ನೀರಿನ ಟ್ಯಾಂಕ್ ಶಿಥಿಲ

ನೀರಿನ ಟ್ಯಾಂಕ್ ಶಿಥಿಲ
Published on

ಹಾದನೂರು ಚಂದ್ರ ಸರಗೂರು

ತಾಲೂಕಿನ ಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಸಿ.ತಳಲು ಕಾಲನಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು, ಯಾವ ಸಂದರ್ಭದಲ್ಲಾದರೂ ನೆಲಕ್ಕೆ ಉರುಳುವ ಸ್ಥಿತಿಯಲ್ಲಿರುವುದರಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.

ಆದಿವಾಸಿಗಳು ಹೆಚ್ಚು ವಾಸಿಸುವ ಈ ಪ್ರದೇಶ ಅಪಾಯಕ್ಕೆ ಆಹ್ವಾನಿಸುತ್ತಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಬೀಳುವ ಸಂಭವ ಇದೆ. ಪಿಲ್ಲರ್‌ಗಳು ಬಿರುಕು ಬಿಟ್ಟಿವೆ. ಸಿಮೆಂಟ್ ಚಕ್ಕೆ ಉದುರುತ್ತಿದೆ. ಟ್ಯಾಂಕ್‌ನ ಅಕ್ಕಪಕ್ಕದಲ್ಲಿ ಮಕ್ಕಳು ಆಟವಾಡುತ್ತಿರುತ್ತಾರೆ. ಅಲ್ಲದೆ ಇಲ್ಲಿ ಜನರ ಓಡಾಟವೂ ಹೆಚ್ಚಿರುತ್ತದೆ. ಅನಾಹುತ ಸಂಭವಿಸುವ ಮೊದಲು ಟ್ಯಾಂಕ್ ನೆಲಸಮ ಮಾಡುವುದು ಒಳ್ಳೆಯದು ಎಂಬುದು ಗ್ರಾಮಸ್ಥರ ಒತ್ತಾಯ.

ಹಾಡಿಯಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಲಾಗಿರುವ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು, ಟ್ಯಾಂಕ್‌ನ ಒಳಗೆ ಹಾಗೂ ಹೊರಗೆ ಗಾರೆ ಉದುರುತ್ತಿದ್ದು, ಕಬ್ಬಿಣದ ರಾಡುಗಳು ತುಕ್ಕು ಹಿಡಿಯುತ್ತಿವೆ. ಈ ಟ್ಯಾಂಕ್‌ನ ಅಕ್ಕಪಕ್ಕದಲ್ಲಿ ವಾಸ ಮಾಡುವ ಕುಟುಂಬ ದವರು ಯಾವ ಘಳಿಗೆಯಲ್ಲಿ ನೀರಿನ ಟ್ಯಾಂಕ್ ಕುಸಿದು ಬಿದ್ದು ಮನೆಗೆ ಅನಾಹುತ ಆಗುವುದೋ ಎಂಬ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.

ಗ್ರಾಮದಲ್ಲಿ 500 ಜನಸಂಖ್ಯೆ ಇದ್ದು, ಸುಮಾರು 150 ಕುಟುಂಬಗಳಿವೆ. ಜಿಲ್ಲಾ ಪಂಚಾಯಿತಿ ಅನುದಾನದಿಂದ ಹಲವು ವರ್ಷಗಳ ಹಿಂದೆಯೇ ಟ್ಯಾಂಕ್ ನಿರ್ಮಾಣವಾಗಿದ್ದು, ಸದ್ಯ ಬೀಳುವ ಹಂತದಲ್ಲಿದೆ. ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಆಡಳಿತ ಟ್ಯಾಂಕ್‌ಗೆ ಕಾಯಕಲ್ಪ ಕಲ್ಪಿಸಲು ಮುಂದಾಗದಿರುವುದು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.

ನೂತನ ಟ್ಯಾಂಕ್ ನಿರ್ಮಿಸಲು ಗ್ರಾಮದಲ್ಲಿ ಸರ್ಕಾರಿ ಜಾಗ ಇದ್ದರೂ ಟ್ಯಾಂಕ್ ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪವೂ ಗ್ರಾಮಸ್ಥರದ್ದಾಗಿದೆ. ನುಗು ಜಲಾಶಯದ ಹಿನ್ನೀರಿನ ಬಳಿ ಹಾಡಿ ಇದ್ದರೂ ಏತನೀರಾವರಿ ಯೋಜನೆಯಡಿ ಯಂತ್ರ ಅಳವಡಿಸಿದ್ದರೂ ಹಾಡಿಗೆ ಅಲ್ಲಿಂದಲೂ ನೀರು ಪೂರೈಕೆಯಾಗುತ್ತಿಲ್ಲ.

ಎಂ.ಸಿ.ತಳಲು ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಇರುವ ಕಾಲನಿಯಲ್ಲಿರುವ ನೀರಿನ ಟ್ಯಾಂಕ್ ತೆರವುಗೊಳಿಸಿ ನೂತನ ಟ್ಯಾಂಕ್ ನಿರ್ಮಿಸುವಂತೆ ಹಾಡಿ ಮುಖಂಡರು ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಟ್ಯಾಂಕ್ ಶಿಥಿಲಗೊಂಡಿರುವುದರಿಂದ ಟ್ಯಾಂಕ್‌ನಲ್ಲಿ ಸಿಮೆಂಟ್ ಚಕ್ಕೆಗಳು ಉದುರುತ್ತಿದ್ದು, ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಕೂಡ ಇದೆ. ಅಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಜನರು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ ಹಾಡಿಯಲ್ಲಿ ಚರಂಡಿ, ವಿದ್ಯುತ್ ಸಮಸ್ಯೆ ಮಿತಿ ಮೀರಿದ್ದು, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಸರಗೂರಿಗೆ ಹಾಗೂ ನಂಜನಗೂಡು ತಾಲೂಕು ಕೇಂದ್ರಗಳಿಗೆ ಈ ಭಾಗದ ವಿದ್ಯಾರ್ಥಿಗಳು ಬರುತ್ತಿದ್ದು, ಗ್ರಾಮದಲ್ಲಿ ಬಸ್ ನಿಲ್ಲಿಸುವುದಿಲ್ಲ ಎಂಬ ಆರೋಪವೂ ಇದೆ.

ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ

ಏಳು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ನೌಕರರೊಬ್ಬರು ನೀರಿನ ಟ್ಯಾಂಕ್ ಸ್ವಚ್ಛತೆಗಾಗಿ ಏಣಿಯ ಮೂಲಕ ಮೇಲೇರುವಾಗ ಟ್ಯಾಂಕ್‌ನ ಗಾರೆ ಅವರ ಮೇಲೆ ಬಿದ್ದಿದೆ. ಅಪಾಯದ ಅರಿವಿರುವುದರಿಂದ ಟ್ಯಾಂಕ್ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ. ಇದರಿಂದ ಟ್ಯಾಂಕ್ ನೀರು ಮಲಿನವಾಗಿದ್ದು, ಸದ್ಯ ಹಾಡಿಯ ಜನರು ಮಲಿನ ನೀರನ್ನೇ ಕುಡಿಯಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net