

ಚೆನ್ನೈ: ಬಿಗ್ಬಾಸ್ ( Bigg Boss ) ತಮಿಳು ಸೀಸನ್ 8ರಲ್ಲಿ ಪುರುಷ ಸ್ಪರ್ಧಿಯೊಬ್ಬರು ತಮ್ಮ ಬಾತ್ರೂಮ್ ಇಣುಕಿ ನೋಡಿದ್ದಾರೆ ಎಂದು ಮಹಿಳಾ ಸ್ಪರ್ಧಿ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರದ ಬಗ್ಗೆ ನಿರೂಪಕ ವಿಜಯ್ ಸೇತುಪತಿ ( Vijay Sethupathi ) ಏನು ಹೇಳುತ್ತಾರೆ ಎಂಬುದನ್ನು ಬಿಗ್ಬಾಸ್ ಅಭಿಮಾನಿಗಳು ಇದೀಗ ನಿರೀಕ್ಷಿಸುತ್ತಿದ್ದಾರೆ.
ಅಂದಹಾಗೆ ಬಿಗ್ಬಾಸ್ ಶೋ ಮತ್ತು ವಿವಾದಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಬಿಗ್ಬಾಸ್ ಅಂದ್ರೆ ವಿವಾದ, ವಿವಾದ ಅಂದ್ರೆ ಬಿಗ್ಬಾಸ್ ಎನ್ನುವಂತಾಗಿದೆ. ಕಾರ್ಯಕ್ರಮದ ಮೊದಲ ದಿನದಿಂದಲೂ ವಿವಾದಗಳು ಹೆಚ್ಚಾಗುತ್ತಲೇ ಇವೆ. ಇದು ಪ್ರತಿ ಸೀಸನ್ನಲ್ಲೂ ಮುಂದುವರಿದರೂ ಪ್ರಸ್ತುತ ತಮಿಳಿನ ಬಿಗ್ಬಾಸ್ ಸೀಸನ್ನಲ್ಲಿ ಹಲವು ವಿವಾದಗಳು ಎದ್ದಿವೆ.
ಮನೆಯಲ್ಲಿ ಗಂಡು ಮತ್ತು ಹೆಣ್ಣು ಎಂಬ ತಾರತಮ್ಯವಿಲ್ಲ ಎಂದು ಬಿಗ್ಬಾಸ್ ಸದಾ ಹೇಳುತ್ತಿರುತ್ತಾರೆ ಆದರೆ, ಈ ಬಾರಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕ ತಂಡಗಳನ್ನಾಗಿ ಮಾಡಲಾಗಿದೆ. ಅಲ್ಲದೆ, ಮನೆಯನ್ನು ಸಹ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಟಾಸ್ಕ್ ಹೆಸರಿನಲ್ಲಿ ಪುರುಷರು, ಮಹಿಳೆಯರನ್ನು ಹಿಂಸಿಸುತ್ತಿದ್ದಾರೆ ಎಂಬ ಆರೋಪ ಇದೆ. ಇತ್ತ ನಾವೂ ಸೋಮಾರಿಗಳಲ್ಲ ಎಂದು ಮಹಿಳೆಯರು ಪುರುಷರಿಗೆ ಪೈಪೋಟಿ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನಿನ್ನೆ ನಡೆದ ಘಟನೆ ಟೀಕೆಗೆ ಗುರಿಯಾಗಿದೆ. ಅದೇನೆಂದರೆ, ನಿನ್ನೆ ಪುರುಷರ ತಂಡ ನಮ್ಮ ನಿಯಂತ್ರಣದಲ್ಲಿರುವ ಸ್ಥಳಕ್ಕೆ ಮಹಿಳೆಯರು ಬರಬೇಕಾದರೆ ನಮ್ಮಿಂದ ಅನುಮತಿ ಪಡೆಯಬೇಕು ಎಂದು ಹೇಳಿದ್ದರು.
ಒಮ್ಮೆ ಎಲ್ಲಾ ಪುರುಷ ಸ್ಪರ್ಧಿಗಳು ಬೆಡ್ರೂಮ್ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಯಾರೂ ಇಲ್ಲದ ಕಾರಣ ಅನುಮತಿ ಕೇಳದೆ ಮಹಿಳಾ ಸ್ಪರ್ಧಿ ಜಾಕ್ವೆಲಿನ್, ಅಡುಗೆ ಕೋಣೆಗೆ ಪ್ರವೇಶಿಸಿ, ಪಾತ್ರೆ ತೊಳೆಯುವ ಲಿಕ್ವಿಡ್ ಅನ್ನು ಕದ್ದು ಮಹಿಳೆಯರ ಬಾತ್ರೂಮ್ನ ವಾಶ್ ಬೇಸಿನ್ ಬಳಿ ಬಚ್ಚಿಟ್ಟು ನಿಯಮ ಉಲ್ಲಂಘಿಸಿದರು. ಇದನ್ನು ನೋಡಿದ ಪುರುಷರ ತಂಡ, ಲಿಕ್ವಿಡ್ ಅನ್ನು ತಂದುಕೊಡುವಂತೆ ಹೇಳಿದರು. ಆದರೆ, ಜಾಕ್ವೆಲಿನ್ ಅವರಿಗೆ ಸಂಪೂರ್ಣವಾಗಿ ನೀಡದೆ ಅರ್ಧದಷ್ಟು ಕಪ್‌ಗೆ ಸುರಿದು ಉಳಿದದ್ದನ್ನು ಮಾತ್ರ ನೀಡಿದ್ದಳು.
ಜಾಕ್ವೆಲಿನ್ ಚಟುವಟಿಕೆಯನ್ನು ಜೆಫ್ರಿ ವೀಕ್ಷಿಸುತ್ತಿದ್ದರು. ಅದನ್ನು ಗಮನಿಸಿದ ಜಾಕ್ವೆಲಿನ್, ನಮ್ಮ ಬಾತ್ರೂಮ್ ಕಡೆ ಯಾಕೆ ಇಣುಕಿ ನೋಡುತ್ತಿದ್ದೀರಿ? ನೀವು ತುಂಬಾ ತಪ್ಪು ಮಾಡುತ್ತಿದ್ದೀರಿ ಎಂದು ಗದರಿದರು. ಅಲ್ಲದೆ, ಸ್ಪರ್ಧಿ ಸೌಂದರ್ಯ ಕೂಡ ನಾಮಿನೇಷನ್ ಸಮಯದಲ್ಲಿ ಜೆಫ್ರಿ, ತುಂಬಾ ಕೆಟ್ಟದಾಗಿ ವರ್ತಿಸುತ್ತಾರೆ ಎಂದು ಹೇಳಿ ನಾಮಿನೇಟ್ ಮಾಡಿದರು. ಮಹಿಳಾ ಸ್ಪರ್ಧಿಗಳು ಜೆಫ್ರಿ ವಿರುದ್ಧ ಒಬ್ಬರ ಹಿಂದೆ ಒಬ್ಬರು ಆರೋಪ ಮಾಡಿದರು. ಶೋನಲ್ಲಿ ಸ್ವಲ್ಪ ಸೆನ್ಸೇಷನ್ ಕ್ರಿಯೇಟ್ ಮಾಡಲು ಜಾಕ್ವೆಲಿನ್ ಸುಖಾ ಸುಮ್ಮನೇ ಆರೋಪ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿವಾದದ ಕುರಿತು ವಿಜಯ್ ಸೇತುಪತಿ ಯಾವ ರೀತಿ ಮಾತನಾಡುತ್ತಾರೆ ಎಂಬ ನಿರೀಕ್ಷೆ ಇದೆ.
ಇನ್ನು ಕಳೆದ ಸೀಸಸ್ನಲ್ಲಿ ಸ್ಪರ್ಧಿ ಪ್ರದೀಪ್ ಬಿಗ್ಬಾಸ್ ಮನೆಯೊಳಗಿದ್ದರೆ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಮುದ್ರೆಯೊತ್ತಿ ಹೊರಹಾಕಿದ್ದರು. ಅದೇ ರೀತಿ ಈ ಸೀಸನ್ನಲ್ಲಿ ಜೆಫ್ರಿ ವಿರುದ್ಧ ಆರೋಪ ಮಾಡಿ ಹೊರಗೆ ಕಳುಹಿಸಲು ಮಹಿಳೆಯರು ಹೀಗೆ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)