

ಬೆಂಗಳೂರು: ಕರೊನಾ ತಪಾಸಣೆ ಕಾಲಕ್ಕೆ ನೆಗೆಟಿವ್ ವರದಿ ಬಂದಿದ್ದರೂ ಅನುಮಾನ, ಅಪವಾದ ನಿವಾರಣೆಗೆಂದು ಸ್ವಯಂ ದಿಗ್ಬಂಧನಕ್ಕೆ ಒಳಗಾಗಿದ್ದ ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ ಹಾಗೂ ಡಾ.ಕೆ.ಸುಧಾಕರ್ ಇದೀಗ ಕ್ವಾರಂಟೈನ್‌ನಿಂದ ಹೊರಬಂದಿದ್ದಾರೆ.
ಇದೇ ಸಂದರ್ಭದ ಹಿನ್ನೆಲೆಯಲ್ಲಿ ಮೂವರೂ ಸಚಿವರು ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.
‘‘ಸ್ವಯಂ ದಿಗ್ಬಂಧನ ಅವಧಿಯಲ್ಲೂ ಕರ್ತವ್ಯ ನಿಷ್ಠೆ, ಬದ್ಧತೆ ಮರೆತಿಲ್ಲ. ಇಲಾಖೆ ಹಾಗೂ ಕ್ಷೇತ್ರದ ಕೆಲಸಗಳ ಜತೆಗೆ ಮುಖ್ಯಮಂತ್ರಿ ಕಾಲ ಕಾಲಕ್ಕೆ ನೀಡಿದ ಸೂಚನೆಗಳನ್ನು ಪ್ರತಿಯಾಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಕೆಲಸ ಮಾಡಿಸಿದ್ದೇವೆ. ಈಗ ಮತ್ತೊಮ್ಮೆ ನೆಗೆಟಿವ್ ವರದಿ ಕೈಸೇರಿದೆ, ಕ್ವಾರಂಟೈನ್‌ನ ನಿಗದಿತ ಅವಧಿ ಮುಗಿದಿದೆ. ಆದ್ದರಿಂದ ಕ್ವಾರಂಟೈನ್ ಮುಕ್ತರಾಗಿ ಗುರುವಾರದಿಂದ ಅಧಿಕೃತ ಕಾರ್ಯಕಲಾಪಗಳಲ್ಲಿ ತೊಡಗಿದ್ದೇವೆ’’ ಎಂದು ಹೇಳಿದರು.
‘‘ವಿಡಿಯೋ ಹಾಗೂ ಮೊಬೈಲ್ ಕಾಲ್‌ಗಳ ಮೂಲಕ ಸರ್ಕಾರಿ ಕೆಲಸ- ಜವಾಬ್ದಾರಿ ನಿಭಾಯಿಸಿದ್ದೇವೆ. ಕ್ವಾರಂಟೈನ್ ಅವಧಿಯಲ್ಲಿ ಓದು, ಬರವಣಿಗೆಗೂ ಅವಕಾಶ ಸಿಕ್ಕಿತು’’ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿಕೊಂಡರು.
‘‘ಲಭ್ಯ ಅವಕಾಶ ಸದ್ಬಳಕೆ ಮಾಡಿಕೊಂಡು ಮತ್ತಷ್ಟು ಚೈತನ್ಯ ಪಡೆದಿದ್ದೇವೆ. ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರೆ, ಇಲಾಖೆ ಹಾಗೂ ಕ್ಷೇತ್ರದ ಕೆಲಸಗಳ ಜತೆಯಲ್ಲಿ ಆಸಕ್ತಿಗೆ ಅನುಗುಣವಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಕಾರಿಯಾಯಿತು’’ ಎಂದು ಸಿ.ಟಿ. ರವಿ ತಮ್ಮ ಅನುಭವ ಹಂಚಿಕೊಂಡರು.
‘‘ಕ್ವಾರಂಟೈನ್ ಎಂದಾಕ್ಷಣ ಜನರು ದಿಗಿಲುಗೊಳ್ಳುವುದು ಬೇಡ. ವೈಯಕ್ತಿಕ ಆರೋಗ್ಯ ಹಾಗೂ ಜನ ಸಮುದಾಯದ ದೃಷ್ಟಿಯಿಂದ ಕಟ್ಟುನಿಟ್ಟಾಗಿ ಪಾಲಿಸಿ, ಲಭ್ಯ ಅವಧಿ ಸದ್ಬಳಕೆ ಮಾಡಿಕೊಳ್ಳಬೇಕು’’ ಎಂದು ಮೂವರೂ ಸಚಿವರು ಸಲಹೆ ನೀಡಿದರು.