

School: ಸರ್ಕಾರಿ ಶಾಲೆಯೊಂದರ ನಿರ್ಲಕ್ಷ್ಯದಿಂದ 2 ನೇ ತರಗತಿಯ ವಿದ್ಯಾರ್ಥಿಯನ್ನು ತರಗತಿಯಲ್ಲೇ ಬಿಟ್ಟು ಬೀಗ ಹಾಕಿದ್ದು, ಅಲ್ಲಿಂದ ಬಾಲಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ವೇಳೆ ಕಿಟಗಿಯಲ್ಲಿರುವ ಕಬ್ಬಿಣದ ಸರಳುಗಳಲ್ಲಿ ಸಿಲುಕಿಕೊಂಡಿರುವ ಘಟನೆ ಒಡಿಶಾದ ಕಿಯೋಂಜರ್ ಜಿಲ್ಲೆಯ ಶಾಲೆಯಲ್ಲಿ ನಡೆದಿದೆ.
ಜ್ಯೋತ್ಸ್ನಾ ದೇಹೂರಿ (8 ) ಸಂತ್ರಸ್ತ ಬಾಲಕಿ ಎಂದು ತಿಳಿದುಬಂದಿದೆ. ಬನ್ಸ್‌ಪಾಲ್ ಬ್ಲಾಕ್‌ನ ಅಂಜರ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಶಾಲೆಯ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಿದ್ದಾರೆ.
ಸುದ್ದಿಮೂಲಗಳ ಪ್ರಕಾರ, ಜಿಲ್ಲಾ ಶಿಕ್ಷಣ ಅಧಿಕಾರಿ ನಡೆಸಿದ ವಿಚಾರಣೆಯಲ್ಲಿ 8 ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಶಿಕ್ಷಕರು ಸಂಜೆ 4 ಗಂಟೆಗೆ ಶಾಲಾ ಕಟ್ಟಡಕ್ಕೆ ಬೀಗ ಹಾಕಲು ಸೂಚಿಸಿದ್ದರು ಎಂದು ವರದಿಯಾಗಿದೆ.
ಇನ್ನು ಬಾಲಕಿ ಮನೆಗೆ ಹಿಂತಿರುಗದ ಕಾರಣ ಆಕೆಯ ಕುಟುಂಬ ಅವಳನ್ನು ರಾತ್ರಿಯಿಡೀ ಹುಡುಕಲು ಪ್ರಾರಂಭಿಸಿದ್ದರು. ಈ ವೇಳೆ ಗ್ರಾಮಸ್ಥರು ಆಕೆ ಸಹಾಯಕ್ಕಾಗಿ ಕೂಗಿ ಅಳುತ್ತಿರುವಾಗ ತರಗತಿಯ ಕಿಟಕಿಯ ಸರಳುಗಳಲ್ಲಿ ತಲೆ ಸಿಕ್ಕಿಕೊಂಡಿದ್ದನ್ನು ನೋಡಿದ್ದಾರೆ. ತದನಂತರ ಬಾಲಕಿಯನ್ನು ಗ್ರಿಲ್ನ್ನು ಬಗ್ಗಿಸಿ ಆಕೆಯನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಮುಖ್ಯೋಪಾಧ್ಯಾಯರ ನಿರ್ಲಕ್ಷಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕಿಯೋಂಜಾರ್ ಜಿಲ್ಲಾಡಳಿತವು ಮುಖ್ಯೋಪಾಧ್ಯಾಯ ಗೌರಿಹರಿ ಮಹಾಂತ್ ಅವರನ್ನು ತ್ವರಿತವಾಗಿ ಅಮಾನತುಗೊಳಿಸಿದ್ದಾರೆ. ಇನ್ನು ಬಾಲಕಿ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಶಾಲಾ ಮತ್ತು ಸಮೂಹ ಶಿಕ್ಷಣ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ.
(ಏಜೆನ್ಸೀಸ್)