

ಮುಂಬೈ: ಕಂಗನಾಗೂ ವಿವಾದಗಳಿಗೂ ಅದೇನೋ ನಂಟು. ಕಂಗನಾ ಹೆಸರು ಪ್ರತಿನಿತ್ಯ ಒಂದಲ್ಲ ಒಂದು ವಿವಾದದಲ್ಲಿ ಕೇಳಿ ಬರುತ್ತಲೇ ಇರುತ್ತದೆ. ಈಗ ಆ ಸಾಲಿಗೆ ಇನ್ನೊಂದು ಹೊಸ ಸೇರ್ಪಡೆಯಾಗಿದೆ. ಆಶೀಶ್ ಕೌಲ್ ಎಂಬ ಲೇಖಕ ಇದೀಗ ಕಂಗನಾ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾರೆ.
ಕಂಗನಾ ಇತ್ತೀಚೆಗಷ್ಟೇ ಹೊಸ ಚಿತ್ರವೊಂದರಲ್ಲಿ ನಟಿಸುವುದಾಗಿ ಘೋಷಿಸಿದ್ದರು. 'ಮಣಿಕರ್ಣಿಕಾ: ದಿ ಲೆಜೆಂಡ್ ಆಫ್ ದಿಡ್ಡಾ' ಎಂಬ ಹೆಸರಿನ ಈ ಚಿತ್ರದಲ್ಲಿ ಕಾಶ್ಮೀರದಾ ರಾಣಿಯಾಗಿ ನಟಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಕಾಶ್ಮೀರದ ಕ್ಲಿಯೋಪಾತ್ರ ಎಂಬ ಖ್ಯಾತಿ ಪಡೆದಿದ್ದ ಈ ರಾಣಿಯ ಜೀವನ ಮತ್ತು ಕಾಲಘಟ್ಟವನ್ನು ಆಧರಿಸಿ ಈ ಚಿತ್ರ ಮಾಡಲಾಗುತ್ತಿದೆ.
ಆದರೆ, ಕಂಗನಾ ತಮ್ಮ ಕಥೆಯನ್ನು ಕದ್ದಿದ್ದಾರೆ ಎಂದು ಲೇಖಕ ಆಶೀಶ್ ಕೌಲ್ ಆರೋಪಿಸಿದ್ದಾರೆ. ರಾಣಿ ದಿಡ್ಡಾ ಕುರಿತು ಅವರು ಪುಸ್ತಕ ಬರೆದಿದ್ದು, ಕಳೆದ ವರ್ಷ ಸೆಪ್ಟೆಂಬರ್ 11ರಂದು ತಮ್ಮ 'ದಿಡ್ಡಾ - ಕಾಶ್ಮೀರ್ ಕೀ ಯೋಧಾ ರಾಣಿ' ಎಂಬ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡುವಂತೆ, ಕಂಗನಾಗೆ ಮೇಲ್ ಮಾಡಿದ್ದರಂತೆ. ಅದರಲ್ಲಿ ರಾಣಿಯ ಕಥೆ ಬರೆದಿದ್ದರಂತೆ. ಆದರೆ, ಕಂಗನಾ ಅಥವಾ ಆಕೆಯ ಸಹೋದರಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲವಂತೆ. ಮುನ್ನುಡಿಯ ಬದಲು, ಕಂಗನಾ ಅವರೇ ಆ ಚಿತ್ರ ಮಾಡುತ್ತಿರುವ ಬಗ್ಗೆ ಕೌಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ದಿಡ್ಡಾ ರಾಣಿಯ ಜೀವನಚರಿತ್ರೆಯ ಕುರಿತಾಗಿ ನನ್ನ ಹತ್ತಿರ ಹಕ್ಕುಗಳಿವೆ. ಆದರೆ, ಕಂಗನಾ ನನ್ನನ್ನು ಒಂದು ಮಾತು ಕೇಳದೆಯೇ, ಆ ಕಥೆಯನ್ನು ಕದ್ದಿದ್ದಾರೆ. ಆ ಪುಸ್ತಕ ಬರೆಯುವುದಕ್ಕೆ ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ಇತಿಹಾಸ ಕೆದಕಿದರೆ ಆ ರಾಣಿಯ ಸಾಹಸಗಳ ಬಗ್ಗೆ ಹೆಚ್ಚು ವಿಷಯ ಸಿಗುವುದಿಲ್ಲ. ಆದರೆ, ನಾನು ಆರು ವರ್ಷಗಳ ಕಾಲ ರೀಸರ್ಚ್ ಮಾಡಿ, ಪುಸ್ತಕ ಬರೆದಿದ್ದೇನೆ. ಆದರೆ, ನನ್ನ ಕೇಳದೆಯೇ ಕಂಗನಾ ಕಥೆ ಕದ್ದು ಸಿನಿಮಾ ಮಾಡುತ್ತಿರುವುದು ಸರಿಯಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಚಿತ್ರದ ನಿರ್ಮಾಪಕ ಕಮಲ್ ಜೈನ್, 'ನಾವು ಕೌಲ್ ಅವರ ಪುಸ್ತಕದಿಂದ ಕಥೆ ಕದ್ದು ಚಿತ್ರ ಮಾಡುತ್ತಿಲ್ಲ. ಇದು ಸಾವಿರ ವರ್ಷಗಳ ಹಿಂದಿನ ಕಥೆ ಮತ್ತು ಎಲ್ಲರಿಗೂ ಗೊತ್ತಿರುವಂತಹ ಕಥೆಯೇ. ಸಾರ್ವಜನಿಕ ವಲಯದಲ್ಲಿ ಪ್ರಚಲಿತದಲ್ಲಿರುವ ಕಥೆಯನ್ನು ಸಿನಿಮಾ ಮಾಡುವುದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ಇನ್ನು ಕೌಲ್ ಅವರ ಪುಸ್ತಕದ ಬಗ್ಗೆ ನನಗೆ ಗೊತ್ತಿಲ್ಲ. ಓದುವುದಿರಲಿ, ಆ ಪುಸ್ತಕದ ಬಗ್ಗೆ ಎಲ್ಲಿಯೂ ನಾನು ಕೇಳಿಲ್ಲ. ಗೂಗಲ್ನಲ್ಲಿ ಹುಡುಕಿದರೆ ರಾಣಿಯ ಕುರಿತಾಗಿ ಹಲವು ವಿಷಯಗಳು ಸಿಗುತ್ತವೆ. ಅದನ್ನು ಕೌಲ್ ಅವರ ಪುಸ್ತಕದಿಂದಲೇ ಕದಿಯುವ ಅವಶ್ಯಕತೆ ಇಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ.