

ಹೊನ್ನಾವರ: ಎನ್‌ಸಿಸಿಯ ಸ್ಥಾಪನೆಯ 75ನೇ ವರ್ಷದ ಪ್ರಯುಕ್ತ ಕನ್ಯಾಕುಮಾರಿಯಿಂದ ಹೊರಟ ಮಹಿಳಾ ಸೈಕ್ಲಿಸ್ಟ್‌ಗಳ ತಂಡವು 1,145 ಕಿಮೀ ಸೈಕಲ್ ತುಳಿದು ಉತ್ತರ ಕನ್ನಡ ತಲುಪಿದೆ.
ಎನ್‌ಸಿಸಿ 14 ಕೆಡೆಟ್‌ಗಳು ಡಿಸೆಂಬರ್ 9 ರಂದು ಕನ್ಯಾಕುಮಾರಿ ಬಿಟ್ಟಿದ್ದು, ಪ್ರತಿ ದಿನ ಸುಮಾರು 100 ಕಿಮೀ ಸೈಕಲ್ ತುಳಿದು ಸುಮಾರು 1,145 ಕಿಮೀ ಸೈಕಲ್ ತುಳಿದು ಸೋಮವಾರ ಹೊನ್ನಾವರ ತಲುಪಿದ್ದಾರೆ. ಹೊನ್ನಾವರ ಪಟ್ಟಣದ ಎಸ್‌ಡಿಎಂ ಕಾಲೇಜಿಗೆ ಭೇಟಿ ನೀಡಿದ ಸೈಕ್ಲಿಸ್ಟ್‌ಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ತಂಡವು ಮಂಗಳವಾರ ಬೆಳಗ್ಗೆ ಕಾರವಾರ ತಲುಪಲಿದೆ. ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಸೈಕ್ಲಿಸ್ಟ್‌ಗಳಿಗೆ ಸ್ವಾಗತ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ. ಜ.21 ರ ಬೆಳಗ್ಗೆ ಸೈಕ್ಲಿಸ್ಟ್‌ಗಳು ಗೋವಾದತ್ತ ಪ್ರಯಾಣ ಬೆಳೆಸುವರು.
ಮಹಿಳಾ ಸಶಕ್ತೀಕರಣದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ "ಮಹಿಳಾ ಶಕ್ತಿಯ ಅಭೇದ್ಯ ಪಯಣ" ಹೆಸರಿನಲ್ಲಿ ಸೈಕ್ಲೋಥಾನ್ ಕೈಗೊಳ್ಳಲಾಗಿದೆ. ಕ್ಲಿಸ್ಟ್‌ಗಳು 32 ದಿನ ನಿರಂತರ ಸೈಕಲ್ ತುಳಿದು 3232 ಕಿ.ಮೀ. ಪ್ರಯಾಣದ ನಂತರ 2024 ಜನವರಿ 21 ರಂದು ನವದೆಹಲಿ ತಲುಪುವರು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ನಂತರ ಕಾಶ್ಮೀರದೆಡೆಗೆ ಪ್ರಯಾಣ ಬೆಳೆಸಲಿದ್ದಾರೆ.
ಎನ್‌ಸಿಸಿ ಬ್ರಿಗೆಡಿಯರ್ ಎನ್.ಎಸ್.ಚಾರಗ ಮಾತನಾಡಿ ದಿನಕ್ಕೆ 100 ಕಿಲೋಮೀಟರ್ ಪ್ರಯಾಣವನ್ನು ಕೇವಲ ಮಹಿಳಾ ಸೈಕ್ಲಿಸ್ಟಗಳು ಅಷ್ಟೇ ಅಲ್ಲದೆ ಇಲ್ಲಿರುವ ಸಾಮಾನ್ಯ ಮಹಿಳೆಯರು ಸಹ ಮಾಡಬಹುದು. ಮಹಿಳೆಯರು ಜೀವನದಲ್ಲಿ ಮುಂದೆ ಬಂದು ತಮ್ಮ ಜೀವನದ ಕನಸನ್ನು ನನಸಾಗಿಸಿಕೊಳ್ಳಿ ಎಂದರು.
ಮಹಿಳಾ ಸೈಕ್ಲಿಸ್ಟ್‌ಗಳನ್ನು ಸ್ವಾಗತಿಸಿದ ತಹಸೀಲ್ದಾರ್ ಉಷಾ ಪಾವಸ್ಕರ್ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಇದ್ದ ಮಹಿಳೆ, ಇಂದು ಶಿಕ್ಷಣವನ್ನು ಪಡೆದು ತಾನು ಯಾವ ಪುರುಷನಿಗೂ ಕಡಿಮೆ ಇಲ್ಲ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾಳೆ. ದೇಶದ ಒಂದು ತುದಿ ಕನ್ಯಾಕುಮಾರಿಯಿಂದ ದೆಹಲಿಗೆ ಸೈಕ್ಲಥಾನ್ ಮೂಲಕ ಹೊರಟ ಮಹಿಳೆಯರಿಗೆ ಶುಭವಾಗಲಿ ಎಂದರು.
ಎಂ.ಪಿ.ಇ. ಸೊಸೈಟಿಯ ಕಾರ್ಯದರ್ಶಿ ಎಸ್.ಎಂ.ಭಟ್, ಕರ್ನಲ್ ವಿ.ಎಂ.ಸಿಂಗ್, ಸುಬೇದಾರ್ ಮೇಜರ್ ಪಾಟೀಲ್, ಕರ್ನಲ್ ಅಮನ್ ದೀಪ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ. ಸಂಜೀವ ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎನ್.ಸಿ.ಸಿ ಘಟಕದ ಅಧಿಕಾರಿ ಲೆಫ್ಟಿನೆಂಟ್ ಸಂತೋಷ್ ಗುಡಿಗಾರ್ ಇದ್ದರು. ಎನ್.ಸಿ.ಸಿ ಕೆಡೆಟ್ ಜ್ಯೋತಿಕಾ ನಾಯ್ಕ, ಅನುಪಮಾ ಕಾಮತ್ ನಿರೂಪಿಸಿದರು. ಎನ್.ಸಿ.ಸಿ ಆರ್ಮಿ ಅಧಿಕಾರಿ ವಿದ್ಯಾಧರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಲೆಫ್ಟಿನೆಂಟ್ ಸಂತೋಷ್ ಗುಡಿಗಾರ ವಂದಿಸಿದರು.