

ಭಾರತದಲ್ಲಿ ಮನೋರೋಗಕ್ಕೆ ಸಂಬಂಧಿಸಿದಂತೆ ಸಲಹೆ ನೀಡಲು ಅನುಭವ ಹೊಂದಿದ ಆಪ್ತ ಸಮಾಲೋಚಕರ ತೀವ್ರವಾದ ಕೊರತೆ ಇದೆ. ಭಾರತದಲ್ಲಿ 20 ಸಾವಿರ ಆಪ್ತ ಸಮಾಲೋಚಕರ ಅಗತ್ಯವಿದೆ. ಆದರೆ ಪ್ರಸ್ತುತ ನೋಂದಾಯಿತ 4 ಸಾವಿರ ಆಪ್ತ ಸಮಾಲೋಚಕರು ಮಾತ್ರವೇ ಇದ್ದಾರೆ. ಉಳಿದಂತೆ ತರಬೇತಿ ಪಡೆದಿರುವ ಸ್ವಯಂ ಸೇವಕರು ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಹೊರತಾಗಿಯೂ ಭಾರತದಲ್ಲಿ ಆತ್ಮಹತ್ಯೆ ತಡೆಗಟ್ಟಲು ಬೇರೆ ಬೇರೆ ಕ್ಷೇತ್ರಗಳು ನೆರವಾಗುತ್ತಿವೆ. ಅವೆಂದರೆ ಧಾರ್ಮಿಕ ಆಚರಣೆ, ದೇವಾಲಯ, ಜ್ಯೋತಿಷ್ಯ, ಯೋಗ ಗುರುಗಳು, ಧಾರ್ಮಿಕ ಗುರುಗಳು, ಸಹ ಆಪ್ತ ಸಮಾಲೋಚನೆಯಂತಹ ಇತರೆ ಅವಕಾಶಗಳು ನಮ್ಮ ಸಮಾಜದಲ್ಲಿವೆ.
ಇತ್ತೀಚಿನ ವರ್ಷಗಳಲ್ಲಿ ನಾನಾ ಕಾರಣಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಇದನ್ನು ತಡೆಯಲು ಶಾಲೆಗಳಲ್ಲಿ ಆಪ್ತಸಮಾಲೋಚಕರನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ. ಇಲ್ಲವೆ ಶಿಕ್ಷಕರಿಗೆ ಈ ಬಗ್ಗೆ ತರಬೇತಿ ನೀಡುವುದು ಸೂಕ್ತ. ಇದಲ್ಲದೆ ಪೋಷಕರು ಶಿಕ್ಷಕರೊಂದಿಗೆ ಉತ್ತಮ ಸಂವಹನ ಹೊಂದಿರಬೇಕು. (ಉದಾಹರಣೆಗೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿಗೆ ಶಾಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ಆತ 2-3 ತಿಂಗಳಿನಿಂದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿತು. ಈ ವಿಚಾರವನ್ನು ಶಿಕ್ಷಕರು ಮೊದಲೇ ಪೋಷಕರಿಗೆ ತಿಳಿಸಿದ್ದರೆ ಸೂಕ್ತ ಚಿಕಿತ್ಸೆ ಅಥವಾ ಕೌನ್ಸಲಿಂಗ್ ಕೊಡಿಸಬಹುದಿತ್ತು.) ಪೋಷಕರು ಕೇವಲ ಓದಿನ ಬಗ್ಗೆ ಮಾತ್ರವಲ್ಲದೆ ಅವರ ವರ್ತನೆ, ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯ ಬಗ್ಗೆಯೂ ವಿಚಾರಿಸುತ್ತಿರಬೇಕು. ವರ್ತನೆಯಲ್ಲಿ ವ್ಯತ್ಯಸಗಳು ಕಂಡು ಬಂದಲ್ಲಿ ಮನೋವೈದ್ಯರಲ್ಲಿ ಚಿಕಿತ್ಸೆ ಕೊಡಿಸಬೇಕು.