ಕಾಸರಗೋಡು : ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬಾಲಕಿಯ ಅಪಹರಣ ಹಾಗೂ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಆರೋಪಿ ಪಿ.ಎ ಸಲೀಂನನ್ನು ಗುರುವಾರ ತಡರಾತ್ರಿ ಕಾಞಂಗಾಡು ಡಿವೈಎಸ್‌ಪಿ ಕಚೇರಿಗೆ ಕರೆತರಲಾಗಿದ್ದು, ಶುಕ್ರವಾರ ವಿವಿಧ ಪ್ರದೇಶಗಳಿಗೆ ಕರೆದೊಯ್ದು ತನಿಖೆ ನಡೆಸಲಾಯಿತು.
ಕೃತ್ಯವೆಸಗಿದ ಬಳಿಕ ಆರೋಪಿ ಪತ್ನಿಯ ಮನೆಯಲ್ಲಿ ಅಡಗಿ ಕುಳಿತಿದ್ದು, ಪತ್ನಿ ಸಹಿತ ಮನೆಯವರ ಗಮನಕ್ಕೂ ಬಂದಿರಲಿಲ್ಲ. ಐದು ದಿನ ಮನೆಯ ಮಹಡಿ ಮೇಲೆ ಅಡಗಿದ್ದನು. ಬಳಿಕ ಮೈಸೂರಿಗೆ ಪ್ರಯಾಣ ಬೆಳೆಸಿದ್ದು, ಮನೆಯವರ ಜತೆಗೆ ಸಂಪರ್ಕಿಸಲು ಬೇರೆಯವರ ಮೊಬೈಲ್ ಬಳಸುತ್ತಿದ್ದ. ಈತ ತನ್ನ ಪತ್ನಿ ಮೊಬೈಲ್‌ಗೆ ಕರೆ ಮಾಡಿದ ಸಂದರ್ಭ ಸಿಕ್ಕಿಬಿದ್ದಿದ್ದಾನೆ.
ಮೊದಲಿಗೆ ಕೃತ ನಡೆಸಿದ ನಿರ್ಜನ ಪ್ರದೇಶಕ್ಕೆ ಆರೋಪಿಯನ್ನು ಕರೆದೊಯ್ದು ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಸ್ಥಳೀಯರು ಆರೋಪಿ ಮೇಲೆ ಆಕ್ರೋಶ ವ್ಯಕ್ತಪಡಿಸಿ ಹಲ್ಲೆಗೆ ಮುಂದಾಗಿದ್ದಾರೆ. ಬಾಲಕಿ ಮೈಮೇಲೆ ಇದ್ದ ಆಭರಣಗಳನ್ನು ಕಿತ್ತುಕೊಂಡು ಮಾರಾಟ ಮಾಡಿರುವ ಕುರಿತು ಆರೋಪಿ ಬಾಯ್ಬಿಟ್ಟಿದ್ದಾನೆ. ಎರಡು ದಿನಗಳ ಹಿಂದೆ ಮಹಿಳೆ ಕತ್ತಿನಿಂದ ಸರ ಎಗರಿಸಿ ಮಾರಲು ಯತ್ನಿಸಿದ್ದು, ಇದು ಆರೋಪಿ ಪತ್ತೆಗೆ ಸುಳಿವು ನೀಡಿತ್ತು.