ಫೋಟೋ ತೆಗೆಸಿಕೊಳ್ಳಲು ಹೋಗಿ ಜಲಪಾತಕ್ಕೆ ಬಿದ್ದ ಯುವಕ; ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ

boy
Published on

ಉಡುಪಿ: ರಾಜ್ಯದ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿ ಪಾತ್ರದ ಜನ ಹಾಗೂ ಪ್ರವಾಸಿಗರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಗಳು ಸೂಚನೆ ನೀಡುತ್ತಲಿವೆ. ಆದರೆ ಇದನ್ನೆಲ್ಲಾ ಲೆಕ್ಕಿಸದೆ ಜಲಪಾತಗಳಲ್ಲಿ ಪ್ರವಾಸಿಗರು ಅಪಾಯ ಸಾಹಸಗಳನ್ನು ಮಾಡುತ್ತಿದ್ದು, ಇಂತಹ ಹುಚ್ಚಾಟಕ್ಕೆ ಯುವಕನೊಬ್ಬ ಬಲಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದೆ.

ಘಟನೆಯ ವಿವರ
ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತ ವೀಕ್ಷಿಸಲು ಬಂದ ಯುವಕ ಫೋಟೋ ತೆಗೆದುಕೊಳ್ಳುವಾಗ ಆಯತಪ್ಪಿ ಬಿದ್ದು ನೀರುಪಾಲಾಗಿದ್ದಾನೆ. ಭದ್ರಾವತಿ ಹತ್ತಿರದ ಕೆ ಎಚ್ ನಗರದ ಮೇಸ್ತ್ರಿ ಮುನಿಸ್ವಾಮಿ ಅವರ ಮಗ ಶರತ್ ಕುಮಾರ್ (23) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಶರತ್ ಕುಮಾರ್ ಜಲಪಾತ ವೀಕ್ಷಣೆಗೆ ತೆರಳಿದ್ದರು. ಬಳಿಕ ಜಲಪಾತದ ಬಂಡೆಯ ತುದಿಯಲ್ಲಿ ನಿಂತು ಫೋಟೋ ತೆಗೆದುಕೊಳ್ಳುವಾಗ ಆಯತಪ್ಪಿ ಧುಮ್ಮುಕ್ಕುತ್ತಿರುವ ಜಲಪಾತಕ್ಕೆ ಬಿದ್ದಿದ್ದಾರೆ.

ಪ್ರಕರಣ ದಾಖಲು
ಇನ್ನು ಯುವಕ ಜಲಪಾತದಲ್ಲಿ ಬೀಳುತ್ತಿರುವ ದೃಶ್ಯ ಜೊತೆಯಲ್ಲಿ ತೆರಳಿದ್ದ ಮತ್ತೋರ್ವ ಯುವಕನ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಕೊಲ್ಲೂರು ಪಿ.ಎಸ್.ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಯುವಕನ ಮೃತದೇಹ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆ ಸಂಬಂಧ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net