರಿಂದ ಮೇ 17ರ ವರೆಗೆ ಬೆಳಗ್ಗೆ 8ರಿಂದ ಸಂಜೆ 6.30ರ ವರೆಗೆ ಸಮೀಕ್ಷೆದಾರರು ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಬೇಕು. ಮನೆ ಭೇಟಿ ವೇಳೆ ಬಾಕಿಯಾದ ಪರಿಶಿಷ್ಟ ಕುಟುಂಬಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿನ ವಿಶೇಷ ಶಿಬಿರಗಳಲ್ಲಿ ಮೇ 19 ರಿಂದ 21ರ ಒಳಗೆ ಮಾಹಿತಿ ದಾಖಲಿಸಬಹುದು. ಅದೂ ಸಾಧ್ಯವಾಗದ ಕುಟುಂಬಗಳು ಮೇ 19ರಿಂದ ಮೇ 23ರ ತನಕ ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಲೂ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ತರಬೇತಿ ಕಾರ್ಯಾಗಾರಕ್ಕೆ ಭೇಟಿ ಮಾಡಿ ಮಾರ್ಗದರ್ಶನ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ನಾರಾಯಣಸ್ವಾಮಿ, ಬಸವರಾಜು, ವಿನಾಯಕ, ಉಪ ತಹಸೀಲ್ದಾರರಾದ ಅಶೋಕ್, ದೇವಕಿ, ತರಬೇತುದಾರರಾದ ಮಧುರಾಜ್, ಎಡ್ವರ್ಡ್, ನವ್ಯಾ, ರಾಘವೇಂದ್ರ, ಪುಷ್ಪಲತಾ ಉಪಸ್ಥಿತರಿದ್ದರು.

ಆನ್‌ಲೈನ್ ಆ್ಯಪ್‌ನಲ್ಲಿ ದಾಖಲು

ಆನ್‌ಲೈನ್ ಆ್ಯಪ್ ಮೂಲಕ ಮಾಹಿತಿ ದಾಖಲಿಸಲಾಗುತ್ತದೆ. ಮಾಹಿತಿದಾರರು ರೇಷನ್ ಕಾರ್ಡ್ ಅಥವಾ ಆಧಾರ್‌ಕಾರ್ಡ್ ಹಾಜರುಪಡಿಸುವುದು ಕಡ್ಡಾಯ. ಮನೆ-ಮನೆ ಸಮೀಕ್ಷೆ ಮತಗಟ್ಟೆಗಳಲ್ಲಿ ಶಿಬಿರ, ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆ ಸೇರಿ ಮೂರು ಹಂತದಲ್ಲಿ ಸಮೀಕ್ಷೆ ನಡೆಯಲಿದೆ. ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ 3 ಹಂತಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಪ್ರತಿಭಾ ಆರ್. ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net