ಉತ್ಸವ, ಆಯನ, ಯಕ್ಷಗಾನ ಸಂಪನ್ನಗೊಳ್ಳುವ ಪತ್ತನಾಜೆ : ಕೃಷಿ ಚಟುವಟಿಕೆ ಶುರು ಮಾಡುವ ಕಾಲ : ತುಳುನಾಡಿನ ವಿಶಿಷ್ಟ ಆಚರಣೆ

pattanaje
ಕಳೆಂಜ ಗ್ರಾಮದ ಶಿಬರಾಜೆಯ ಪರಪ್ಪುಗುತ್ತುವಿನ ಬೊಲ್ಲಲಗುಡ್ಡೆ ದೃಷ್ಟಿ ಗುಳಿಗನಿಗೆ ಊರವರಿಂದ ನಡೆದ ಪತ್ತನಾಜೆಯ ಅಗೆಲು ಸೇವೆ.
Published on

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

ತುಳುನಾಡು ದೈವಾರಾಧನೆಯ ಪುಣ್ಯಭೂಮಿ. ಪತ್ತನಾಜೆದ ಬುಕ್ಕ ಪರ್ಬ ಇಜ್ಜಿ ಅನ್ನುವ ನಂಬಿಕೆ ತುಳುವರದ್ದು. ಪತ್ತನಾಜೆ ಎನ್ನುವುದು ಸಂಕ್ರಮಣದ ಕಾಲವಾಗಿದ್ದು, ಬೇಸಗೆ ಅಂತ್ಯವಾಗಿ ಮಳೆಗಾಲ ಆರಂಭಗೊಳ್ಳುವ ಕಾಲ. ತುಳುವರ ಪ್ರಕಾರ ಕಾಲಾದಿಯ ನಂತರ ವರ್ಷಾದಿ ಆರಂಭದ ಕಾಲ. ಬೇಸಿಗೆ ಕಾಲದಲ್ಲಿ ಉತ್ಸವ, ಆಯನ, ಅಂಕಗಳು, ಧಾರ್ಮಿಕ ಆಚರಣೆಗಳು ಸಂಪನ್ನಗೊಂಡು ಕೃಷಿ ಚಟುವಟಿಕೆಯತ್ತ ಮನ ಮಾಡುವ ಕಾಲ. ಈ ಸಮಯ ತುಳುನಾಡ ದೈವಗಳು ಕೊನೆಯ ತಂಬಿಲಗಳನ್ನು ಸ್ವೀಕರಿಸಿ ಕಲ್ಲುರ್ಟಿ ದೈವವನ್ನು ಹೊರತುಪಡಿಸಿ ಉಳಿದೆಲ್ಲಾ ದೈವಗಳು ಘಟ್ಟ ಹತ್ತುತ್ತವೆ ಎನ್ನುವ ನಂಬಿಕೆ ಇದೆ. ಇಲ್ಲಿ ಘಟ್ಟ ಹತ್ತುವುದು ಅಂದರೆ ಶಿವನ ಗಣಗಳಾದ ದೈವಗಳು ಕೈಲಾಸ ಏರುವುದು ಎನ್ನುವ ಅರ್ಥ. ದೀಪಾವಳಿ ಪಾಡ್ಯದಿಂದ ಆರಂಭಗೊಳ್ಳುವ ಪರ್ವಗಳು, ನೇಮಗಳು ಈ ಪತ್ತನಾಜೆಯ ದಿವಸ ಅಂದರೆ ತುಳು ತಿಂಗಳಿನ ಬೇಸ 10ರಂದು ಕೊನೆಗೊಳ್ಳುತ್ತದೆ. ಬಳಿಕ ಕಲ್ಲುರ್ಟಿ ದೈವಗಳಿಗೆ ಮಾತ್ರ ತಂಬಿಲ ನೇಮಗಳು ನಡೆಯುತ್ತವೆ.

ಬೀಜ ಬಿತ್ತನೆ

ಪತ್ತನಾಜೆಯು ಬೀಜ ಬಿತ್ತನೆ ಹಾಗೂ ಗದ್ದೆ ಬೇಸಾಯಕ್ಕೆ ಪ್ರಶಸ್ತವಾದ ಕಾಲ. ಪತ್ತನಾಜೆ ಸಮಯದಲ್ಲಿ ಬೀಜ ಬಿತ್ತನೆ ಮಾಡಿದರೆ ಚೌತಿಯ ಸಮಯದಲ್ಲಿ ತೆನೆ ತುಂಬಿ ನವರಾತ್ರಿಯ ಸಂದರ್ಭ ಬೆಳೆ ತೆಗೆಯಬಹುದು ಅನ್ನುವುದು ನಂಬಿಕೆ. ಹಾಗಾಗಿ ಪತ್ತನಾಜೆ ನಾಟಿ ಮಾಡುವ ಸಮಯ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಪ್ರಕೃತಿಯು ಬಿಸಿಲ ಬೇಗೆಯನ್ನು ಕಳೆದು ಮಳೆಗಾಲದ ತಂಪೇರುವ ಸಮಯವಾಗಿರುತ್ತದೆ. ಗೆಡ್ಡೆ ಗೆಣಸುಗಳನ್ನು ಕೂಡ ಈ ಪತ್ತನಾಜೆಯ ಸಂದರ್ಭ ಅಗೆಯುವುದು ರೂಢಿಯಲ್ಲಿದೆ. ವಸಂತ ಮಾಸದಲ್ಲಿ ಮಕರಂದಗಳನ್ನು ಹೀರಿಕೊಂಡ, ಕಾಡಿನಲ್ಲಿರುವ ಜೇನನ್ನು ಕೂಡ ತೆಗೆಯಲು ಪತ್ತನಾಜೆ ದಿನ ಸುಸಮಯ. ತುಳುನಾಡಿನ ಕೃಷಿಕರು ಮಳೆಗಾಲದಲ್ಲಿ ತಮಗೆ ಬೇಕಾದ ಕಟ್ಟಿಗೆ, ಹಪ್ಪಳ ಸಂಡಿಗೆಯಂತಹ ಮಳೆಗಾಲದ ತಿನಿಸುಗಳನ್ನು ತಯಾರಿಸಿ ಇಟ್ಟುಕೊಳ್ಳುವುದರ ಜತೆಗೆ ಕೃಷಿಕರು ತಮ್ಮ ತೋಟದಲ್ಲಿರುವ ಬಸಿ ಕಾಲುವೆಗಳನ್ನು ಸಿದ್ಧಗೊಳಿಸುವುದು ಪತ್ತನಾಜೆ ಸಮಯದ ಕಾರ್ಯಗಳಾಗಿವೆ. ಅಡಕೆ ತೋಟಕ್ಕೆ ಔಷಧಿ ಸಿಂಪಡಣೆಗೂ ಇದು ಸೂಕ್ತ ಕಾಲ.

ಪತ್ತನಾಜೆಗು ಪತ್ತು ಪನಿ ಬೂರೊಡು

ಪತ್ತನಾಜೆ ಅನ್ನುವುದು ಮಳೆ ಆರಂಭದ ಮೊದಲ ದಿನ ಅನ್ನುವುದು ತುಳುವರ ನಂಬಿಕೆ. ತುಳುವಿನ ಬೇಸ ತಿಂಗಳ ಹತ್ತನೇ ದಿನವನ್ನು ಪತ್ತನಾಜೆ ಎನ್ನುತ್ತಾರೆ. ಹೆಚ್ಚಾಗಿ ಇದು ಮೇ 24ರಂದೇ ಬರುವುದಿದ್ದು, ಅಧಿಕಮಾಸದಲ್ಲಿ ಮೇ 25ರಂದು ಬರುವುದುಂಟು. ತುಳುನಾಡಿನ ಆರಾಧ್ಯ ಕಲೆ ಯಕ್ಷಗಾನವೂ ದೀಪಾವಳಿಯ ಸಂದರ್ಭ ಸಂಚಾರಕ್ಕೆ ಹೊರಟು ಪತ್ತನಾಜೆಗೆ ಗೂಡು ಸೇರಿಕೊಳ್ಳುತ್ತದೆ. ಮಳೆಗಾಲವನ್ನು ಸುರಕ್ಷಿತವಾಗಿ ಕಳೆಯಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಪತ್ತನಾಜೆ ಒಂದು ಗಡುವು. ಜತೆಗೆ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳು ಕೊನೆಗೊಳ್ಳುವ ದಿನ. ಮುಂದಿನ ಎರಡೂವರೆ ತಿಂಗಳು ಪೂರ್ತಿ ಕೃಷಿ ಚಟುವಟಿಕೆಗೆ ಮೀಸಲು. ಹಿಂದಿನ ಕಾಲದಲ್ಲಿ ಪತ್ತನಾಜೆ ಮಹತ್ವದ ಸ್ಥಾನವನ್ನು ಪಡೆದಿದ್ದು, ಬೇಸಾಯಕ್ಕೆ ಸುಸಮಯವಾಗಿತ್ತು.

ತುಳುನಾಡಿನಲ್ಲಿ ಜರುಗುವ ಆಚರಣೆಗಳು, ಧಾರ್ಮಿಕ ನಂಬಿಕೆಗಳು ಪ್ರಕೃತಿಗೆ ಹೊಂದಿಕೊಂಡಿರುತ್ತವೆ. ಪ್ರಕೃತಿಯಲ್ಲಿ ಆಗುವಂತಹ ಬದಲಾವಣೆಯೊಂದಿಗೆ ಕೃಷಿ ಕ್ಷೇತ್ರದಲ್ಲಿ ಧಾರ್ಮಿಕ ನೆಲೆಯಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ಬದಲಾವಣೆಯನ್ನು ಕಾಣುತ್ತಾ ವಿಶಿಷ್ಟ ರೀತಿಯಲ್ಲಿ ಆಚರಣೆಗಳನ್ನು ಆಚರಿಸುವ ನಮ್ಮ ತುಳುನಾಡಿನಲ್ಲಿ ಪತ್ತನಾಜೆಯು ಮಹತ್ವದ ಸ್ಥಾನವನ್ನು ಪಡೆದಿದೆ.- ಯೋಗೀಶ ದಾಮಲೆ ಶಿಶಿಲ, ಪ್ರಗತಿಪರ ಕೃಷಿಕರು ಪತ್ತನಾಜೆ ಕೇವಲ ಆಚರಣೆ ಅಲ್ಲದೆ, ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದ ಜೀವನ ಪದ್ಧತಿ. ಹಿಂದಿನ ಕಾಲದಲ್ಲಿ ಪರಿಸರದ ವ್ಯತ್ಯಾಸಗಳಿಗೆ ಹೊಂದಿಕೊಂಡು, ಪ್ರಕೃತಿಗೆ ಪೂರಕವಾಗಿ ಜನರು ಬದುಕುತ್ತಿದ್ದರು. ಇಂದು ಅಭಿವೃದ್ಧಿಯ ನೆಪದಲ್ಲಿ ಪ್ರಕೃತಿಯನ್ನು ಹೆಚ್ಚಾಗಿ ಬಳಸಿಕೊಂಡು ಭವಿಷ್ಯದ ಬಗ್ಗೆ ದೂರಾಲೋಚನೆ ಇಲ್ಲದೆ ಬದುಕುತ್ತಿದ್ದೇವೆ. ಪ್ರಕೃತಿಯಲ್ಲಿ ಜೀವವೈವಿಧ್ಯಗಳು ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಪೂರ್ವಜರು ಹಾಕಿಕೊಟ್ಟ ಪದ್ಧತಿಗಳು, ಆಚರಣೆಗಳು, ನಂಬಿಕೆಗಳು ನಮ್ಮ ಬದುಕಿಗೆ ಬೇರು ಇದ್ದ ಹಾಗೆ.- ಡಾ.ದಿವ ಕೊಕ್ಕಡ, ಕನ್ನಡ ಸಹ ಪ್ರಾಧ್ಯಾಪಕರು, ಶ್ರೀ ಧ.ಮಂ.ಸ್ವಾ.ಮಹಾವಿದ್ಯಾಲಯ, ಉಜಿರೆ ಕಾರ್ತಿಕ ಮಾಸದಲ್ಲಿ ದೇವರ ಸಮೇತ ತಿರುಗಾಟಕ್ಕಾಗಿ ಊರೂರು ಹೋಗುತ್ತಿರುವ ನಾವು ಹತ್ತನಾವಧಿಯಂದು(ಪತ್ತನಾಜೆಯಂದು) ತಿರುಗಾಟವನ್ನು ಅಂತ್ಯಗೊಳಿಸಿ, ಮೇಳ ಮತ್ತೆ ಒಳ ಸೇರುವ ಪದ್ಧತಿ ಇದೆ. ಉತ್ಸವ ರೂಪದಲ್ಲಿ ದೇವರನ್ನು ತಿರುಗಾಟದ ಸಮಯದಲ್ಲಿ ತೆಗೆದುಕೊಂಡು ಹೋಗುವ ಕಾರಣ ಪತ್ತನಾಜೆಯ ನಂತರ ತಿರುಗಾಟ ಮಾಡುವ ಹಾಗಿಲ್ಲ ಎನ್ನುವ ನಂಬಿಕೆ ನಮ್ಮ ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅದನ್ನೇ ಇಂದಿಗೂ ಅನುಕರಿಸಿಕೊಂಡು ಹೋಗುತ್ತಿದ್ದೇವೆ.- ಮೋಹನ ಶಿಶಿಲ, ಪ್ರಧಾನ ಭಾಗವತರು. ಕಟೀಲು ಎರಡನೇ ಮೇಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net