

| ಕೆ.ಎಸ್.ಪ್ರಣವ್ಕುಮಾರ್ ಚಿತ್ರದುರ್ಗ
ದೇಶದ ಬೆನ್ನೆಲುಬಾದ ಯುವಸಮೂಹದ ಸಂಖ್ಯೆ ಮುಂದಿನ 13 ವರ್ಷದೊಳಗೆ ಕಡಿಮೆಯಾಗಲಿದ್ದು, 2036ರ ಅವಧಿಗೆ ವೃದ್ಧರ ಪಾಲು ಹೆಚ್ಚಾಗುವ ನಿರೀಕ್ಷೆ ಇದೆ. ಯೂತ್ ಇನ್ ಇಂಡಿಯಾ 2022ರ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದು, 2021ರಿಂದಲೇ ಯುವ ಜನಸಂಖ್ಯೆಯ ಪಾಲು ಕಡಿಮೆಯಾಗಲು ಪ್ರಾರಂಭಿಸಲಿದೆ ಎಂಬ ಅಂಶ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಯುವ ಸಮೂಹವು 1991ರಲ್ಲಿ 222.7 ಮಿಲಿಯನ್ನಿಂದ 2011ರಲ್ಲಿ 333.4 ಮಿಲಿಯನ್ಗೆ ಏರಿಕೆ ಕಂಡಿತ್ತು. 2021ರ ವೇಳೆಗೆ 371.4 ಮಿಲಿಯನ್ಗೆ ತಲುಪಿ, 2036ರ ವೇಳೆಗೆ 345.5 ಮಿಲಿಯನ್ಗೆ ಇಳಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ 20ರಿಂದ 40 ವರ್ಷದೊಳಗಿನ ಯುವಕರು ಅಕಾಲಿಕ ಮರಣ ಹೊಂದುತ್ತಿರುವುದು ಕೂಡ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶಗಳಲ್ಲಿ ಯುವಕರಿಗಿಂತ ವಯಸ್ಸಾದವರ ಜನಸಂಖ್ಯೆ ಮುಂದಿನ 13 ವರ್ಷದೊಳಗೆ ಹೆಚ್ಚಾಗಿ ಕಾಣುವ ನಿರೀಕ್ಷೆಯಿದೆ. ಅತಿ ಹೆಚ್ಚು ಯುವಸಮೂಹ ಹೊಂದಿರುವ ಬಿಹಾರ, ಉತ್ತರ ಪ್ರದೇಶದಲ್ಲಿ 2021ರವರೆಗೆ ಒಟ್ಟು ಜನಸಂಖ್ಯೆಗೆ ಯುವ ಜನಸಂಖ್ಯೆಯ ಅನುಪಾತದಲ್ಲಿ ಏರಿಕೆ ಕಂಡರೂ ಕ್ಷೀಣಿಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪರಿಣಾಮಗಳೇನು?: ಯುವಸಮೂಹ ಶೈಕ್ಷಣಿಕ ಪ್ರವೇಶ, ಆರೋಗ್ಯ ಸೇವೆ, ಲಾಭದಾಯಕ ಉದ್ಯೋಗ, ಲಿಂಗ ಅಸಮಾನತೆ, ಬಾಲ್ಯ ವಿವಾಹ, ಹದಿಹರೆಯದ ಗರ್ಭಧಾರಣೆ ಸೇರಿ ವಿವಿಧ ಸವಾಲುಗಳನ್ನು ಎದುರಿಸುವ ಅನಿವಾರ್ಯತೆ ಉಂಟಾಗಬಹುದು. ವೃದ್ಧರ ಜನಸಂಖ್ಯೆಯಲ್ಲಿ ಹೆಚ್ಚಳವಾದರೆ, ಸಾಮಾಜಿಕ ಭದ್ರತೆ, ಸಾರ್ವಜನಿಕ ಕಲ್ಯಾಣ ವ್ಯವಸ್ಥೆಗಳ ಮೇಲೆ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಇದನ್ನು ತಡೆಯಲು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಈಗಾಗಲೆ ರೂಪಿಸಿವೆ. 2019ರಿಂದ 21ರ ಅವಧಿಯಲ್ಲಿ ಸಹಜ ದೇಹದಾರ್ಢ್ಯ ಹೊಂದಿದ ಶೇ.59 ಯುವಜನರ ಪೈಕಿ ಶೇ.31 ಯುವಕ-ಯುವತಿಯರು ರಕ್ತಹೀನತೆ, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬುದಾಗಿಯೂ ವರದಿಯಲ್ಲಿ ಉಲ್ಲೇಖಿಸಿದ್ದು, ಆರೋಗ್ಯದ ಕುರಿತು ಯುವಜನ ಕಾಳಜಿ ವಹಿಸಬೇಕು ಎಂಬುದು ತಜ್ಞ ವೈದ್ಯರ ಅಭಿಪ್ರಾಯ.
ಯುವಜನರ ಆತ್ಮಹತ್ಯೆ ಆತಂಕಕಾರಿ: ಯುವಸಮೂಹ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದು, ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣಲಾರಂಭಿಸಿವೆ. 2021ರಲ್ಲಿ ದೇಶಾದ್ಯಂತ 1.65 ಲಕ್ಷ ಜನ ಆತ್ಮಹತ್ಯೆ ಮಾಡಿಕೊಂಡಿದ್ದು, 15ರಿಂದ 25 ವರ್ಷದೊಳಗಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿ 13,096, 18ರಿಂದ 30 ವರ್ಷದೊಳಗಿನ ಯುವಕ-ಯುವತಿಯರು ಒಳಗೊಂಡು 56,529 ಸಾವಿಗೆ ಶರಣಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ವರದಿಯಲ್ಲಿ ಪ್ರಕಟಿಸಿತ್ತು. ಹೀಗಾಗಿ ಶೇ.35ಕ್ಕಿಂತ ಹೆಚ್ಚು ಯುವಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಶೇ.33 ಯುವಜನ ಶಿಕ್ಷಣ, ತರಬೇತಿ, ಉದ್ಯೋಗದಿಂದ ವಂಚಿತರಾಗಿದ್ದಾರೆ. ಇದರಲ್ಲಿ ಶೇ.51 ಪಾಲು ಯುವತಿಯರದ್ದೇ ಆಗಿದೆ. ನಿರುದ್ಯೋಗ, ಆತ್ಮಹತ್ಯೆ, ಕೊಲೆ, ಅಪೌಷ್ಟಿಕತೆ, ಖಿನ್ನತೆ ಸೇರಿ ಯುವಸಮೂಹದ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ದೇಶದ ಪ್ರತಿ ರಾಜ್ಯದಲ್ಲಿಯೂ ಯುವಜನ ಆಯೋಗ ರಚಿಸಿ ಅನುಕೂಲ ಮಾಡಿಕೊಡಬೇಕು. | ಅಜ್ಜಯ್ಯ, ಕಾರ್ಯಕರ್ತ, ಸಂವಾದ ಯುವ ಮುನ್ನಡೆ ಕರ್ನಾಟಕ