ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು: ಆರೆಸ್ಸೆಸ್ಸ್ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಹೇಳಿಕೆ

vsk
Published on

ಬೆಂಗಳೂರು: ಸ್ವಾತಂತ್ರ್ಯ ಹೋರಾಟವನ್ನು ಅವಲೋಕಿಸಿದಾಗ ಸಾಮಾನ್ಯ ಜನರಲ್ಲಿ ದೇಶಭಕ್ತಿ, ಸ್ವದೇಶಾಭಿಮಾನದ ಕಿಚ್ಚು ಮತ್ತು ಹೋರಾಟದ ಜ್ವಾಲೆ ಸದಾ ಪ್ರಜ್ವಲಿಸುವಂತೆ ಮಾಡಿದ ಶ್ರೇಯಸ್ಸು ಅಂದಿನ ಕಾಲಘಟ್ಟದ ಪತ್ರಿಕೆಗಳಿಗೆ ಸೇರುತ್ತದೆ ಎಂದು ಆರೆಸ್ಸೆಸ್ಸ್ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಹೇಳಿದ್ದಾರೆ.

ವಿಶ್ವ ಸಂವಾದ ಕೇಂದ್ರ(ವಿಎಸ್‌ಕೆ) ಕರ್ನಾಟಕ ಘಟಕ, ಭಾನುವಾರ ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಎಸ್‌ಕೆ ಮಾಧ್ಯಮ ಪ್ರಶಸ್ತಿ-2025’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವವಾಗಿತ್ತು. ಮಾಧ್ಯಮಗಳಿಲ್ಲದ ಸಮಾಜ ಮತ್ತು ಪ್ರಜಾಪ್ರಭುತ್ವವನ್ನು ಊಹಿಸಲು ಸಾಧ್ಯವಿಲ್ಲ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮಾಧ್ಯಮಗಳ ಪಾತ್ರ ಪ್ರಮುಖ. ಸರ್ಕಾರಗಳು ತಪ್ಪು ಮಾಡಿದಾಗ ಎಚ್ಚರಿಸುವ ಕೆಲಸವನ್ನು ಮಾಡುತ್ತಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಅಂದಿನ ಕಾಲದ ಹೊಸ ತಂತ್ರಜ್ಞಾನ ಮುದ್ರಣ ತಂತ್ರಜ್ಞಾನ, ಅಂಬೇಡ್ಕರ್, ಗಾಂಧಿ, ಗೋಖಲೆ, ದಾದಾಬಾಯಿ ನವರೋಜಿ ಸೇರಿ ಬಹಳಷ್ಟು ಹೋರಾಟಗಾರರು ಈ ತಂತ್ರಜ್ಞಾನವನ್ನು ಅರ್ಥಪೂರ್ಣವಾಗಿ ಬಳಕೆ ಮಾಡಿಕೊಂಡರು. ಆ ಮೂಲಕ ಹೊಸ ಪತ್ರಿಕೆಗಳನ್ನು ಹೊರತಂದರು. ಅಂದಿನ ಕಾಲಘಟ್ಟದಲ್ಲಿ ಪತ್ರಿಕಾ ವೃತ್ತಿಯಾಗಲಿ, ಸ್ವಾತಂತ್ರ್ಯ ಹೋರಾಟವಾಗಲಿ ಬೇರೆ ಎನ್ನುವ ಮನೋಭಾವ ಇರಲಿಲ್ಲ ಎಂದರು.

ಬ್ರಿಟಿಷ್ ಸರ್ಕಾರ ಪತ್ರಿಕೆಗಳ ಮೇಲೆ ನಿಯಂತ್ರಣ ಸಾಧಿಸಲು ಆರಂಭಿಸಿದ ದಿನಗಳಲ್ಲಿ ಪತ್ರಿಕೆ ಭೂಗತ ಪ್ರದೇಶಗಳಿಂದ ಜನರಿಗೆ ತಲುಪುತ್ತಿದ್ದವು. 1921ರಿಂದ 31ರವರೆಗೆ ‘ಸಮಾಚಾರ’ಎನ್ನುವ ಪತ್ರಿಕೆ ಉತ್ತರ ಕರ್ನಾಟಕದಲ್ಲಿ ಆರಂಭವಾಯಿತು. ಇದರ ಮೂಲ ಹುಡುಕುವುದೇ ಪೊಲೀಸರಿಗೆ ಕಷ್ಟವಾಗಿತ್ತು. ಬ್ರಿಟಿಷ್ ಅಧಿಕಾರಿಗಳ ಅಧಿಕಾರದ ದರ್ಪ, ದುರಾಡಳಿತದ ಬಗ್ಗೆ ಪತ್ರಿಕೆಗಳಲ್ಲಿ ಕಟುವಾಗಿ ಟೀಕಿಸಲಾಗುತ್ತಿತ್ತು. ತುರ್ತು ಪರಿಸ್ಥಿತಿಯಲ್ಲಿ ಕೂಡ ಇದೆ ರೀತಿ ಭೂಗತ ಪತ್ರಿಕೆಗಳು ಹೊರಬಂದು ಜಾಗೃತಿ ಮೂಡಿಸಿದ್ದವು ಎಂದು ಸುಧೀರ್ ತಿಳಿಸಿದರು.

ಹಿರಿಯ ಪತ್ರಕರ್ತರಾದ ರವಿ ಹೆಗಡೆ, ಕೆ.ಎಸ್.ಜಯಲಕ್ಷ್ಮೀ, ರಾಮು ಪಾಟೀಲ್, ಎ.ಹರಿಪ್ರಸಾದ್, ರಾಧಾಕೃಷ್ಣ ಕಲ್ಚಾರ್ ಮತ್ತು ಮಮ್ತಾಜ್ ಅಬ್ದುಲ್ ನೆಲ್ಯಡ್ಕ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶ್ವ ಸಂವಾದ ಕೇಂದ್ರದ ಡಾ.ವಿ.ಶ್ರೀಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net