ಗೋಹತ್ಯೆ ನಿಷೇಧಕ್ಕಾಗಿ ಶೀಘ್ರ ಗುಜರಾತ್ ಮಾದರಿ ಕಾಯ್ದೆ

Cow 7 June 20
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಗೋವುಗಳ ಕಳ್ಳ ಸಾಗಣೆ, ಹತ್ಯೆಯನ್ನು ತಡೆಗಟ್ಟಿ ಕಳ್ಳರನ್ನು ಮಟ್ಟ ಹಾಕುವ ಉದ್ದೇಶದಿಂದ ಮುಂದಿನ ವಿಧಾನಮಂಡಲ ಅಧಿವೇಶನದಲ್ಲೇ ಗುಜರಾತ್ ಮಾದರಿಯಲ್ಲಿ ಪ್ರಬಲವಾದ ಹೊಸ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ರೂಪಿಸಿದ್ದ ಜಾನುವಾರು ಹತ್ಯೆ ನಿಷೇಧ ಹಾಗೂ ಪ್ರತಿಬಂಧಕ ಕಾಯ್ದೆಗೆ ರಾಜ್ಯಪಾಲರು ಒಪ್ಪಿಗೆ ನೀಡದೆ ರಾಷ್ಟ್ರಪತಿಗೆ ರವಾನಿಸಿ ಕೈ ತೊಳೆದುಕೊಂಡಿದ್ದರು. ಕೇಂದ್ರ ಗೃಹ ಸಚಿವಾಲಯ ಸಹ ಕೆಲವೊಂದು ಆಕ್ಷೇಪಣೆ ವ್ಯಕ್ತಪಡಿಸಿ ತಿದ್ದುಪಡಿಗೆ ಸೂಚನೆ ನೀಡಿತ್ತು. ಇದಾದ ಬಳಿಕ ಹಿಂದಿನ ಕಾಂಗ್ರೆಸ್ ಸರ್ಕಾರ 1964ರ ಕಾಯ್ದೆಯನ್ನೇ ಮುಂದುವರಿಸುವ ನಿರ್ಧಾರಕ್ಕೆ ಬಂದಿತ್ತು. ಇದನ್ನೂ ಓದಿ: ಆಗಸ್ಟ್​ 15ರ ನಂತರ ರಾಷ್ಟ್ರಾದ್ಯಂತ ಶಾಲೆ-ಕಾಲೇಜು ಪುನರಾರಂಭ

ರಾಜ್ಯ ಸರ್ಕಾರ ಪ್ರಾಣಿ ಹಿಂಸೆ ತಡೆಯುವ ಸಲುವಾಗಿ ಇತ್ತೀಚೆಗೆ ಪ್ರಾಣಿ ಕಲ್ಯಾಣ ಮಂಡಳಿಯನ್ನು ರಚಿಸಿದೆ. ಅದರ ಮುಂದುವರಿದ ಭಾಗವಾಗಿ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.

ನಿಂತಿಲ್ಲ ಅಕ್ರಮ ಸಾಗಣೆ: ಕಳ್ಳ ಸಾಗಣೆ ಮೂಲಕ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವ ದಂಧೆ ರಾಜ್ಯದಲ್ಲಿ ನಿರಂತರವಾಗಿ ಮುಂದುವರಿದಿದೆ. ಹೀಗಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ಒತ್ತಡ ಹೆಚ್ಚಾಗಿತ್ತು. ಬಿಜೆಪಿಯ ಗೋವು ಪ್ರಕೋಷ್ಠ ಸಹ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು.

ತರಾತುರಿ ಬೇಡೆಂದಿದ್ದ ಸಿಎಂ: ಸಮ್ಮಿಶ್ರ ಸರ್ಕಾರ ಬಿದ್ದು ಹೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಯ್ದೆ ತಿದ್ದುಪಡಿಯ ಒತ್ತಡ ಹೆಚ್ಚಿತ್ತು. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ತರಾತುರಿ ಮಾಡಿ ಹಿಂದಿನ ಬಾರಿ ಆದಂತೆ ಆಗುವುದು ಬೇಡ. ಗುಜರಾತ್​ಗೆ ತೆರಳಿ ಸಂಪೂರ್ಣ ಅಧ್ಯಯನ ಮಾಡಿ ಜಾರಿಗೆ ತರೋಣವೆಂಬ ಸಲಹೆ ನೀಡಿದ್ದರೆಂದು ಹೇಳಲಾಗುತ್ತಿದೆ. ವಿಧೇಯಕ ಸಿದ್ಧವಾದ ನಂತರ ವಿವಿಧ ಇಲಾಖೆಗಳ ಜತೆ ಸಭೆ ನಡೆಸಲಾಗುತ್ತದೆ. ಏಕೆಂದರೆ ಕಾಯ್ದೆ ಜಾರಿಗೆ ಕಂದಾಯ, ಕೃಷಿ, ತೋಟಗಾರಿಕೆ, ಗೃಹ ಹೀಗೆ ವಿವಿಧ ಇಲಾಖೆಗಳ ಸಹಕಾರವೂ ಅಗತ್ಯವಾಗಿದೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಮೃತದೇಹಕ್ಕೆ ಮಾಡಿದ ಕೊವಿಡ್​-19 ಟೆಸ್ಟ್​ನ ವರದಿ ಮೂರು ತಾಸಿನ ಬಳಿಕ ಹೊರಬಿತ್ತು…

ಗೋಹತ್ಯೆ ನಿಷೇಧ ಕಾಯ್ದೆಯನ್ನು ಬಲಯುತವಾಗಿ ತರುವುದು ನಮ್ಮ ಉದ್ದೇಶ. ಲಾಕ್​ಡೌನ್ ಸಂಪೂರ್ಣ ಮುಗಿದ ನಂತರ ಗುಜರಾತ್​ಗೆ ಹೋಗಿ ಅಧ್ಯಯನ ಮಾಡಿ ಬರುತ್ತೇನೆ. ಆನಂತರ ಸಿಎಂ ಜತೆ ರ್ಚಚಿಸಿ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ. | ಪ್ರಭು ಚವ್ಹಾಣ್ ಪಶು ಸಂಗೋಪನೆ ಸಚಿವ

ಪ್ರವಾಸಕ್ಕೆ ಅಡ್ಡಿಯಾದ ಲಾಕ್​ಡೌನ್

ಗುಜರಾತ್​ನಲ್ಲಿ ಇರುವ ಗೋಹತ್ಯೆ ನಿಷೇಧ ಕಾನೂನು ಸಾಕಷ್ಟು ಬಲಯುತವಾಗಿರುವ ಕಾರಣ ಅಲ್ಲಿ ಅಧ್ಯಯನ ನಡೆಸಲು ಸರ್ಕಾರ ನಿರ್ಧರಿಸಿದೆ. ಲಾಕ್​ಡೌನ್ ಇಲ್ಲದಿದ್ದರೆ ಬಜೆಟ್ ಅಧಿವೇಶನ ಮುಗಿದ ಕೂಡಲೇ ಗುಜರಾತ್​ಗೆ ತೆರಳಲು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಸಿದ್ಧರಾಗಿದ್ದರು. ಕರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ಅವರು ಗುಜರಾತ್​ಗೆ ಹೋಗಲಿದ್ದಾರೆ.

ರಾಜ್ಯದಲ್ಲಿ ಜಾರಿಯಲ್ಲಿರುವ ಕಾಯ್ದೆಯಲ್ಲೇನಿದೆ?

ರಾಜ್ಯದಲ್ಲಿ ಸದ್ಯ 1964ರ ಗೋ ಹತ್ಯೆ ನಿಷೇಧ ಹಾಗೂ ಗೋವು ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದೆ. ಇದರ ಪ್ರಕಾರ ಕಾನೂನುಬಾಹಿರವಾಗಿ ಗೋಹತ್ಯೆ ಮಾಡಿದರೆ 6 ತಿಂಗಳು ಸಜೆ ಹಾಗೂ 1 ಸಾವಿರ ರೂ. ದಂಡವಿದೆ. ಜತೆಗೆ 12 ವರ್ಷದೊಳಗಿನ ಗೋವು ಅಥವಾ ಬೇರೆ ಜಾನುವಾರು ಹತ್ಯೆಗೆ ನಿಷೇಧವಿದೆ. ಕಸಾಯಿಖಾನೆಗೆ ತರುವುದಕ್ಕೆ ಅನುಮತಿ ಕಡ್ಡಾಯ. ಇದರ ಹೊರತಾಗಿ ಬಿಗಿಯಾದ ಅಂಶಗಳು ಇಲ್ಲದಿರುವುದರಿಂದ ಹಾಗೂ ಶಿಕ್ಷೆ ಪ್ರಮಾಣ ಕಡಿಮೆ ಇರುವುದರಿಂದ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಆದ್ದರಿಂದಲೇ ಕಾಯ್ದೆಗೆ ಬಲ ತುಂಬುವುದು ಸರ್ಕಾರದ ಉದ್ದೇಶವಾಗಿದೆ.

ಹೊಸ ಕಾನೂನಿನ ಅಂಶ
  • ದಂಡ ಹಾಗೂ ಶಿಕ್ಷೆಯ ಪ್ರಮಾಣ ಹೆಚ್ಚಿಸುವುದು
  • ಜಾಮೀನು ಸಿಗದಂತೆ ನೋಡಿಕೊಳ್ಳುವುದು
  • ಯಾವುದೇ ಜಾನುವಾರು ಕೊಲ್ಲದೆ ಕೊನೆಯ ತನಕ ಕಾಪಾಡುವುದು
  • ಗೋಶಾಲೆಗಳಿಗೆ ಆದ್ಯತೆ ನೀಡುವುದು
  • ಕೃಷಿ ಹಾಗೂ ಹೈನುಗಾರಿಕೆಗೆ ಆದ್ಯತೆ
  • ಪ್ರಾಧಿಕಾರ ರಚನೆ ಮಾಡಿ ಅದರ ಮೂಲಕ ನಿಯಂತ್ರಣ
  • ಗೋ ಸೇವಾ ಆಯೋಗ ರಚನೆ ಮಾಡಿ ಅದರ ಮೂಲಕ ಸಂರಕ್ಷಣೆ
ಗುಜರಾತ್ ಕಾಯ್ದೆಯ ಅಂಶ
  • ಕಳ್ಳ ಸಾಗಣೆ, ಹತ್ಯೆ ಮಾಡುವವವರಿಗೆ 10 ವರ್ಷದ ತನಕ ಸಜೆ, ಒಂದು ಲಕ್ಷ ರೂ. ದಂಡ
  • ಜಾಮೀನು ರಹಿತ ಶಿಕ್ಷೆ
  • ಕಳ್ಳ ಸಾಗಣೆ ಮಾಡಲು ಬಳಸುವ ವಾಹನಗಳನ್ನು ಹಿಂದೆ 6 ತಿಂಗಳ ತನಕ ಪೊಲೀಸ್ ವಶದಲ್ಲಿಟ್ಟು ಬಿಡಲಾಗುತ್ತಿತ್ತು. ಆದರೆ ಈಗ ಸಂಪೂರ್ಣ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ
  • ಹೈನುಗಾರಿಕೆಯ ಜಾನುವಾರುಗಳ ಸಂರಕ್ಷಣೆ
  • ಹಸುಗಳ ತಳಿಗಳ ಸಂವರ್ಧನೆ
  • ಕೃಷಿಗೆ ಬಳಸುವ ಜಾನುವಾರುಗಳ ತಳಿಗಳ ಅಭಿವೃದ್ಧಿ
ಬಿಜೆಪಿ ರೂಪಿಸಿದ್ದರಲ್ಲೇನಿತ್ತು?
  • ಗೋವುಗಳ ಜತೆಗೆ ಎತ್ತು, ಎಮ್ಮೆ, ಎಮ್ಮೆಕರುವನ್ನೂ ಸೇರಿಸಲಾಗಿತ್ತು
  • ಹತ್ಯೆ ಹಾಗೂ ಕಳ್ಳ ಸಾಗಣೆ ಮಾಡುವವರಿಗೆ 7 ವರ್ಷ ಸಜೆ ಹಾಗೂ 1 ಲಕ್ಷ ದಂಡ
  • ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಕರೆದೊಯ್ಯಲು ಪೊಲೀಸ್ ಅನುಮತಿ
  • ಕೃಷಿಗೆ ಬಳಸುವ ಜಾನುವಾರುಗಳ ಸಂರಕ್ಷಣೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net