

ಬೆಂಗಳೂರು: ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್ ಪ್ರೊಡಕ್ಷನ್ಸ್ನಡಿ 'ಪೆಂಟಗನ್' ಎಂಬ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ಗೊತ್ತೇ ಇದೆ. ಇದು ಐವರು ನಿರ್ದೇಶಕರು ನಿರ್ದೇಶಿಸುತ್ತಿರುವ ಆಂಥಾಲಜಿ ಸಿನಿಮಾ ಎಂಬುದು ಸಹ ಗೊತ್ತಿರಬಹುದು. ಈ ಚಿತ್ರದ ಮೋಷನ್ ಪೋಸ್ಟರ್ ಭಾನುವಾರ (ಜನವರಿ 18) ಸಂಜೆ ಬಿಡುಗಡೆಯಾಗಲಿದೆ.
ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗುವುದಕ್ಕೆ ಸಮಯವಿದೆಯಾದರೂ, ಕಳೆದ ನಾಲ್ಕು ದಿನಗಳಿಂದ ನಾಲ್ಕು ಕಥೆಗಳ ಥೀಮ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮೊದಲ ಥೀಮ್ ಪೋಸ್ಟರ್ ರಚಿತಾ ರಾಮ್ ಬಿಡುಗಡೆ ಮಾಡಿದರೆ, ಎರಡನೆಯದನ್ನು ಹರಿಪ್ರಿಯಾ ಹೊರತಂದಿದ್ದಾರೆ. ಇನ್ನು ಮೂರು ಮತ್ತು ನಾಲ್ಕನೆಯದನ್ನು ಕ್ರಮವಾಗಿ ಧನಂಜಯ್ ಮತ್ತು ರಿಷಭ್ ಶೆಟ್ಟಿ ಬಿಡುಗಡೆಗೊಳಿಸಿದ್ದಾರೆ.
ಈ ಥೀಮ್ ಪೋಸ್ಟರ್ ಮೂಲಕ ಒಂದೊಂದು ಕಥೆಯ ಆಶಯವನ್ನು ಹೇಳುವ ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ ಗುರು ದೇಶಪಾಂಡೆ. ಇಲ್ಲಿ ಆಶಯಕ್ಕಷ್ಟೇ ಆದ್ಯತೆ ನೀಡಿರುವುದರಿಂದ ಯಾವ ಕಲಾವಿದರ ಫೋಟೋಗಳನ್ನೂ ಹಾಕಲಾಗಿಲ್ಲ ಎನ್ನುತ್ತಾರೆ ಅವರು.
ಈ ಕುರಿತು 'ವಿಜಯವಾಣಿ' ಜತೆಗೆ ಮಾತನಾಡಿದ ಅವರು, 'ಸಾಮಾನ್ಯವಾಗಿ ಪೋಸ್ಟರ್ಗಳಲ್ಲಿ ಚಿತ್ರದ ತಂತ್ರಜ್ಱರು, ಕಲಾವಿದರ ಹೆಸರುಗಳು ಇರುತ್ತದೆ ಮತ್ತು ಚಿತ್ರದ ಫೋಟೋಗಳು ಇರುತ್ತವೆ. ನಮ್ಮ ಚಿತ್ರದ ಮೋಷನ್ ಪೋಸ್ಟರ್ಗಳಲ್ಲಿ ಅವೆಲ್ಲ ಇದ್ದೇ ಇರುತ್ತದೆ. ಆದರೆ, ಚಿತ್ರದಲ್ಲಿ ಐದು ವಿಭಿನ್ನ ಕಥೆಗಳಿರುವುದರಿಂದ, ಆ ಐದು ಕಥೆಗಳ ಸಾರಾಂಶವೇನು ಎಂಬುದನ್ನು ಹೇಳಬೇಕಿತ್ತು. ಹಾಗಾಗಿ ಪ್ರತಿ ಕಥೆಯ ಥೀಮ್ ಪೋಸ್ಟರ್ ಮಾಡಿ ಬಿಡುಗಡೆ ಮಾಡಿದ್ದೇವೆ. ಒಂದು ಪೋಸ್ಟರ್ನಲ್ಲಿ ಗನ್ ಇದ್ದರೆ, ಇನ್ನೊಂದರಲ್ಲಿ ಗುಲಾಬಿ ಹೂವಿದೆ. ಇನ್ನೊಂದರಲ್ಲಿ ಇನ್ನೇನೋ ಇರುತ್ತದೆ. ಅದರ ಮೂಲಕ ಕಥೆಯ ಆಶಯವನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ' ಎನ್ನುತ್ತಾರೆ.
ಇದನ್ನೂ ಓದಿ: ಕಂಗನಾ ಮೇಲೆ ಕಳ್ಳತನದ ಆರೋಪ ಹೊರಿಸಿದ ಲೇಖಕ
ಈ ಎಲ್ಲ ಥೀಮ್ ಪೋಸ್ಟರ್ಗಳು ಪ್ರತಿದಿನ ಸಂಜೆ ಐದು ಗಂಟೆ ಐದು ನಿಮಿಷಕ್ಕೆ ಬಿಡುಗಡೆಯಾಗಿದ್ದು, ಅದರಂತೆ ಮೋಷನ್ ಪೋಸ್ಟರ್ ಸಹ ಜನವರಿ 18ರ ಭಾನುವಾರ ಸಂಜೆ ಬಿಡುಗಡೆಯಾಗಲಿದೆ.