More

  ಏಜೆನ್ಸಿಗೆ ಬ್ರೇಕ್ ಬಿದ್ರಷ್ಟೇ ಮೀಸಲು ಫಸಲು

  | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

  ಹೊರಗುತ್ತಿಗೆಯಲ್ಲೂ ಮೀಸಲಾತಿ ಜಾರಿಗೊಳಿಸಿರುವ ತೀರ್ಮಾನ ಫಲಪ್ರದವಾಗಬೇಕೆಂದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿರುವ ಖಾಸಗಿ ಏಜೆನ್ಸಿಗಳು ಹಾಗೂ ಅಧಿಕಾರಿಗಳ ಒಳಒಪ್ಪಂದದ ಆಟಾಟೋಪಕ್ಕೆ ಸಂಪೂರ್ಣ ಕಡಿವಾಣ ಬೀಳಲೇಬೇಕು. ಇಲ್ಲವಾದಲ್ಲಿ ಮೀಸಲಾತಿ ಯಿಂದಲೂ ಯಾವುದೇ ಪ್ರಯೋಜನ ಆಗುವುದಿಲ್ಲವೆಂಬ ಅಭಿಪ್ರಾಯ ಸರ್ಕಾರಿ ನೌಕರ ವರ್ಗದಲ್ಲಿದೆ. ಹೊರಗುತ್ತಿಗೆಯಲ್ಲಿ ಮೀಸಲಾತಿ ತಂದಿರುವುದೇ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ತಡೆ ಹಾಕುವ ಪ್ರಯತ್ನವಾಗಿದೆ. ಸರ್ಕಾರ ಕೂಡಲೇ ಖಾಲಿ ಹುದ್ದೆ ಭರ್ತಿ ಮಾಡಿದರಷ್ಟೇ ರಾಜ್ಯದ ಜನತೆಗೆ ಉತ್ತಮ ಗುಣಮಟ್ಟದ ಸರ್ಕಾರಿ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ನೌಕರರು ಹೇಳುತ್ತಾರೆ. ಆಡಳಿತ ವೆಚ್ಚ ತಗ್ಗಿಸಬೇಕೆಂಬ ವಿಶ್ವಬ್ಯಾಂಕ್ ಸಲಹೆಯ ಮೇರೆಗೆ ಖಾಲಿ ಹುದ್ದೆ ಭರ್ತಿ ಮಾಡದೆ ಹೊರ ಗುತ್ತಿಗೆ ನೀಡಲಾಗುತ್ತದೆ.

  ಇದರಿಂದ ವೆಚ್ಚವೇನು ಕಡಿಮೆಯಾಗುತ್ತಿಲ್ಲ. ಬದಲಾಗಿ ಅಕ್ರಮದ ಜತೆಗೆ ಸರ್ಕಾರಿ ಸೇವೆಯ ಗುಣಮಟ್ಟ ಕುಸಿತಕ್ಕೆ ಕಾರಣವಾಗಿದೆ. ಸರ್ಕಾರದ ಸಚಿವಾಲಯದಲ್ಲಿ ಸುಮಾರು 3 ಸಾವಿರ ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ರಾಜ್ಯಾದ್ಯಂತ ವಿವಿಧ ಇಲಾಖೆಗಳಲ್ಲಿ ಒಂದು ಲಕ್ಷ ಹೊರಗುತ್ತಿಗೆ ಸಿಬ್ಬಂದಿ ಇರಬಹುದೆಂಬ ಅಂದಾಜಿದೆ. ಆದರೆ ಆಡಿಟ್ ಆಗದ ಕಾರಣ ನಿಖರ ಮಾಹಿತಿ ಸರ್ಕಾರಕ್ಕೆ ಸಿಗುತ್ತಿಲ್ಲ.

  ಇದೊಂದು ದಂಧೆ: ಸರ್ಕಾರಕ್ಕೆ ಸೇವೆ ನೀಡಲು ಖಾಸಗಿ ನೇಮಕಾತಿ ಏಜೆನ್ಸಿಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿವೆ. ಬಹುತೇಕ ಸಂಸ್ಥೆಗಳು ಸರ್ಕಾರಕ್ಕೆ ಹಾಗೂ ನೌಕರರಿಗೆ ಮೋಸ ಮಾಡುವುದನ್ನೇ ದಂಧೆಯಾಗಿಸಿಕೊಂಡಿವೆ. ನೌಕರರು ಹಾಗೂ ಸರ್ಕಾರಕ್ಕೆ ಮೋಸ ಮಾಡುವ ಸಂಸ್ಥೆಗಳೇ ಹೆಚ್ಚಾಗಿವೆ. ಇದಕ್ಕೆ ಸರ್ಕಾರದಲ್ಲಿನ ಕೆಲ ಹಿರಿಯ ಅಧಿಕಾರಿಗಳ ಕುಮ್ಮಕ್ಕು ಇದೆ ಎಂದು ಹೇಳಲಾಗುತ್ತಿದೆ. ಕೆಲ ಅಧಿಕಾರಿಗಳೇ ಬೇನಾಮಿ ಹೆಸರಿನಲ್ಲಿ ಇಂತಹ ಏಜೆನ್ಸಿಗಳನ್ನು ನಡೆಸುತ್ತಿದ್ದು, ಖಾಲಿ ಹುದ್ದೆಗಳ ಭರ್ತಿಗೆ ಅಡ್ಡಿಯಾಗಿದ್ದಾರೆ ಎಂಬ ಆರೋಪವೂ ಇದೆ.

  ಬೊಕ್ಕಸಕ್ಕೆ ನಷ್ಟ: ಸರ್ಕಾರ ಹೊರ ಗುತ್ತಿಗೆ ನೌಕರರಿಗೆ ನೇರವಾಗಿ ವೇತನ ಒದಗಿಸುವುದಿಲ್ಲ. ಬದಲಾಗಿ ಏಜೆನ್ಸಿಗಳಿಗೆ ನೀಡಲಾಗುತ್ತದೆ. ಇದರಿಂದಾಗಿ ವರ್ಷಕ್ಕೆ ಅಂದಾಜು 200 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಇಂತಹ ಏಜೆನ್ಸಿಗಳ ಪಾಲಾಗುತ್ತದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

  ನಿಯಮಾವಳಿ ಎಲ್ಲಿ?: ನೇಮಕಾತಿಗೆ ಸಂಬಂಧಿಸಿದಂತೆ ಖಾಸಗಿ ಏಜೆನ್ಸಿಗಳನ್ನು ನಿಯಂತ್ರಿಸಲು ಕಾರ್ವಿುಕ ಇಲಾಖೆಯಿಂದ 2018ರಲ್ಲಿ ರೂಪಿಸಿದ್ದ ಕರ್ನಾಟಕ ಖಾಸಗಿ ನೇಮಕಾತಿ ಏಜೆನ್ಸಿಗಳು ಅಧಿನಿಯಮ ಸರಿಯಾಗಿ ಅನುಷ್ಠಾನವಾಗಲಿಲ್ಲ. ಆ ನಿಯಮಗಳ ಪ್ರಕಾರ ಹೊರ ಗುತ್ತಿಗೆ ನೇಮಕಾತಿ ನಡೆದರೆ ನೌಕರರು ಹಾಗೂ ಸರ್ಕಾರಕ್ಕೆ ಆಗುವ ನಷ್ಟವನ್ನು ತಪ್ಪಿಸಲು ಸಾಧ್ಯವಿದೆ ಎಂಬ ಅಭಿಪ್ರಾಯವಿದೆ.

  ಧೂಳು ತಿನ್ನುತ್ತಿವೆ ಶಿಫಾರಸುಗಳು: ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದವರೊಬ್ಬರು ಹೊರ ಗುತ್ತಿಗೆ ರದ್ದು ಮಾಡಿ ಖಾಲಿ ಹುದ್ದೆ ಭರ್ತಿ ಮಾಡಬೇಕೆಂದು ಶಿಫಾರಸು ಮಾಡಿದ್ದರು. ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪ ಸಮಿತಿ ಸಹ 2018ರಲ್ಲಿ ಮಾಡಿದ್ದ ಶಿಫಾರಸು ಜಾರಿಗೆ ಬರಲಿಲ್ಲ.

  ನೌಕರರ ಅನುಮಾನವೇನು?: ಹೊರಗುತ್ತಿಗೆಯಿಂದ ಖಾಲಿ ಇರುವ 2.50 ಲಕ್ಷ ಹುದ್ದೆಗಳ ಭರ್ತಿಗೆ ತಡೆ ಬೀಳಲಿದೆ. ಯಾವುದೇ ಉತ್ತರದಾಯಿತ್ವ ಇಲ್ಲದ ಹೊರ ಗುತ್ತಿಗೆ ಪದ್ಧತಿಯನ್ನೇ ರದ್ದು ಮಾಡಬೇಕು ಎಂಬುದು ನೌಕರರ ಒತ್ತಾಯ. ಹೊರ ಗುತ್ತಿಗೆ ನೇಮಕಕ್ಕೆ ವಯೋಮಿತಿ 60 ವರ್ಷ ತನಕ ನೀಡಲಾಗಿದೆ. ಆದರೆ ಉಳಿದ ನೌಕರರಿಗೆ 40 ವರ್ಷಗಳ ಮಿತಿ ಇದೆ. ಇದರಿಂದ ಪರಿಶಿಷ್ಟರಿಗೆ ಅನ್ಯಾಯವಾಗುತ್ತದೆ. 20ಕ್ಕಿಂತ ಕಡಿಮೆ ನೌಕರರ ನೇಮಕಕ್ಕೆ ಮೀಸಲಾತಿ ಅನ್ವಯವಿಲ್ಲವೆಂಬುದು ಸರಿಯಲ್ಲ ಎಂಬ ಅಭಿಪ್ರಾಯ ನೌಕರರಲ್ಲಿದೆ.

  ಸರ್ಕಾರಿ ಏಜೆನ್ಸಿಗೆ ಆಗ್ರಹ: ಸರ್ಕಾರ ಹೊರ ಗುತ್ತಿಗೆ ಸಿಬ್ಬಂದಿ ನೇಮಕ ಮಾಡುವುದೇ ಆದಲ್ಲಿ ಖಾಸಗಿ ಏಜೆನ್ಸಿಗಳನ್ನು ಬಿಟ್ಟು ಕಿಯೋನಿಕ್ಸ್, ಎಂಸಿ ಅಂಡ್ ಎ ಸೇರಿದಂತೆ ವಿವಿಧ ಸರ್ಕಾರಿ ಸರ್ಕಾರಿ ಏಜೆನ್ಸಿಗಳ ಮೂಲಕ ನೇಮಕ ಮಾಡಬೇಕೆಂಬ ಸಲಹೆ ಇದೆ.

  ಹೊರ ಗುತ್ತಿಗೆ ಎಲ್ಲೆಲ್ಲಿ?: ಡಾಟಾ ಎಂಟ್ರಿ ಆಪರೇಟರ್, ಟೈಪಿಸ್ಟ್, ಹೌಸ್ ಕೀಪಿಂಗ್, ಡ್ರೖೆವರ್, ಲಿಫ್ಟ್ ಆಪರೇಟರ್, ಡಿ. ಗ್ರೂಪ್ ನೌಕರ, ಸೆಕ್ಯೂರಿಟಿ, ಕಾರ್ಪೆಂಟರ್, ವೆಲ್ಡರ್, ಮೆಕ್ಯಾನಿಕ್, ಮಾಲಿ, ಅಡುಗೆಯವರು, ವೈರ್​ವುನ್, ಛಾಯಾಗ್ರಾಹಕರು ಹೀಗೆ ವಿವಿಧ ಹುದ್ದೆಗಳಲ್ಲಿದ್ದಾರೆ.

  ನಿಯಂತ್ರಣಕ್ಕಿದ್ದ ನಿಯಮಾವಳಿ

  . ಪ್ರತಿ ವರ್ಷ ಕಡ್ಡಾಯ ನೋಂದಣಿಯಾಗಬೇಕು

  . ಪ್ರತಿ ತಿಂಗಳು ನೌಕರರಿಂದ ಶುಲ್ಕ ಪಡೆಯುವಂತಿಲ್ಲ

  . ಪ್ರತಿ ತಿಂಗಳು ಸರ್ಕಾರಕ್ಕೆ ವರದಿ ಸಲ್ಲಿಸಬೇಕು

  . ಕಾರ್ವಿುಕ ಅಧಿಕಾರಿಗಳು ಪರಿಶೀಲನೆ ನಡೆಸಬಹುದು

  . ನೇಮಕಾತಿಯ ರಿಜಿಸ್ಟ್ರಾರ್ ಹೊಂದಿರಬೇಕು

  . ನೌಕರರಿಗೆ ಪಿಎಫ್, ವಿಮೆ ಪೋಟೋ ಗುರುತಿನ ಚೀಟಿ, ಕನಿಷ್ಠ ವೇತನ ನೀಡಬೇಕು

  . ತಪ್ಪು ಮಾಡಿದರೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ದಂಡ

  ಏಜೆನ್ಸಿಗಳಿಂದ ಮೋಸ ಹೇಗೆ?

  . ಅನೇಕ ಏಜೆನ್ಸಿಗಳಿಗೆ ಸರಿಯಾದ ವಿಳಾಸವೇ ಇಲ್ಲ

  . ನೌಕರರಿಂದ ಮಾಸಿಕ ನೋಂದಣಿ ವೆಚ್ಚ ವಸೂಲಿ

  . ಪ್ರತಿ ತಿಂಗಳು ನೌಕರರ ವೇತನದಲ್ಲಿ ಕಡಿತ

  . ನೌಕರರಿಗೆ ಪಿಎಫ್, ಇಎಸ್​ಐ ಸೌಲಭ್ಯ ನೀಡಲ್ಲ

  . ಒಪ್ಪಂದಕ್ಕಿಂತ ಕಡಿಮೆ ನೌಕರರನ್ನು ಒದಗಿಸುವುದು

  . ಎಷ್ಟು ಏಜೆನ್ಸಿಗಳಿವೆ ಎಂಬ ಮಾಹಿತಿಯೇ ಇಲ್ಲ

  . ಏಜೆನ್ಸಿಗಳ ಕುರಿತು ಸರಿಯಾಗಿ ಆಡಿಟ್ ಆಗುತ್ತಿಲ್ಲ

  ರದ್ದತಿಗೆ ಒತ್ತಾಯ ಏಕೆ?

  . ನೌಕರರಿಗೆ ಉತ್ತರದಾಯಿತ್ವ ಇರುವುದಿಲ್ಲ

  . ನೌಕರರ ಮೇಲ್ವಿಚಾರಣೆ ನಡೆಯುವುದಿಲ್ಲ

  . ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಸಿಗಲ್ಲ

  . ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆ

  . ಲಾಭ ಮಾಡಿಕೊಳ್ಳುವ ಖಾಸಗಿ ಏಜೆನ್ಸಿಗಳು

  . ಹೀಗಾಗಿ ಹೊರಗುತ್ತಿಗೆ ಪದ್ಧತಿ ರದ್ದಾಗಬೇಕು


  ಏಜೆನ್ಸಿಗೆ ಬ್ರೇಕ್ ಬಿದ್ರಷ್ಟೇ ಮೀಸಲು ಫಸಲು ಸರ್ಕಾರ ಒಳ್ಳೆಯ ಉದ್ದೇಶದಿಂದಲೇ ಮೀಸಲಾತಿ ತರುತ್ತಿದೆ. ಆದರೆ ಖಾಲಿ ಹುದ್ದೆ ಭರ್ತಿ ಮಾಡದೇ ಹೊರ ಗುತ್ತಿಗೆ ನೀಡಲೇಬೇಕು ಎಂಬುದಾದರೆ ಖಾಸಗಿ ಏಜೆನ್ಸಿಗಳನ್ನು ಬಿಟ್ಟು ಸರ್ಕಾರಿ ಏಜೆನ್ಸಿಗಳ ಮೂಲಕ ಭರ್ತಿ ಮಾಡುವ ಪರಿಪಾಠ ಆರಂಭಿಸಬೇಕು.

  | ಸಿ.ಎಸ್. ಷಡಾಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

  ಸರ್ಕಾರ ಯಾವುದೇ ಕಾರಣಕ್ಕೂ ಹೊರ ಗುತ್ತಿಗೆ ನೇಮಕ ಮಾಡಲೇಬಾರದು. ಸರ್ಕಾರದಲ್ಲಿ ಖಾಲಿ ಇರುವ 2.50 ಲಕ್ಷ ಖಾಲಿ ಹುದ್ದೆಗಳನ್ನು ಮೊದಲು ಭರ್ತಿ ಮಾಡಬೇಕು.

  – ರಮೇಶ್ ಸಂಗಾ, ಅಧ್ಯಕ್ಷ, ಸಚಿವಾಲಯ ನೌಕರರ ಸಂಘ

  ಹೊರ ಗುತ್ತಿಗೆಯಲ್ಲಿ ಮೀಸಲಾತಿ ತಂದಿರುವುದೇ ಖಾಲಿ ಹುದ್ದೆಗಳ ನೇಮಕಾತಿಗೆ ತಡೆ ಹಾಕುವುದಕ್ಕೆ ಎಂಬ ಅನುಮಾನಗಳಿವೆ. ಆದೇಶದಲ್ಲಿಯೂ ಸಾಕಷ್ಟು ಗೊಂದಲಗಳಿವೆ.

  -ಪಿ. ಗುರುಸ್ವಾಮಿ, ಮಾಜಿ ಅಧ್ಯಕ್ಷ, ಸಚಿವಾಲಯ ನೌಕರರ ಸಂಘ

  ತಮಿಳುನಾಡಿನ ಭಾರೀ ವರ್ಷಧಾರೆ: ಪಥನಾಂತಿಟ್ಟ, ಇಡುಕ್ಕಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts