ಕೋಟ: ಶ್ರೀ ಶಂಕರರು ಕ್ರಿ.ಶ. 820ರಲ್ಲಿಯೇ ಭಾರತದ ನಾಲ್ಕು ಕಡೆಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಭಾರತದಲ್ಲಿ ಅದ್ವೈತ ಸಿದ್ಧಾಂತವನ್ನು ಶಾಶ್ವತವಾಗಿ ನೆಲೆಗೊಳಿಸಿ ಇಂದಿಗೂ ಜಗತ್ತಿನಲ್ಲಿ ವೇದ ಧರ್ಮ ಶ್ರೇಷ್ಠವಾಗಿಸುವಲ್ಲಿ ಹೋರಾಡಿದ ಅಪ್ರತಿಮ ಸಾಧನಾ ಮೂರ್ತಿ ಎಂದು ಸಂಸ್ಕೃತ ಶಿಕ್ಷಕ ಡಾ. ಜಯ ಶಂಕರ ಕಂಗಣ್ಣಾರು ಪ್ರತಿಪಾದಿಸಿದರು.

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನ ಹಾಗೂ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಳ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಂಕರಾಚಾರ್ಯರು ತಮ್ಮದೇ ಶಕ್ತಿಯಿಂದ ಸನಾತನ ಧರ್ಮಕ್ಕೆ ಮರುಜೀವ ನೀಡಿದವರು. ಇಂತಹ ಪುಣ್ಯ ಪುರುಷರ ಜಯಂತಿ ಆಚರಣೆಯಿಂದ ನಮ್ಮಲ್ಲಿ ವಿಶೇಷವಾದ ಶಕ್ತಿ ಹುಟ್ಟಿ ಕೊಳ್ಳುತ್ತದೆ ಎಂದರು.
ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಂ.ಶಿವರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ವಸಂತ ವೇದ ಶಿಬಿರದ ಸುವಾರು ಐನೂರು ವಟುಗಳು ಹಾಗೂ ಬ್ರಾಹ್ಮಣ ಸವಾಜದ ಪ್ರಮುಖರು ಉಪಸ್ಥಿತರಿದ್ದರು. ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ ವಂದಿಸಿದರು. ಸಭಾದ ಕಾರ್ಯದರ್ಶಿ ಕೆ.ರಾಜಾರಾಮ ಐತಾಳ ನಿರೂಪಿಸಿದರು.