

ಬೆಂಗಳೂರು:ತಾಲೂಕು ಮಟ್ಟದಲ್ಲಿ ಹಗಲಿರುಳು ಶ್ರಮಿಸುವವರಿಗೆ ಮಾತ್ರ ಪಕ್ಷದ ಜವಾಬ್ದಾರಿ ವಹಿಸಲಾಗುವುದು. ನಾಯಕರ ಹಿಂದೆ ಗಿರಕಿ ಹೊಡೆಯುವವರನ್ನು ನೇಮಿಸಿ ಪ್ರಯೋಜನವಿಲ್ಲ ಎಂದು KPCC ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ದೆಹಲಿಗೆ ತೆರಳುವ ಮುನ್ನ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದರು. ಪದಾಧಿಕಾರಿಗಳ ಪಟ್ಟಿಯಲ್ಲಿ ಕೆಲವು ಮಂತ್ರಿಗಳ ಆಪ್ತರನ್ನು ಕೈಬಿಡಲಾಗಿದೆ ಎಂಬ ಚರ್ಚೆ ಇದೆ ಎಂದು ಕೇಳಿದಾಗ, "ಯಾವ ಚರ್ಚೆ? ನಿಮ್ಮ ಬಳಿ ಮಾತಾಡಿರಬಹುದು. ನನ್ನ ಬಳಿ ಯಾರೂ ಮಾತನಾಡಿಲ್ಲ. ನಮಗೆ ಕೆಲಸ ಮಾಡುವವರು ಬೇಕು. ಅವರಿಗೆ ಜವಾಬ್ದಾರಿ ಕೊಟ್ಟರೆ ತಕ್ಕ ಫಲಿತಾಂಶ ಬರಬೇಕು. ನಮ್ಮ ಸುತ್ತ ಗಿರಿಗಿಟ್ಲೆಯಂತೆ ಸುತ್ತುತ್ತಿದ್ದರೆ ಆಗುವುದಿಲ್ಲ. ತಾಲೂಕಿನಲ್ಲಿ ಕೂತು, ಅಲ್ಲಿರುವ ಸಮಸ್ಯೆ ಬಗೆಹರಿಸಬೇಕು. ಫಲಿತಾಂಶ ಬರುವ ನಾಯಕತ್ವಕ್ಕೆ ಮಾತ್ರ ಆದ್ಯತೆ ನೀಡಲಾಗುವುದು" ಎಂದು ತಿಳಿಸಿದರು.
ಪದಾಧಿಕಾರಿಗಳ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ನೀಡುತ್ತೀರಾ ಎಂಬ ಪ್ರಶ್ನೆಗೆ, "ಸಧ್ಯಕ್ಕೆ ಇಲ್ಲ. ಪಟ್ಟಿ ಸಿದ್ಧವಾಗಿದ್ದು, ಯಾರಿಗೆ ಆಸಕ್ತಿ ಇಲ್ಲ ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಲಾಗುವುದು. ಪಕ್ಷ ಸಂಘಟನೆ ವಿಚಾರದಲ್ಲಿ ನಮಗೆ ದಿನವಿಡೀ ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುವವರು ಬೇಕು. ಬೇರೆಯವರ ಒತ್ತಡದ ಮೇರೆಗೆ ನೇಮಕ ಮಾಡಿಕೊಂಡು ಸಮಯ ವ್ಯರ್ಥ ಮಾಡುವುದರಲ್ಲಿ ಪ್ರಯೋಜನವಿಲ್ಲ. ಕೆಲಸ ಮಾಡುವವರಿಗೆ ಅವಕಾಶ ನೀಡಿ ಎಂದು ಎಐಸಿಸಿ ಆದೇಶ ನೀಡಿದೆ ಎಂದರು.