

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಇತ್ತೀಚಿಗೆ ಹೃದಯಾಘಾತ ಪ್ರಕರಣದಿಂದ ಸಾವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲಿ ಹೃದಯಾಘಾತದಿಂದ ಜಿಲ್ಲೆಯಲ್ಲಿ 18 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ, ಖ್ಯಾತ ಹೃದಯರೋಗ ತಜ್ಞ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್.ಮಂಜುನಾಥ್ ಅವರು ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತರಲು ತೀರ್ಮಾನಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಆಲೂರು, ಅರಕಲಗೂಡು ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಟೆಮಿ ಯೋಜನೆ ಜಾರಿ ಮಾಡುವಂತೆ ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ಅನಿಲ್ ಕುಮಾರ್ ಅವರು ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಎದೆ ನೋವಿನಿಂದ ಬಳಲಿ ಬಂದವರಿಗೆ ಜಯದೇವ ಆಸ್ಪತ್ರೆ ಸಹಯೋಗ ದೊಂದಿಗೆ ಚಿಕಿತ್ಸೆ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಪ್ರಧಾನಿಯವರ ಭೇಟಿಗಾಗಿ ಈಗಾಗಲೇ ಅವರು ಪ್ರಧಾನಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸದ್ಯದಲ್ಲೇ ಅವರಿಗೆ ಪ್ರಧಾನಿಯವರ ಭೇಟಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಆ ಭೇಟಿಯಲ್ಲಿ ಹಾಸನ ಜಿಲ್ಲೆಯಲ್ಲಾಗಿರುವ ಹೃದಯಾಘಾತದ ಪ್ರಕರಣಗಳು ಹಾಗೂ ಹೃದಯಾಘಾತಕ್ಕೊಕೆ ಒಳಗಾದವರಿಗೆ ನೀಡಲಾಗುವ ತುರ್ತು ಚಿಕಿತ್ಸೆಯ ಸ್ಟೆಮಿ ಯೋಜನೆಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ಮೋದಿಯೊಂದಿಗೆ ಮಾತುಕತೆ ನಡೆಲಿದ್ದಾರೆ ಎನ್ನಲಾಗಿದೆ.
ಇದು ಹಬ್ ಆ್ಯಂಡ್ ಸ್ಟ್ರೋಕ್ ಮಾಡೆಲ್. ಹೃದಯಾಘಾತಕ್ಕೊಳಗಾಗಿ ಬರುವ ವ್ಯಕ್ತಿಗಳಿಗೆ ತುರ್ತು ವೈದ್ಯಕೀಯ ನೆರವು ನೀಡಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಬಲ್ಲಂಥ ಚಿಕಿತ್ಸಾ ವಿಧಾನವಾಗಿದೆ. ಸದ್ಯಕ್ಕೆ ರಾಜ್ಯದ 86 ತಾಲೂಕು ಆಸ್ಪತ್ರೆಗಳಲ್ಲಿ ಈ ಸೌಲಭ್ಯವಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಇದನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ.
(ಏಜೆನ್ಸೀಸ್)
ಹಾಸನ ಜಿಲ್ಲೆಯಲ್ಲಿ 'ಸ್ಟೆಮಿ' ಯೋಜನೆ ಇಲ್ಲದಿರುವುದೇ ಹೃದಯಾಘಾತದಿಂದ ಸಾವನಪ್ಪುತ್ತಿರುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿರಬಹುದು ಎಂದು ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಜೊತೆಗೆ ಸ್ಟೆಮಿ ಯೋಜನೆಯನ್ನು ಹಾಸನ ಜಿಲ್ಲೆಯಲ್ಲಿ ತಕ್ಷಣ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.