ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಜಾತಿ ಧರ್ಮ ಮೀರಿದ ಸಂಸ್ಕೃತ ಭಾಷೆಯನ್ನು ಸರ್ವರೂ ಅತ್ಯಂತ ಪ್ರೀತಿಯಿಂದ ಅನುಸರಿಸುತ್ತಿರುವುದು ಸಂತಸಕರ. ಸರ್ವ ಸಮುದಾಯದ ಭಾಷೆಯಾಗಿ ಪ್ರಗತಿಯಾಗಿದೆ. ಅತ್ಯಂತ ಸಂಸ್ಕರಿಸಲ್ಪಟ್ಟುದು ಸಂಸ್ಕೃತ. ಭಾವನೆಗಳನ್ನು ಪರಿಣಾಮಕಾರಿಯಾಗಿ ಮಾತಿನ ಮೂಲಕ ವ್ಯಕ್ತಪಡಿಸುವ ಉತ್ಕೃಷ್ಟ ಮಾಧ್ಯಮ ಸಂಸ್ಕೃತ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಹೇಳಿದರು.
ಕರ್ನಾಟಕ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘ, ದ.ಕ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘ, ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಸುಬ್ರಹ್ಮಣ್ಯದ ಎಸ್‌ಎಸ್ ಪಿಯು ಕಾಲೇಜಿನಲ್ಲಿ ಭಾನುವಾರ ದ.ಕ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸಂಸ್ಕೃತೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಎಸ್‌ಎಸ್ ಪಿಯು ಕಾಲೇಜಿನ ಪ್ರೌಢಶಾಲಾ ಮುಖ್ಯಶಿಕ್ಷಕ ಕೆ.ಯಶವಂತ ರೈ ಉದ್ಘಾಟಿಸಿದರು. ದ.ಕ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ಗೌರವಾಧ್ಯಕ್ಷ ವಿದ್ವಾನ್ ಪರಮೇಶ್ವರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಸ್ ಪಿಯು ಕಾಲೇಜಿನ ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ದ.ಕ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ಅಧ್ಯಕ್ಷ ವಿದ್ವಾನ್ ದಿವಸ್ಪತಿ ಭಟ್ ಮುಖ್ಯ ಅತಿಥಿಗಳಾಗಿದ್ದರು. ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆ ಮುಖ್ಯಶಿಕ್ಷಕ ಸತ್ಯಶಂಕರ ಭಟ್, ಎಸ್‌ಎಸ್ ಪಿಯು ಕಾಲೇಜಿನ ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ರಘು ಬಿಜೂರು, ಕುಮಾರಸ್ವಾಮಿ ವಿದ್ಯಾಲಯದ ಸಂಸ್ಕೃತ ಅಧ್ಯಾಪಕಿ ಪ್ರಮೀಳಾ ಉಪಸ್ಥಿತರಿದ್ದರು.
ಎಸ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಪ್ರತೀಕ್ ದಾಮ್ಲೆ ವೇದಮಂತ್ರ ಪಠಣ ಮಾಡಿದರು. ಎಸ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ, ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮತ್ತು ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ದ.ಕ ಜಿಲ್ಲೆಯ ಪ್ರೌಢಶಾಲಾ ಸಂಸ್ಕೃತ ಶಿಕ್ಷಕರು, ಪ್ರತಿಭಾನ್ವಿತ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.