

ಸುಳ್ಯ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾರ್ಜ್ ಮಾಡಲು ಇರಿಸಿದ್ದ ಮೊಬೈಲ್ ಫೋನ್ ಕದಿಯಲು ಮುಂದಾದ ವ್ಯಕ್ತಿಯನ್ನು ಕಾಲೇಜು ವಿದ್ಯಾರ್ಥಿಗಳು ರೆಡ್ಹ್ಯಾಂಡ್ ಆಗಿ ಹಿಡಿದಿರುವ ಘಟನೆ ಗುರುವಾರ ನಡೆದಿದೆ.
ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಓರ್ವ ವಿದ್ಯಾರ್ಥಿ ತನ್ನ ಮೊಬೈಲ್ನ್ನು ಬಸ್ ನಿಲ್ದಾಣದಲ್ಲಿ ಚಾರ್ಜಿಗೆಂದು ಇಟ್ಟಿದ್ದ. ಈ ವೇಳೆ ಮೊಬೈಲ್ ಫೋನ್ ಇಟ್ಟ ಸ್ಥಳದಲ್ಲಿ ಓರ್ವ ವ್ಯಕ್ತಿ ಸಂಶಯಾಸ್ಪದವಾಗಿ ಸುಳಿದಾಡುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ಆತನ ಚಲನವಲನವನ್ನು ಮೊಬೈಲ್ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಆತ ಮೊಬೈಲ್ ಚಾರ್ಜಿಂಗ್ ಸಾಕೆಟ್ನಿಂದ ಫೋನ್ ಕಿತ್ತು ಜೇಬಿಗೆ ಹಾಕುವ ವೇಳೆ ವಿದ್ಯಾರ್ಥಿಗಳು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ವಿಚಾರಿಸಿದಾಗ ವಿದ್ಯಾರ್ಥಿಗಳ ಪ್ರಶ್ನೆಗೆ ಆತ ಕಕ್ಕಾಬಿಕ್ಕಿಯಾಗಿದ್ದು, ಕೂಡಲೇ ಮೊಬೈಲ್ ಕೊಟ್ಟು ಅಲ್ಲಿಂದ ಕಣ್ಮರೆಯಾಗಿದ್ದಾನೆ.