

ಬೆಂಗಳೂರು: ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣ, ಜಿಕೆವಿಕೆಯಲ್ಲಿ 3 ದಿನಗಳ ಸಸ್ಯ ಸಂತೆ ಆಯೋಜಿಸಿದೆ. ಶುಕ್ರವಾರದಿಂದ ಆರಂಭವಾಗಿರುವ ಸಸ್ಯ ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಂದು (ಭಾನುವಾರ) ತೆರೆ ಬೀಳಲಿದೆ. ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕುಲಪತಿ ಡಾ.ವಿಷ್ಣುವರ್ಧನ,ಸೀರೋಗ ತಜ್ಞೆ ಡಾ. ಕಲ್ಪನಾ ವಿಶ್ವನಾಥ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಯುವ ಪರಿಸರವಾದಿ ಹರ್ಷ ಅವರನ್ನು ಸನ್ಮಾನಿಸಲಾಗುವುದು. ಡೀನ್ ಡಾ. ಜಿ. ಎಸ್. ಕೆ. ಸ್ವಾಮಿ, ಆರ್. ಕೆ. ಮೇಸ್ತ, ರೈತ ಉತ್ಪಾದಕ ಸಂಸ್ಥಗಳ ಉತ್ಕೃಷ್ಟ ಕೇಂದ್ರದ ನಿರ್ದೇಶಕ ಡಾ. ಜಿ. ಕೆ. ಸೀತಾರಾಮು ಮತ್ತಿರರು ಪಾಲ್ಗೊಳ್ಳಲಿದ್ದಾರೆ.
ಮೂರು ದಿನದ ಸಸ್ಯ ಸಂತೆಯಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಿದ್ದು, ವಿವಿಧ ಬಗೆಯ ಹಣ್ಣಿನ ಕಸಿ ಗಿಡಗಳು, ಹೂವಿನ ಅಲಂಕಾರಿಕ ಸಸಿಗಳು, ಪ್ಲಾಂಟೇಶನ್, ಔಷಧಿಯ ಸುಗಂಧಿ ಸಸಿಗಳು, ತರಕಾರಿ ಹಾಗೂ ಹೂವಿನ ಬೀಜಗಳು, ಕೃಷಿಗೆ ಪೂರಕವಾದ ನಾನಾ ಪರಿಕರಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಾಗಿತ್ತು. ಸಂತೆಗೆ ಆಗಮಿಸಿದ ನಗರವಾಸಿಗಳಿಗೆ ಸಮಗ್ರ ಗಾರ್ಡನಿಂಗ್ ಮಾಹಿತಿ, ವಿದ್ಯಾರ್ಥಿಗಳಿಗೆ ತೋಟಗಾರಿಕೆ ವಿಶೇಷ ಮಾಹಿತಿ ನೀಡಲಾಯಿತು. ಸಾಂಪ್ರದಾಯಿಕ ಕೃಷಿ ಉಪಕರಣಗಳು, ತೋಟಗಾರಿಕೆ ಮಳಿಗೆಗಳು ಮತ್ತು ವಿವಿಧ ತಳಿಯ ಕುರಿ, ಆಡು ಜಾನುವಾರುಗಳ ಪ್ರದರ್ಶನ ಹಾಗೂ ಎತ್ತಿನ ಗಾಡಿ ಸವಾರಿ ಮೇಳದಲ್ಲಿ ವಿಶೇಷ ಗಮನ ಸೆಳೆದವು. ಕೊನೆಯ ದಿನವಾದ ಇಂದು (ಭಾನುವಾರ) ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಸಾರ್ವಜನಿಕರು ಬೇಟಿ ನೀಡಿ ಸಸ್ಯ ಸಂತೆಯ ಸದುಪಯೋಗ ಪಡೆದುಕೊಳ್ಳುವಂತೆ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಲ್. ಜಗದೀಶ್ ಕರೆ ನೀಡಿದ್ದಾರೆ.