ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತ

byn (1)
Published on

ವಿಜಯವಾಣಿ ಸುದ್ದಿಜಾಲ ಬೈಂದೂರು ಮೇ ತಿಂಗಳ ತನಕ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಿದ್ದು, ತಾಲೂಕು ವ್ಯಾಪ್ತಿಯಲ್ಲಿ ಐಟಿ ಹಾಗೂ ಜಿಎಸ್‌ಟಿ ಗೊಂದಲದಿಂದಾಗಿ ಕೆಲವು ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ ಹೇಳಿದರು. ಬೈಂದೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೈಂದೂರಿನಲ್ಲಿ ನಿರ್ವಾಣ ಹಂತದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ನೀರು ಸರಬರಾಜು ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ. ಹೆಚ್ಚುವರಿ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಯುವನಿಧಿ ನೋಂದಣಿ ಪ್ರಕ್ರಿಯೆ ಪೋಸ್ಟ್‌ರ್‌ಗಳನ್ನು ಬಿಡುಗಡೆ ಮಾಡಲಾಯಿತು. ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಸುರೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ವಾಲತಿ ಶಿವಾನಂದ, ರಾಮ ಪೂಜಾರಿ, ಸೂರ್ಯಕಾಂತಿ ಡಿ., ಅಣ್ಣಪ್ಪ ಶೆಟ್ಟಿ, ದೇವದಾಸ್ ವಿ.ಜೆ., ಬಾಬು ದೇವಾಡಿಗ, ರಾಮಚಂದ್ರ ಖಾರ್ವಿ, ಮುಕ್ರಿ ಮೊಹಮ್ಮದ್ ಅಲ್ತಾಫ್, ಮೆಸ್ಕಾಂ, ಕೆಎಸ್‌ಆರ್‌ಟಿಸಿ, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕಿಗೆ 206 ಕೋಟಿ ರೂ.

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಇದುವರೆಗೆ ಬೈಂದೂರು ತಾಲೂಕಿಗೆ ಸುವಾರು 206.57 ಕೋಟಿ ರೂ. ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಿಂದ 107.68 ಕೋಟಿ, ಗೃಹಜ್ಯೋತಿಗೆ 42.48 ಕೋಟಿ ರೂ., ಅನ್ನಭಾಗ್ಯ ಯೋಜನೆಗೆ 191,50,330 ರೂ., ಯುವನಿಧಿಗೆ 90.36ಲಕ್ಷ ರೂ. ಜಮೆ ಆಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ 1.48 ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು, 53.58 ಕೋಟಿ ರೂ. ವೆಚ್ಚವಾಗಿದೆ ಎಂದು ಮೋಹನ್ ಪೂಜಾರಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net