

ನವದೆಹಲಿ: ದೆಹಲಿಯಿಂದ ಸ್ವಗ್ರಾಮಕ್ಕೆ ಮರಳಿದ್ದ ದಿನಗೂಲಿ ಕಾರ್ಮಿಕನನ್ನು ಕರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಪದೇಪದೆ ಪೀಡಿಸುತ್ತಿದ್ದ ಸಂಬಂಧಿಕರೇ ಈತನನ್ನು ಥಳಿಸಿ ಕೊಂದಿದ್ದಾರೆ!
ಬಿಜ್ನೋರ್ ಜಿಲ್ಲೆಯ ಮಲಕ್‌ಪುರ ಗ್ರಾಮದ ಯುವಕ ಮಂಜೀತ್ ಸಿಂಗ್(23) ಮೃತ. ದೆಹಲಿಯಲ್ಲಿದ್ದ ಈತ ಇತ್ತೀಚೆಗೆ ಸ್ವಗ್ರಾಮಕ್ಕೆ ಮರಳಿದ್ದ. ಬಳಿಕ ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಈತನ ಸೋದರ ಸಂಬಂಧಿಗಳಾದ ಕಪಿಲ್ ಮತ್ತು ಮನೋಜ್ ಒತ್ತಾಯಿಸುತ್ತಿದ್ದರು. ಗುರುವಾರವೂ ಈ ಬಗ್ಗೆ ಮಂಜೀತ್ಸಿಂಗ್ ಬಳಿ ಅವರು ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕುಪಿತರಾದ ಕಪಿಲ್ ಮತ್ತು ಮನೋಜ್ ಕಟ್ಟಿಗೆಯಿಂದ ಮಂಜೀತ್ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.
ತಲೆ ಮತ್ತು ಭುಜಕ್ಕೆ ತೀವ್ರ ಪೆಟ್ಟಾಗಿ ಪ್ರಜ್ಞೆತಪ್ಪಿ ಬಿದ್ದ ಮಂಜೀತ್ನನ್ನು ಪೋಷಕರು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾನೆ.
ಮೃತನ ತಂದೆ ಕಲ್ಯಾಣ್ ಸಿಂಗ್ ನೀಡಿದ ದೂರಿನ ಮೇರೆಗೆ ಕಪಿಲ್ ಮತ್ತು ಮನೋಜ್, ಇವರ ತಾಯಿ ಪುನಿಯಾ ಹಾಗೂ ಮನೋಜ್ ಪತ್ನಿ ಡಾಲಿ ವಿರುದ್ಧ ನಹ್ತೌರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಇನ್ನು ಯಾರನ್ನೂ ಬಂಧಿಸಿಲ್ಲ. ಈ ಸಾವು ತಲೆಗೆ ಬಿದ್ದ ಪೆಟ್ಟಿನಿಂದ ಸಂಭವಿಸಿದೆ. ಆದರೆ, ಹಲ್ಲೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದ ಮಂಜೀತ್ಗೆ ಚಿಕಿತ್ಸೆ ಸಮಯದಲ್ಲಿ ವೈದ್ಯರು ಕರೊನಾ ಪರೀಕ್ಷೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೇ 19ರಂದು ದೆಹಲಿಯಿಂದ ಬಿಜ್ನೋರ್ ತಲುಪಿದ ಮಂಜೀತ್ ಸಿಂಗ್ ಅನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿದ್ದು, ವರದಿ ನೆಗೆಟಿವ್ ಇತ್ತು. ಹಾಗಾಗಿ ಅವರಿಂದ ಕರೊನಾ ಪರೀಕ್ಷೆಗೆ ಮಾದರಿ ಸಂಗ್ರಹಿಸಲಾಗಿಲ್ಲ ಎಂದು ಬಿಜ್ನೋರ್ ಜಿಲ್ಲೆಯ ಹೆಚ್ಚುವರಿ ಎಸ್ಪಿ ಸಂಜಯ್ ಕುಮಾರ್ ತಿಳಿಸಿದ್ದಾರೆ.