

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೂರು ಮುಖ್ಯ ರಸ್ತೆಯಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಕಾಳಿಕಾಂಬಾ, ಹೊಯ್ಯಣ ಭಾಗದ ರಿಂಗ್‌ರೋಡ್‌ನ ಅಭಿವೃದ್ಧಿ ಅನೇಕ ವರ್ಷಗಳಿಂದ ಕನಸಾಗಿಯೇ ಉಳಿದಿದೆ.
ಆಲೂರಿನ ಸರ್ಕಾರಿ ಪ್ರೌಢಶಾಲೆ ಬಳಿಯಿಂದ ಶ್ರೀ ಕಾಳಿಕಾಂಬಾ ನಗರ ಮೂಲಕ ಆಲೂರು ಪೇಟೆಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ಇದಾಗಿದ್ದು, ನೂರಾರು ಸವಾರರು ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಅಪಾಯವಿದೆ. ನಿತ್ಯವೂ ಒಂದೆರಡು ಬೈಕ್‌ಗಳು ಆಯತಪ್ಪಿ ಅಥವಾ ಸ್ಕಿಡ್ ಆಗಿ ಬೀಳುವುದು ಮಾಮೂಲಾಗಿದೆ.
ಡಾಮರೀಕರಣವಾಗದೇ ಸುಮಾರು ಎರಡು ದಶಕಗಳೇ ಕಳೆದಿದೆ. ಜಲ್ಲಿ ಕಲ್ಲುಗಳೆಲ್ಲವೂ ಕಿತ್ತು ಹೋಗಿದ್ದು, ದೊಡ್ಡ ದೊಡ್ಡ ಹೊಂಡಗಳೂ ನಿರ್ಮಾಣವಾಗಿವೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿ ಸಂಚಾರ ಅಪಾಯಕಾರಿಯಾಗಿದೆ.
ಆಲೂರಿನ ಪ್ರೌಢಶಾಲೆ ಬಳಿಯಿಂದ ನಗರದ ತನಕವಿರುವ ರಿಂಗ್‌ರೋಡ್ ಸುಮಾರು 3 ಕಿ.ಮೀ. ಅಂತರವಿದ್ದು, ಸರಸ್ವತಿ ಶಾಲೆ, ಬಂಗ್ಲೆ ಶಾಲೆ, ಬಾಂಧವ್ಯ ಬಳಗದ ಸರ್ಕಲ್, ಶ್ರೀ ಕಾಳಿಕಾಂಬಾ ನಗರ, ಹೊಯ್ಯಣ, ಒಪ್ಪಟ್ಟೆ, ವಾಟೆಕಡಿಗೆ ಸಂಪರ್ಕಿಸುತ್ತದೆ. 200ಕ್ಕೂ ಹೆಚ್ಚು ಮನೆಗಳು ಇಲ್ಲಿದ್ದು, ನಿತ್ಯ ನೂರಾರು ಮಂದಿ ಇದೇ ರಸ್ತೆ ಆಶ್ರಯಸಿದ್ದಾರೆ. ಈಗಾಗಲೇ ಮಳೆ ಸುರಿಯುತ್ತಿದ್ದು, ಮಳೆಗಾಲ ಆರಂಭಕ್ಕೂ ಮೊದಲೇ ರಸ್ತೆಗೆ ಡಾಮರೀಕರಣ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
15 ವರ್ಷಗಳ ಹಿಂದೆ ಈ ರಸ್ತೆ ಡಾಮರೀಕರಣಗೊಂಡಿದ್ದು, ಬಳಿಕ ರಸ್ತೆಯ ಅಭಿವೃದ್ಧಿ ಕುರಿತು ಸ್ಥಳೀಯಾಡಳಿತ ಗಮನ ಹರಿಸಿರಲಿಲ್ಲ. ಸ್ಥಳೀಯರ ಒತ್ತಾಯದ ಮೇರೆಗೆ ಮೂರು ವರ್ಷಗಳ ಹಿಂದೆ ಶಾಸಕರಾಗಿದ್ದ ಬಿ.ಎಂ.ಸುಕುಮಾರ್ ಶೆಟ್ಟಿ ಮುತುವರ್ಜಿಯಲ್ಲಿ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಈ ಅನುದಾನ ತೇಪೆ ಹಾಕಲಷ್ಟೇ ಸಾಧ್ಯವಾಗಿದ್ದು, ಈಗ ಮತ್ತೊಮ್ಮೆ ಬೃಹತ್ ಹೊಂಡಗಳು ನಿರ್ಮಾಣವಾಗಿವೆ.
ಆಲೂರಿನ ರಿಂಗ್‌ರೋಡ್ ಅಭಿವೃದ್ಧಿಗೆ ದೊಡ್ಡಮಟ್ಟದ ಅನುದಾನದ ಅಗತ್ಯವಿದ್ದು, ಪಂಚಾಯಿತಿ ಅನುದಾನದಲ್ಲಿ ರಸ್ತೆ ಅಭಿವ್ದೃಧಿ ಕಷ್ಟ. ಅದಕ್ಕಾಗಿ ಪ್ರಾಕೃತಿಕ ವಿಕೋಪದಡಿ ಅಭಿವೃದ್ಧಿಪಡಿಸುವಂತೆ ಪಂಚಾಯಿತಿ ವತಿಯಿಂದ ಮನವಿ ಸಲ್ಲಿಸಲಾಗಿದೆ. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಜೇಶ್ ದೇವಾಡಿಗ, ಅಧ್ಯಕ್ಷ, ಆಲೂರು ಗ್ರಾಮ ಪಂಚಾಯಿತಿ
* ಹರಸಾಹಸದಿಂದ ವಾಹನಗಳ ಸಂಚಾರ, ಪಾದಚಾರಿಗಳಿಗೂ ಸಂಕಷ್ಟ *ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಅಪಾಯ*ಗುಂಡಿಗಳಲ್ಲಿ ಮಳೆ ನೀರು ನಿಂತಾಗ ಅಪಾಯ ಸಂಭವ ಸಾಧ್ಯತೆ *ಮಳೆಗಾಲಕ್ಕೂ ಮೊದಲು ದುರಸ್ತಿಗೆ ಸ್ಥಳೀಯರ ಆಗ್ರಹ