ನಟಿ ಚಂದನಾ ಆತ್ಮಹತ್ಯೆಗೆ ಇಲ್ಲಿದೆ ನೋಡಿ ನಿಜವಾದ ಕಾರಣ...

LoveDhoka 2 June 20
Published on

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಚಂದನಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಆಕೆಯ ಪ್ರಿಯಕರ ದಿನೇಶ್ ಕೈಕೊಟ್ಟಿದ್ದೇ ಕಾರಣ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಅವರಿಬ್ಬರ ನಡುವೆ ನಿಜವಾಗಿಯೂ ದೊಡ್ಡ ಜಗಳಕ್ಕೆ, ಮನಸ್ತಾಪಕ್ಕೆ ಕಾರಣವಾಗಿದ್ದ ಅಂಶ ಏನು?

ಆರಂಭದಲ್ಲಿ ಚಂದನಾ ಜತೆ ಚೆನ್ನಾಗಿಯೇ ವರ್ತಿಸುತ್ತಿದ್ದ ದಿನೇಶ್ ಇತ್ತೀಚೆಗೆ ಆಕೆಯ ಪೂರ್ವಾಪರ ಕೆದಕಲು ಶುರು ಮಾಡಿದ್ದ. ‘ನೀನು ಕಾಲೇಜಿನಲ್ಲಿದ್ದಾಗ ಸಖತ್ ಆಟ ಆಡಿದ್ದೀಯಂತೆ... ಅವ್ರ ಜತೆ ಸುತ್ತತಾ ಇದ್ದೆಯಂತೆ, ಇವ್ರ ಜತೆ ಹೋಗ್ತಾ ಇದ್ದೆಯಂತೆ’ ಎಂದೆಲ್ಲ ಪ್ರಶ್ನಿಸತೊಡಗಿದ್ದ. ಇದಕ್ಕೆ ಯಾವುದೇ ಆಧಾರ ಇಲ್ಲದಿದ್ದರೂ ಆಕೆಯಿಂದ ದೂರವಾಗುವುದಕ್ಕಾಗಿಯೇ ಆತ ಹೀಗೆಲ್ಲ ಮಾಡುತ್ತಿದ್ದ ಎನ್ನಲಾಗಿದೆ.

‘ನಾನು ಯಾವ ಆಟನೂ ಆಡಿಲ್ಲ, ಯಾರ ಜತೆಗೂ ತಿರುಗಾಡಿಲ್ಲ. ಎಲ್ಲರಿಗೂ ಹೇಗೆ ಫ್ರೆಂಡ್ಸ್ ಇದ್ದಾರೋ ಹಾಗೆಯೇ ನನಗೂ ಇದ್ದರು. ಅಷ್ಟೆ. ಅದಕ್ಕೆಲ್ಲ ತಪ್ಪು ತಿಳಿಯಬೇಡಿ. ನಿಮ್ಮ ಮನಸ್ಸಿನಲ್ಲಿ ನನ್ನ ಬಗ್ಗೆ ಯಾರು ಈ ತಪ್ಪು ಕಲ್ಪನೆ ಬಿತ್ತಿದ್ದಾರೋ ಅವರನ್ನು ಕರೆದುಕೊಂಡು ಬನ್ನಿ. ಅವರೆದುರಿಗೇ ಎಲ್ಲವೂ ನಿರ್ಧಾರವಾಗಲಿ’ ಎಂದು ಚಂದನಾ ಸವಾಲೆಸೆದಿದ್ದಳು. ಆದರೆ ಆತ ಯಾವತ್ತೂ ಆ ಸವಾಲನ್ನು ಸ್ವೀಕರಿಸಿರಲಿಲ್ಲ ಎಂದು ಹೇಳಲಾಗಿದೆ.

ಚಂದನಾಳಿಂದ ಪಡೆದಿದ್ದ ಐದು ಲಕ್ಷ ರೂ. ಹಣವನ್ನು ವಾಪಸ್ ಕೊಡಲಾಗದೆ, ಮದುವೆಯೂ ಆಗಲು ಸಿದ್ಧನಾಗದೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಆತ ಈ ರೀತಿಯ ಆರೋಪಗಳನ್ನು ಹೊರಿಸುತ್ತಿದ್ದ. ಇದರಿಂದ ಚಂದನಾ ತೀವ್ರ ನೊಂದಿದ್ದಳು. ಮೇ 28ರ ಮಧ್ಯಾಹ್ನ ಆಕೆ ವಿಷ ಸೇವಿಸಿದ ವಿಷಯ ಗೊತ್ತಾಗುತ್ತಲೇ ಆತ ತಡ ಮಾಡದೇ ಆಕೆಯ ಮನೆಗೆ ಹೋಗಿದ್ದ. ಆಸ್ಪತ್ರೆಗೆ ಸೇರಿಸುವಾಗಲೂ ಜತೆಗಿದ್ದ. ಆಕೆ ಮೇ 30ರಂದು ಮೃತಪಟ್ಟ ಸುದ್ದಿ ಗೊತ್ತಾದ ಬಳಿಕ ನಾಪತ್ತೆಯಾಗಿದ್ದಾನೆ ಎಂದು ಈ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net