

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಕೇಂದ್ರ ಕಚೇರಿ ಇರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 25ನೇ ನೂತನ ಮಾವಿನಕಟ್ಟೆ ಶಾಖೆಯ ಉದ್ಘಾಟನೆ ಶ್ರೀರಾಮ ಕಾಂಪ್ಲೆಕ್ಸ್ ಮಾವಿನಕಟ್ಟೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಸಾಮಾನ್ಯರ ಆರ್ಥಿಕ ಶಕ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಗ್ರಾಮೀಣ ಅಭಿವೃದ್ಧಿ ಉದ್ದೇಶದಿಂದ ಶಾಖೆಯನ್ನು ಪ್ರಾರಂಭಿಸಿದ್ದೇವೆಯೇ ಹೊರತು ಹೆಸರು ಮತ್ತು ಪ್ರತಿಷ್ಠೆಗೆ ಪ್ರಾರಂಭಮಾಡಿಲ್ಲ. ಮಾವಿನಕಟ್ಟೆಯ ಜನತೆ ಸಂಘದ ಹೊಸ ಶಾಖೆಯನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವಲ್ಲಿ ಕೈ ಜೋಡಿಸಬೇಕು ಎಂದರು.
ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಉಮೇಶ್ ಆಳ್ವ ಕೊಟ್ಟುಂಜೆ ಕಚೇರಿ ಉದ್ಘಾಟಿಸಿದರು. ಸರಪಾಡಿ ಮಣಿನಾಲ್ಕೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಧಾಕೃಷ್ಣ ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘ ಭದ್ರ ಭವಿಷ್ಯವನ್ನು ಹೊಂದಿರುವ ದೂರದೃಷ್ಟಿಯ ಉದ್ದೇಶ ಇಟ್ಟುಕೊಂಡು ಸಹಕಾರ ಕ್ಷೇತ್ರದಲ್ಲಿ ಗಟ್ಟಿಯಾಗಿದೆ. 25ನೇ ಶಾಖೆ ಮುಂದಿನ ದಿನಗಳಲ್ಲಿ 125 ಶಾಖೆಯಾಗಲಿ ಎಂದರು.
ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಧರ್ಮಗುರು ರೆ.ಫಾ.ರಾಬರ್ಟ್ ಡಿಸೋಜ ನಿರಖು ಠೇವಣಿ ಸರ್ಟಿಫಿಕೇಟ್ ವಿತರಿಸಿ ಮಾತನಾಡಿ, ತಂಡವಾಗಿ ಕೆಲಸ ಮಾಡುವುದರಿಂದ ಅತ್ಯುತ್ತಮವಾದ ಸಾಧನೆ ಮಾಡಬಹುದು ಎನ್ನುವುದಕ್ಕೆ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ಉದಾಹರಣೆ ಎಂದರು.
ಇಳಿಯೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲ್, ಕಕ್ಯಪದವು ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಸಾಂತಪ್ಪ ಪೂಜಾರಿ, ಶಿವಪ್ಪ ಪೂಜಾರಿ, ವಿಶ್ವನಾಥ ನಾಯ್ಕ ಮತ್ತು ಧನಂಜಯ, ಕೇಂದ್ರ ಕಚೇರಿ ಮತ್ತು ಎಲ್ಲ ಶಾಖೆಗಳ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಸಂಘದ ವಿಶೇಷಾಧಿಕಾರಿ ಎಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಭಗೀರಥ ಜಿ. ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಡಾ.ರಾಜಾರಾಮ ಕೆ.ಬಿ. ವಂದಿಸಿದರು.
ಸಾಧಕರಿಗೆ ಗೌರವಾರ್ಪಣೆ
ಮಣಿನಾಲ್ಕೂರು ಗ್ರಾಪಂ ಅಧ್ಯಕ್ಷೆ ವಿಮಲಾ ಭದ್ರತಾ ಕೋಶದ ಉದ್ಘಾಟಿಸಿದರು. ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಗಣಕಯಂತ್ರ ಉದ್ಘಾಟಿಸಿದರು. ಸರಪಾಡಿ ಗ್ರಾಪಂ ಅಧ್ಯಕ್ಷೆ ಲೀಲಾವತಿ ಸಾಂಕೇತಿಕವಾಗಿ ಉಳಿತಾಯ ಖಾತೆ ಪುಸ್ತಕ ವಿತರಿಸಿದರು. ಕಟ್ಟಡದ ಮಾಲೀಕ ದೇವದಾಸ್ ನಾಯಕ್ ಹಾಗೂ ಮಣಿನಾಲ್ಕೂರು ಬಿಲ್ಲವ ಸಮಾಜ ಸೇವಾ ನೇಲ್ಯಪಲ್ಕೆ ಸಂಘ ಅಧ್ಯಕ್ಷ ಎಂ.ಸಂಜೀವ ಪೂಜಾರಿ ಕಟ್ಟದಡೆ ಅವರನ್ನು ಗೌರವಿಸಲಾಯಿತು.