ಹಣವಿಲ್ಲದವರಿಗೆ ಪತ್ರಿಕೆಗಳೇ ದಾರಿದೀಪ; ಪತ್ರಿಕಾ ದಿನಾಚರಣೆಯಲ್ಲಿ ಪದ್ಮಶ್ರೀ ಡಾ.ವಿಜಯಲಕ್ಷ್ಮಿ ದೇಶಮಾನೆ ಅಭಿಮತ

paper
Published on

ಬೆಂಗಳೂರು: ವ್ಯಕ್ತಿ ಎಷ್ಟೇ ಸತ್ಯ ಮತ್ತು ಸಾಮಾಜಿಕ ಕಳಕಳಿ ಹೊಂದಿ ಸಾಧನೆ ಮಾಡಿದರೂ, ಮಾಧ್ಯಮಗಳ ಪ್ರಚಾರ ಇಲ್ಲದಿದ್ದರೆ ಆತನ ಸಾಧನೆ ಬೆಳಕಿಗೆ ಬರುವುದಿಲ್ಲ. ಆದ್ದರಿಂದ ಹಣ ಇಲ್ಲದವರಿಗೆ ಪತ್ರಿಕೆಗಳೇ ದಾರಿದೀಪ ಎಂದು ಖ್ಯಾತ ಕ್ಯಾನ್ಸರ್ ತಜ್ಞರಾದ ಪದ್ಮಶ್ರೀ ಡಾ.ವಿಜಯಲಕ್ಷ್ಮಿ ದೇಶಮಾನೆ ಹೇಳಿದ್ದಾರೆ.

ಗಾಂಧಿಭವನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ದಿನಪತ್ರಿಕೆಗಳ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಒಂದು ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿ, ತಿನ್ನುವುದಕ್ಕೆ ಅಹಾರವೂ ಇಲ್ಲದಂತೆ ಕೇವಲ ಹಣ್ಣು, ತರಕಾರಿ ತಿಂದು ಬೆಳೆದು ಕಿದ್ವಾಯಿಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಸುದೀರ್ಘ ಕಾಲ ಸೇವೆ ಮಾಡಿ ಇತ್ತೀಚೆಗೆ ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿ ಪಡೆಯುವುದಕ್ಕೆ ಸಾಧ್ಯವಾಗಿರುವುದು ಮಾಧ್ಯಮಗಳು ನೀಡಿದ ಪ್ರಚಾರದಿಂದ. ಬಡತನ ನಿವಾರಣೆಗೆ ಇರುವ ಪ್ರಬಲ ಶಸವೇ ಶಿಕ್ಷಣ. ನಾನು ಕ್ಯಾನ್ಸರ್ ಸರ್ಜನ್ ಆಗಿದ್ದು, ಕೇಂದ್ರ ಸರ್ಕಾರ ನಿಯುಕ್ತಿಗೊಳಿಸಿರುವ ಕರ್ನೂಲ್‌ನ ತಂತ್ರಜ್ಞಾನ ಸಂಸ್ಥೆಯಲ್ಲಿ ಎಐ ಮೂಲಕ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಸಂಶೋಧನೆ ನಡೆಯುತ್ತಿದೆ. ಇದು ಸಲವಾದಾಗ ದೇಶಕ್ಕೆ ದೊಡ್ಡ ಕೊಡುಗೆಯಾಗಲಿದೆ ಎಂದರು.

ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ದಿನಪತ್ರಿಕೆಗಳು ಅವಸಾನದ ಅಂಚಿಗೆ ಬಂದಿದ್ದು, ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಡಿ.ವಿ.ಗುಂಡಪ್ಪನವರು ಹೇಳುವಂತೆ ಎಷ್ಟೇ ಕಷ್ಟವಾದರೂ ಪತ್ರಿಕಾ ಧರ್ಮವನ್ನು, ನೈತಿಕತೆಯನ್ನು ಪಾಲಿಸಿಕೊಂಡು ಹೋಗುತ್ತಿರುವುದು ಪತ್ರಿಕೆಗಳ ಉಳಿವಿಗೆ ಕಾರಣವಾಗಲಿದೆ ಎಂದರು.

ಸಮಾರಂಭದಲ್ಲಿ ನಿರ್ಮಾಪಕರಾದ ಚಿನ್ನೇಗೌಡರು, ಹಿರಿಯ ಪತ್ರಕರ್ತ ಪಿಟಿಐ ಸಿದ್ದರಾಜು, ರಂಗಭೂಮಿ ಕಲಾವಿದೆ ಮಾಲತಿ ಸುಧೀರ್ ಅವರನ್ನು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ದಿನಪತ್ರಿಕೆಗಳ ಸಂಘದ ಅಧ್ಯಕ್ಷೆ ಡಾ.ಜಿ.ವೈ.ಪದ್ಮಾ ನಾಗರಾಜ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ, ಆಕಾಶವಾಣಿ ಮತ್ತು ದೂರದರ್ಶನದ ಮಾಜಿ ನಿರ್ದೇಶಕಿ ನಿರ್ಮಲಾ ಯಲಿಗಾರ್, ಹಿರಿಯ ಪತ್ರಕರ್ತ ಡಾ.ಎಂ.ಎಸ್.ಮಣಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net