

ಅನುಭವಕೆ ಸತ್ತ್ವ ಶಿವ ಸುಂದರಗಳಮರೆ||
ಮನ ತುಂಬುಶಶಿಯಾಗಿ, ನೆನಪಮೃತವಾಗುವುದು|
ಕ್ಷಣದೊಳಕ್ಷಯ ಕಾಣೊ-ಮಂಕುತಿಮ್ಮ||445||
ಯಾವುದೋ ಒಂದು ಕ್ಷಣವು ಅನಂತಕಾಲದಂತೆ ಭಾಸವಾಗುತ್ತದೆ. ಆ ಅನುಭವವು ಶಾಶ್ವತವಾಗಿ ಉಳಿಯುವಂತಹುದು, ಮಂಗಳಕರವಾದುದು ಮತ್ತು ಮನಸ್ಸಿಗೆ ಆಹ್ಲಾದ ಉಂಟು ಮಾಡುವಂತಹುದು ಆಗಿದ್ದಾಗ ಮನಸ್ಸು ಪೂರ್ಣಚಂದ್ರಮನಂತೆ ಪ್ರಪುಲ್ಲಿತವಾಗುತ್ತದೆ. ಆ ನೆನಪು ಅಮೃತವಾಗುತ್ತದೆ. ಆ ಕ್ಷಣದ ಅನುಭವವು ಅಕ್ಷಯವಾಗುತ್ತದೆ ಎನ್ನುತ್ತದೆ ಈ ಕಗ್ಗ.
ಅವಿರತ ಪರಿಶ್ರಮದಿಂದ ಹಿಮಾಲಯವನ್ನು ಏರಿದ ತೇನ್ ಸಿಂಗ್, ಎಡ್ಮಂಡ್ ಹಿಲರಿ ಮುಂತಾದ ಪರ್ವತಾರೋಹಿಗಳಿಗೆ, ತುತ್ತತುದಿಯನ್ನು ತಲುಪಿದಾಗ ಆದ ಅನುಭವವನ್ನು ಊಹಿಸಲು ಸಾಧ್ಯವೇ? ನೀಲ್ ಆಮ್ರ್ ಸ್ಟ್ರಾಂಗ್ ಚಂದ್ರನ ಮೇಲೆ ಕಾಲೂರಿದಾಗ, ಪ್ರಜ್ಞಾನ ನೌಕೆಯು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿದಾಗ ಅದಕ್ಕೆ ಕಾರಣರಾದವರಲ್ಲಿ ಮೂಡಿದ ಅನುಪಮ ಆನಂದವನ್ನು ವಿವರಿಸಲು ಸಾಧ್ಯವಿದೆಯೇ? ನವಮಾಸಗಳ ಕಾಲ ತನ್ನ ಗರ್ಭದಲ್ಲಿ ಮಗುವನ್ನು ಜೋಪಾನ ಮಾಡಿ, ಅಸಹನೀಯ ನೋವನ್ನನುಭವಿಸಿ ಮಗುವಿಗೆ ಜನ್ಮ ನೀಡುವ ತಾಯಿಗೆ, ಮಗುವಿನ ಮೊದಲ ಅಳುವನ್ನು ಕೇಳಿದಾಗ, ನವಿರು ಕೆನ್ನೆಯನ್ನು ರ್ಸ³ಸಿದಾಗ ಆಗುವ ಆನಂದವು ಮಾತಿಗೆ ನಿಲುಕಬಲ್ಲುದೆ? ಎಲ್ಲರೂ ಒಂದಲ್ಲೊಂದು ಸಂದರ್ಭದಲ್ಲಿ ಇಂತಹ ದಿವ್ಯಾನುಭವಕ್ಕೆ ಒಳಗಾಗಿರುತ್ತಾರೆ. ಇದೇ ರೀತಿ ಪ್ರಕೃತಿಯಲ್ಲಿರುವ ವಿಸ್ಮಯಾದ್ಭುತಗಳನ್ನು ಎದುರುಗೊಂಡಾಗಲೂ ರಸಿಕನಾದವನು ಆನಂದಿತನಾಗುತ್ತಾನೆ. ಬೆಳದಿಂಗಳಿರುಳಿನಲ್ಲಿ ಬಾನೆತ್ತರ ಲಂಘಿಸುವ ಕಡಲಿನಲೆಗಳು, ಧುಮ್ಮಿಕ್ಕಿ ಹರಿಯುವ ಜಲಪಾತ, ಸೂರ್ಯೋದಯ, ಸೂರ್ಯಾಸ್ತ ಹೀಗೆ ಸಹಜತೆಯಿಂದ ಕೂಡಿದ ಪ್ರಕೃತಿಯು ತನ್ನ ಸುಂದರತೆಯಿಂದ ಮತಿ-ಮನಸ್ಸುಗಳನ್ನು ಪರವಶಗೊಳಿಸುತ್ತದೆ. ಈ ಅನುಭವವು ಕ್ಷಣವಾಗಿದ್ದರೂ, ಅದು ಕೊಡುವ ಆನಂದವು ಶಾಶ್ವತವಾದುದು. ಪ್ರಕೃತಿಯಲ್ಲಿ ಇದುವೇ ಚಂದ, ಇದು ಚಂದವಿಲ್ಲ ಎಂದು ಪ್ರತ್ಯೇಕಿಸುವುದಕ್ಕೆ ಸಾಧ್ಯವಿಲ್ಲ. ಆದರೂ ಕೆಲವೊಂದು ಅದ್ಭುತಗಳನ್ನು ಎದುರುಗೊಂಡಾಗ ಮಾತು ಹೊರಡದ, ಮನಸ್ಸು ನಿಶ್ಚಲವಾಗುವ ಸ್ಥಿತಿಗೆ ಒಳಗಾಗುವುದು ಹೌದು.
ಮನುಷ್ಯನು ಸ್ವಭಾವತಃ ಉಲ್ಲಾಸಮಯಿ. ಅದಕ್ಕಾಗಿಯೇ ಯಾವುದೋ ಒಂದು ಜೀವಿತೋದ್ದೇಶವನ್ನು ಕಂಡುಕೊಂಡು ಅದನ್ನು ಈಡೇರಿಸಲು ಪ್ರಯತ್ನವನ್ನು ಮಾಡುತ್ತಾನೆ. ಗೆದ್ದಾಗ ಸಾರ್ಥಕತೆಯನ್ನು ಅನುಭವಿಸುತ್ತಾನೆ. ಆ ಗಳಿಗೆಯ ಹರುಷವು ಮತ್ತೆಮತ್ತೆ ಅನುರಣಿಸಿ ಹೃದಯವನ್ನು ಮೃದುವಾಗಿಸುತ್ತದೆ. ಹೀಗೆ ವ್ಯಕ್ತಿಯು ರಸನಿಮಿಷದಲ್ಲಿ ತನ್ಮಯನಾದಾಗ ಅವನೊಳಗೆ ಅನ್ಯಚಿಂತೆಗಳಿರುವುದಿಲ್ಲ. ಹಗುರವಾಗುತ್ತಾನೆ. ಮನುಷ್ಯನು ನಿರ್ವಿುಸಿದ ಕೆಲವೊಂದು ವಿಶೇಷವಾದ ಪ್ರತಿಕೃತಿಗಳನ್ನು ನೋಡಿದಾಗ, ಸಾಹಸ, ಸವಾಲುಗಳಲ್ಲಿ ಪಾಲ್ಗೊಂಡಾಗ ಸಂತೋಷವನ್ನು ಅನುಭವಿಸುವುದು ಸುಳ್ಳಲ್ಲ. ಆದರೆ ಆ ಸಂತಸದ ನೆನಪು ದೀರ್ಘಕಾಲ ಉಳಿಯುವುದಿಲ್ಲ. ಅಂತಹುದೆ ಅಥವಾ ಅದಕ್ಕಿಂತ ಮಿಗಿಲಾದ ಇನ್ನಷ್ಟು ಕೃತಕ ನಿರ್ವಿುತಿಗಳನ್ನು ಕಂಡಾಗ ಹಳೆಯದ್ದು ಮರೆತುಹೋಗುತ್ತದೆ. ಮನಸ್ಸು ಮತ್ತೆಮತ್ತೆ ಸಂತಸದ ಹುಡುಕಾಟಕ್ಕಿಳಿಯುತ್ತದೆ. ಆದರೆ ನಿಸರ್ಗದತ್ತವಾದ ಅದ್ಬುತ ಸೌಂದರ್ಯಗಳು ವ್ಯಕ್ತಿಯನ್ನು ಉದ್ಗಾರಕ್ಕೂ ಮೀರಿದ ಮೌನದೊಳಗೆ, ಮೂಕವಿಸ್ಮಿತನನ್ನಾಗಿಸುತ್ತದೆ. ಆನಂದದಿಂದ ಮೈಮನಸ್ಸುಗಳು ಪುಳಕಿತಗೊಳ್ಳುತ್ತವೆ. ಹಾಗೆಯೇ ಜೀವನದಲ್ಲಿ ತಾನು ನಿರೀಕ್ಷಿಸಿದುದನ್ನು ಪಡೆದಾಗ, ಅಸಾಧ್ಯವೆಂದು ಭಾವಿಸಿದುದು ಅನಿರೀಕ್ಷಿತವಾಗಿ ಸಾಧ್ಯವಾದಾಗ ವ್ಯಕ್ತಿಯು ಆನಂದಭಾಷ್ಪವನ್ನು ಹರಿಸುತ್ತಾನೆ. ಹೀಗೆ ಮತಿ-ಮನಸ್ಸನ್ನು ಸಂಪೂರ್ಣವಾಗಿ ಆವರಿಸುವ ನಲಿವನ್ನು ಆತ್ಮಾನಂದ ಎನ್ನುತ್ತಾರೆ. ಆತ್ಮಾನಂದವನ್ನು ಕರುಣಿಸುವ ಸುಂದರ ಕ್ಷಣಗಳು ಜೀವನದ ಸೌಭಾಗ್ಯ.
ಯಾಕೆಂದರೆ ಅತಿಶಯವಾದ ಆನಂದವನ್ನು ಕರುಣಿಸುವ ಸಂದರ್ಭಗಳು, ಸೌಂದರ್ಯಾದ್ಭುತಗಳು ಪರಬ್ರಹ್ಮ ಸ್ವರೂಪದ ಅಭಿವ್ಯಕ್ತಿ. ಹಾಗಾಗಿಯೇ ಆ ಅನುಭವದ ನೆನಪು ಚಿರಂತನ ಮತ್ತು ಮಂಗಳಕರ. ಇದು ಹುಚ್ಚು ಮನಸ್ಸನ್ನು ಹಿಡಿದು ನಿಲ್ಲಿಸಬಲ್ಲುದು. ಅಂತರಂಗಕ್ಕೆ ದಿವ್ಯತೆಯ ದರ್ಶನವು ವೇದ್ಯವಾಗುವಂತೆ ಮಾಡಿ ಜ್ಞಾನಪ್ರದವಾಗಬಲ್ಲುದು. ಅವ್ಯಕ್ತ ಶಕ್ತಿಯ ತೋರಿಕೆಗಳಾಗಿರುವ ಚೆಲುವನ್ನು, ಒಲವನ್ನು ಕಂಡ ಅಂತರಂಗವು ಹುಣ್ಣಿಮೆಯ ಚಂದ್ರಮನಂತೆ ಪೂರ್ಣತೆಯನ್ನು ಅನುಭವಿಸುತ್ತದೆ. ಮರೆವು ಬಾಧಿಸದ ಈ ನೆನಕೆಗಳು ಆತ್ಮಕ್ಕೆ ಶಿಕ್ಷಣವಾಗುತ್ತದೆ.
ಬೆಟ್ಟದ ತುದಿಯಲ್ಲಿರುವ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಭಕ್ತರಲ್ಲಿ ಕೆಲವರು ಮೆಟ್ಟಿಲೇರುವ ಸಾಹಸದಲ್ಲಿ ಖುಷಿಯನ್ನು ಕಾಣುತ್ತಾರೆ. ನಾನು ಏರಿದೆ, ನಾನು ನೋಡಿದೆ ಎಂಬ ಪರಿಧಿಯೊಳಗೆ ಅವರ ಸಂತಸದ ಅಲೆಗಳಿರುತ್ತವೆ, ಜೊತೆಗೆ ನಡೆದ ಆಯಾಸವೂ ಇರುತ್ತದೆ. ಯಾರು ಮನಸ್ಸಿನಿಂದಲೂ ಬೆಟ್ಟವನ್ನು ಏರುತ್ತಾರೋ ಅವರು ತಮ್ಮ ಪ್ರತಿಹೆಜ್ಜೆಗಳಿಗೂ ಬಲತುಂಬುವ, ತಮ್ಮ ಸುತ್ತಲೂ ಸೌಂದರ್ಯವಾಗಿ, ಸಾಹಸ-ಸವಾಲುಗಳಾಗಿ ವ್ಯಕ್ತವಾಗುವ ನಿಸರ್ಗದ ಸಹಜತೆಯೊಳಗೆ ಅವ್ಯಕ್ತ ಶಕ್ತಿಯನ್ನು ಕಾಣುತ್ತಾರೆ. ಕ್ಷಣಕ್ಷಣಕ್ಕೂ ಆತ್ಮಾನಂದವನ್ನು ಅನುಭವಿಸುತ್ತಾರೆ. ಆ ದಿವ್ಯ ಅನುಭೂತಿಯ ಕ್ಷಣಗಳು ಜೀವನದುದ್ದಕ್ಕೂ ಅಕ್ಷಯವಾಗುತ್ತಾ ಜೀವನವನ್ನು ಸುಂದರಗೊಳಿಸುತ್ತದೆ.