ಮಣ್ಣಿನ ಸೊಗಡು ಪರಿಚಯಿಸುವ ಕಾರ್ಯ

blm (1)
Published on

ಕಾರ್ಕಳ: ಕೆಸರಿನ ಆಟಗಳು ಬರೀ ಮನರಂಜನೆಗಾಗಿ ಮಾತ್ರ ಸೀಮಿತವಾಗಿಲ್ಲ. ಈ ನೆಲದ ಸಂಸ್ಕೃತಿಯನ್ನು ಸಾರುವಂತಿದೆ. ಕೃಷಿ ಪದ್ಧತಿ ಹಾಗೂ ತುಳುವ ಮಣ್ಣಿನ ಸೊಗಡನ್ನು ಪರಿಚಯಿಸುವ ಕೆಲಸಗಳು ಕೆಸರುಗದ್ದೆ ಕ್ರೀಡಾಕೂಟದ ಮೂಲಕ ನಡೆಯಬೇಕಾಗಿದೆ ಎಂದು ಬೆಂಗಳೂರು ಫೆಡರೇಷನ್ ಆಫ್ ಕ್ವಾರಿ ಮತ್ತು ಕ್ರಷರ್ ಓನರ್ಸ್ ಅಸೋಸಿಯೇಷನ್‌ನ ರಾಜ್ಯಾಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು. ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವತಿಯಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹಿರ್ಗಾನ ಗ್ರಾಮದ ಬೆಂಗಾಲ್ ಗದ್ದೆಯಲ್ಲಿ ಮಂಗಳವಾರ ನಡೆದ ‘ಕ್ರಿಯೇಟಿವ್ ಕೆಸರ್ಡೊಂಜಿ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೆಳ್ಳಾರು ಪಲಾಯಿ ಬಾಕ್ಯಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಯೋಗೀಶ್ ಕಿಣಿ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಕ್ರೀಡೆ, ಮಣ್ಣು, ಪ್ರಕೃತಿಯ ಸಂಪರ್ಕ ಕಡಿಮೆ ಆಗುತ್ತಿದೆ. ಇಂತಹ ಕೆಸರ್ಡೊಂಜಿ ದಿನ ಕಾರ್ಯಕ್ರಮಗಳು ಮಕ್ಕಳಿಗೆ ನೈಜ ಅನುಭವಗಳನ್ನು ನೀಡುವ ಮೂಲಕ ಪ್ರಕೃತಿಯೊಂದಿಗೆ ಅವರ ಸಂಬಂಧವನ್ನು ಪುನರ್ ಸ್ಥಾಪಿಸುತ್ತದೆ ಎಂದರು. ಸಹ ಸಂಸ್ಥಾಪಕ ಆದರ್ಶ ಎಂ.ಕೆ., ಹಿರ್ಗಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಉದ್ಯಮಿ ಸರ್ವೋತ್ತಮ ಕಡಂಬ ಉಪಸ್ಥಿತರಿದ್ದರು. ಸಹ ಸಂಸ್ಥಾಪಕ ಡಾ.ಗಣನಾಥ ಶೆಟ್ಟಿ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. *ಸಮಾರೋಪ ಸಮಾರಂಭ: ಸಂಸ್ಥಾಪಕ ವಿಮಲ್ ರಾಜ್ ಜಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಜೀವನ ಶೈಲಿಯು ಪಾಠ ಪುಸ್ತಕದ ಹೊರಗಿನ ಶಿಕ್ಷಣವನ್ನು ನೀಡುತ್ತದೆ. ಆಧುನಿಕ ದಿನಚರಿಯಲ್ಲಿ ಮಕ್ಕಳಿಗೆ ಶಾರೀರಿಕ ಚಟುವಟಿಕೆ ಕಡಿಮೆಯಾಗಿದೆ. ಆದರೆ ಈ ಕೆಸರಿನ ಆಟಗಳು ಕೇವಲ ಮನರಂಜನೆ ಮಾತ್ರವಲ್ಲ, ಶಕ್ತಿಯ ಪೂರಕವೂ ಹೌದು ಎಂದರು. ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ಮಾತನಾಡಿದರು. ಸುನೀಲ್‌ಕುಮಾರ್ ಜಿ., ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್, ಉದ್ಯಮಿ ಜಗದೀಶ್, ಚೇತನ್ ಉಪಸ್ಥಿತರಿದ್ದರು. ಸಹ ಸಂಸ್ಥಾಪಕ ಅಶ್ವತ್ಥ್ ಎಸ್.ಎಲ್. ಸ್ವಾಗತಿಸಿದರು. ಉಪನ್ಯಾಸಕ ಲೋಹಿತ್ ಎಸ್.ಕೆ., ಪ್ರಿಯಾಂಕಾ ತೀರ್ಥರಾಮ ಕಾರ್ಯಕ್ರಮ ನಿರ್ವಹಿಸಿದರು.

ಕೃಷಿಕರಿಗೆ ಗೌರವ

ಹಿರ್ಗಾನ ಗ್ರಾಮದ ಪ್ರಗತಿಪರ ಕೃಷಿಕರಾದ ಸತ್ಯನಾರಾಯಣ ಪಡ್ರೆ, ಸದಾನಂದ ಶೆಟ್ಟಿಗಾರ್, ವಿಠಲ್ ನಾಯಕ್ ಅವರನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net