ಆತ್ಮಹತ್ಯೆ ಎಂಬುದು ಒಂದು ತುರ್ತು ಸಂದರ್ಭ. ಈ ಬಗ್ಗೆ ತಾತ್ಸಾರ, ಗೇಲಿ ಮಾಡದೇ ಗಂಭೀರವಾಗಿ ತೆಗೆದುಕೊಂಡರೆ ಸೂಕ್ತ ಪರಿಹಾರ ಒದಗಿಸಲು ಸಾಧ್ಯ. ಕಳೆದ ಮೂರ್ನಾಲ್ಕು ವರ್ಷದಲ್ಲಿ ಭಾರತದ ಆತ್ಮಹತ್ಯೆಯ ಪ್ರಕರಣಗಳು ಶೇ.10 ರಿಂದ ಶೇ.13ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಹಿಳೆಯರು ಹೆಚ್ಚಾಗಿದ್ದು, ಶೇ.37 ಇದ್ದಾರೆ. ಪುರುಷರ ಆತ್ಮಹತ್ಯೆಯ ಪ್ರಮಾಣ ಶೇ.25 ಇದೆ. ಕರ್ನಾಟಕದಲ್ಲಿ ಒಟ್ಟಾರೆ ಸಾವಿನ ಸಂಖ್ಯೆಯ ಶೇ.19ರಷ್ಟು ಆತ್ಮಹತ್ಯೆಯಿಂದ ಆಗುತ್ತಿದ್ದು, ತಮಿಳುನಾಡು ಮತ್ತು ಕೇರಳದಲ್ಲಿ ಇದಕ್ಕಿಂತ ಹೆಚ್ಚಿದೆ. ದೇಶದಲ್ಲಿ ಸಿಕ್ಕಿಂ ರಾಜ್ಯ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಬಹುದೊಡ್ಡ ಭೌಗೋಳಿಕ ಮತ್ತು ಜನಸಂಖ್ಯೆ ಹೊಂದಿರುವ ರಾಜ್ಯಗಳಾದ ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಆತ್ಮಹತ್ಯೆ ಪ್ರಮಾಣ ಕಡಿಮೆ ಇದೆ.
ಆತ್ಮಹತ್ಯೆ ಎಂಬುದಕ್ಕೆ ಯಾವುದೇ ಪರೀಕ್ಷಾ ಕ್ರಮವಿಲ್ಲ. ವ್ಯಕ್ತಿಯಲ್ಲಿ ಆಗುತ್ತಿರುವ ಬದಲಾವಣೆ, ವೈರಾಗ್ಯದ ಮಾತುಗಳನ್ನು ಗಮನಿಸಿ ಸಂಬಂಧಪಟ್ಟವರು ಸೂಕ್ತ ಕಾಲದಲ್ಲಿ ತಜ್ಞರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಸೂಕ್ತ ಸಲಹೆ ಮತ್ತು ಮಾಹಿತಿಯನ್ನು ನೀಡಿದಲ್ಲಿ ಅಮೂಲ್ಯ ಜೀವಗಳನ್ನು ಆತ್ಮಹತ್ಯೆಯಿಂದ ಉಳಿಸಬಹುದು.
ಸಾಮಾನ್ಯವಾಗಿ ಯಾವುದೇ ನೋವುಗಳನ್ನು ಅನುಭವಿಸುತ್ತಿರುವವರು, ನೋವು ಮರೆಯುವುದಕ್ಕಾಗಿ ಮಧ್ಯಪಾನ ಮಾಡುವುದಾಗಿ ಹೇಳುತ್ತಾರೆ. ಆದರೆ ಮಧ್ಯಪಾನ ಮಾಡಿದಾಗ ಆತ್ಮಹತ್ಯೆಗೆ ಪ್ರೇರಣೆ ದೊರೆಯುವ ಸಂದರ್ಭ ಹೆಚ್ಚಾಗಿರುತ್ತದೆ. ಆಲ್ಕೋಹಾಲ್ ದೇಹದಲ್ಲಿದ್ದಾಗ ಮನಸ್ಸು ಸ್ಥಿಮಿತದಲ್ಲಿರುವುದಿಲ್ಲ. ಈ ಸಂದರ್ಭದಲ್ಲಿ ಶಾಶ್ವತ ಮತ್ತು ಸೂಕ್ತ ನಿರ್ಧಾರ ಸಾವು ಎಂಬ ತಪ್ಪು ಅಭಿಪ್ರಾಯಕ್ಕೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.