

ಬೆಂಗಳೂರು: ಇನ್ಸ್ಯೂರೆನ್ಸ್ ಕ್ಲೈಂಗಾಗಿ ಜ್ಯುವೆಲರಿ ಶಾಪ್ ಮಾಲೀಕ ಎಸಗಿದ್ದ ಕೃತ್ಯ ಬಯಲಾಗಿದೆ. ಇತ್ತೀಚೆಗೆ ಸಿನಿಮಾ ಸ್ಟೈಲ್ನಲ್ಲಿ ಮಾರ್ಕೆಟ್ ಫ್ಲೈ ಓವರ್ ಬಳಿ 2.7 ಕೆಜಿ ಚಿನ್ನ ಕಳುವಾಗಿತ್ತು. ಆದರೆ ತನಿಖೆ ನಡೆಸಿದ ಪೊಲೀಸರು ದೂರು ಕೊಟ್ಟ ಮಾಲೀಕನನ್ನೇ ಬಂಧಿಸಿದ್ದಾರೆ. ಕೈಲಾಶ್ ಜ್ಯುವೆಲರಿ ಮಾಲೀಕ ರಾಜ್ ಜೈನ್ ಬಂಧಿತ ಮಾಲೀಕ.
ಘಟನೆಯ ವಿವರ
ರಾಜ್ ಜೈನ್ ನಗರತ್ ಪೇಟೆಯಲ್ಲಿ ಜ್ಯುವೆಲರಿ ಶಾಪ್ ಹೊಂದಿದ್ದಾನೆ. ಹೈದ್ರಾಬಾದ್ಗೆ ತನ್ನ ಕೆಲಸಗಾರರ ಮೂಲಕ ಚಿನ್ನ ಸಾಗಿಸುತ್ತಿದ್ದ. ಒಂದು ದಿನ ಬೈಕ್ ನಲ್ಲಿ ತೆರಳುತಿದ್ದ ಹುಡುಗರ ಬಳಿ ದುಷ್ಕರ್ಮಿಗಳು ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರ ಬಳಿ ದೂರು ನೀಡಿದ್ದನು.
ಮಾಲೀಕನ ಬಂಧನ
ಹೊಂಡಾ ಆ್ಯಕ್ಟೀವ್ ನಲ್ಲಿ ಮಾರ್ಕೆಟ್ ಫ್ಲೈ ಓವರ್ ಮೇಲೆ ತೆರಳುವಾಗ ಕೃತ್ಯ ನಡೆದಿದ್ದು, ಈ ಬಗ್ಗೆ ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ತನಿಖೆ ವೇಳೆ ಇಬ್ಬರು ಸಿಬ್ಬಂದಿಗಳನ್ನು ಬಳಸಿಕೊಂಡು ಮಾಲೀಕನೇ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಬಳಿಕ ಅಂಗಡಿ ಮಾಲೀಕನ ಬಂಧಿಸಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಅಸಲಿ ಸಂಗತಿ ಬಯಲಾಗಿದ್ದು, ಇನ್ಸ್ಯೂರೆನ್ಸ್ ಕ್ಲೈಂ ಗಾಗಿ ಈ ರೀತಿ ಕೆಲಸ ಮಾಡಿರುವುದು ಗೊತ್ತಾಗಿದೆ. ಅಂಗಡಿ ಮಾಲೀಕ ಹಾಗೂ ಇಬ್ಬರು ಬಾಲಾಪರಾಧಿಗಳನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ೨.೭ ಕೆಜಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.