

| ರವೀಂದ್ರ ಎಸ್. ದೇಶಮುಖ್
ಏನಿದು ಗ್ರೇಟ್ ರೆಸಿಗ್ನೇಶನ್?: ‘ಗ್ರೇಟ್ ರೆಸಿಗ್ನೇಶನ್’ ಎಂಬ ಪದವನ್ನು 2019ರಲ್ಲಿ ಟೆಕ್ಸಾಸ್ನ ಪ್ರೊಫೆಸರ್ ಅಂಥನಿ ಕ್ಲಾಟ್ಜ್ ಬಳಸಿದ್ದರು. ಮಾತ್ರವಲ್ಲ, ‘ಮುಂಬರುವ ದಿನಗಳಲ್ಲಿ ಲಕ್ಷಾಂತರ ಜನರು ಉದ್ಯೋಗ ತೊರೆಯಲಿದ್ದಾರೆ’ ಎಂದಿದ್ದರು. ಎರಡು ವರ್ಷದೊಳಗೇ ಅವರು ಹೇಳಿದ ಮಾತು ನಿಜವಾಗುತ್ತಿದೆ.
ಗಾಬರಿಗೊಳಿಸುವ ಅಂಕಿ-ಸಂಖ್ಯೆಗಳು: ಅಮೆರಿಕವೊಂದರಲ್ಲೇ ಈ ವರ್ಷ (2021) 3.4 ಕೋಟಿ ಜನರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ! ಸೆಪ್ಟೆಂಬರ್ ತಿಂಗಳೊಂದರಲ್ಲೇ ಕೆಲಸ ತೊರೆದವರ ಸಂಖ್ಯೆ 44 ಲಕ್ಷಕ್ಕೂ ಅಧಿಕ. ಹೀಗೆ ರಾಜೀನಾಮೆ ನೀಡುತ್ತಿರುವವರ ಪೈಕಿ ಯುವಜನರೇ ಹೆಚ್ಚು. ಬ್ರಿಟನ್, ಜರ್ಮನಿ ಮತ್ತು ಭಾರತದ ಹಲವು ಕಂಪನಿಗಳು ನುರಿತ ಸಿಬ್ಬಂದಿಯ ಕೊರತೆ ಎದುರಿಸುತ್ತಿವೆ. ಜರ್ಮನಿಯಲ್ಲಿ 4 ಲಕ್ಷ ವೇಕೆನ್ಸಿಗಳು ಇದ್ದರೂ, ಜನರು ಕೆಲಸಕ್ಕೆ ಬರುತ್ತಿಲ್ಲ. ಆಸ್ಟ್ರೇಲಿಯಾದಲ್ಲೂ ಸಂಬಳಕ್ಕಿಂತ ಸ್ವಾಭಿಮಾನದ ಕೆಲಸಕ್ಕಾಗಿ ಜನ ಹುಡುಕಾಟ ನಡೆಸುತ್ತಿದ್ದಾರೆ.
ಪ್ರತ್ಯಕ್ಷ ಚಿತ್ರಣ
ಕಳೆದ ಎರಡು ವರ್ಷಗಳಿಂದ ಅಮೆರಿಕವು ಕರೊನಾ ಸೋಂಕಿನಿಂದ ತತ್ತರಿಸಿದೆ. ಈವರೆಗೆ ಅಮೆರಿಕದಲ್ಲಿ ಒಟ್ಟು 4.76 ಕೋಟಿ ಜನರು ಸೋಂಕುಬಾಧಿತರಾಗಿದ್ದು, 7.69 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಕಳೆದ ವರ್ಷ ಕೋವಿಡ್ನಿಂದಾಗಿ ಅಮೆರಿಕದ ಆರ್ಥಿಕ ಪರಿಸ್ಥಿತಿ ಬಿದ್ದುಹೋಗಿತ್ತು. ಅನೇಕ ತಿಂಗಳುಗಳ ಕಾಲ ವಿಸ್ತರಿಸಿದ ಲಾಕ್ಡೌನ್ನಿಂದಾಗಿ ಜನರು ಮನೆಯಲ್ಲಿಯೇ ಇರುವ ಪರಿಸ್ಥಿತಿ ಬಂದು ನಿರುದ್ಯೋಗ ಸಮಸ್ಯೆ ದಾಖಲೆ ಪ್ರಮಾಣವಾದ ಶೇಕಡ 14.7ಕ್ಕೆ ಏರಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕದ ಆರ್ಥಿಕ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಸಲುವಾಗಿ ಆಗಿನ ಟ್ರಂಪ್ ಸರ್ಕಾರವು ಆರ್ಥಿಕ ಉತ್ತೇಜಕ ಮತ್ತು ಪರಿಹಾರ ಪ್ಯಾಕೇಜುಗಳನ್ನು ನಾಲ್ಕು ಬಾರಿ ಘೊಷಿಸಿತ್ತು. ಮನೆಯಲ್ಲಿದ್ದ ಜನರಿಗೆ ಪ್ರತಿ ತಿಂಗಳು ಸಾವಿರಾರು ಡಾಲರ್ಗಳಷ್ಟು ನಿರುದ್ಯೋಗ ಭತ್ಯೆಯನ್ನು ಉಚಿತವಾಗಿ ಕೊಟ್ಟಿತ್ತು. ಅನೇಕ ತಿಂಗಳುಗಳ ಕಾಲ ಬಾಡಿಗೆ ಕೊಡದಿದ್ದರೂ ಮಾಲೀಕರು ಬಾಡಿಗೆದಾರರನ್ನು ಮನೆಯಿಂದ ಹೊರಹಾಕದಂತೆ ಕಾನೂನು ತಂದಿತ್ತು. ಹೋದವರ್ಷ ಕರೊನಾ ಕಷ್ಟಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಸೇರಿ ಪ್ರತಿವಾರವೂ ಪ್ರತಿ ವ್ಯಕ್ತಿಗೆ ಸುಮಾರು ಹದಿನೈದು ನೂರು ಡಾಲರ್ಗಳನ್ನು ನಿರುದ್ಯೋಗ ಭತ್ಯೆಯಾಗಿ ನೀಡುತ್ತಿದ್ದವು. ಗಂಡ ಮತ್ತು ಹೆಂಡತಿ ಸೇರಿ ಪ್ರತಿವಾರ 3 ಸಾವಿರ ಡಾಲರ್ ನಿರುದ್ಯೋಗ ಭತ್ಯೆ ಪಡೆಯುತ್ತಿದ್ದರು. ಈ ಮೊತ್ತವು ಬಡವರ್ಗದವರು, ಕಾರ್ವಿುಕರು ಪಡೆಯುತ್ತಿದ್ದ ಸರಾಸರಿ ಸಂಬಳಕ್ಕಿಂತ ಬಹಳಷ್ಟು ಜಾಸ್ತಿಯಾಗಿತ್ತು.
ಬದಲಾದ ಪರಿಸ್ಥಿತಿ: ಕರೊನಾ ಲಸಿಕೆಗಳು ಬಂದ ನಂತರ ಅಮೆರಿಕದಲ್ಲಿ ಈ ವರ್ಷ ಆರ್ಥಿಕ ಪರಿಸ್ಥಿತಿ ತುಂಬ ಸುಧಾರಿಸಿದೆ. ಈಗ ಎಲ್ಲೆಲ್ಲೂ ಕೆಲಸಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಲು ಜನರೇ ಸಿಗುತ್ತಿಲ್ಲ. ಕೆಲಸದವರು ಸಿಗುತ್ತಿಲ್ಲವೆಂದು ಅನೇಕ ಹೋಟೆಲ್, ಅಂಗಡಿ, ಉದ್ದಿಮೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ನುರಿತ ಕಾರ್ವಿುಕರ ಕೊರತೆ ಎಲ್ಲ ಕ್ಷೇತ್ರಗಳಲ್ಲೂ ತೀವ್ರವಾಗಿ ಕಾಡುತ್ತಿದೆ. ಈಗ ಎಂತಹ ಪರಿಸ್ಥಿತಿ ಬಂದಿದೆ ಎಂದರೆ ಒಂದು ಹೊಸ ಕಾರ್ ಖರೀದಿಮಾಡಿದ ನಂತರ, ಅದು ಡೆಲಿವರಿ ಆಗಲು ಅನೇಕ ತಿಂಗಳುಗಳ ಕಾಲ ಕಾಯಬೇಕು. ನಮ್ಮ ಮನೆಯ ಕಾರ್ಪೆಟ್ ಬದಲಾಯಿಸಲು ಮೂರು ತಿಂಗಳು ಕಾದೆವು ಎಂದರೆ ಊಹಿಸಿ! ಇಂದಿನ ಈ ಬದಲಾದ ಪರಿಸ್ಥಿತಿಗೆ ಅನೇಕ ಕಾರಣಗಳಿವೆ. ಉಚಿತವಾಗಿ ಬರುವ ನಿರುದ್ಯೋಗ ಭತ್ಯೆಗೆ ಒಗ್ಗಿಹೋಗಿರುವ ಜನ ಮತ್ತೆ ಮೈಬಗ್ಗಿಸಿ ದುಡಿಯಲು ಅರೆಮನಸ್ಸು ಮಾಡುತ್ತಿದ್ದಾರೆ. ಮನೆಯಿಂದಲೇ ಕೆಲಸ ಮಾಡುತ್ತಿದ್ದವರು (ವರ್ಕ್ ಫ್ರಮ್ ಹೋಮ್ ಟ್ರಾಫಿಕ್ಜಾಮ್ ಸಮಸ್ಯೆ ಮತ್ತು ಹೆಚ್ಚಿರುವ ಪೆಟ್ರೋಲ್ ಬೆಲೆಗೆ ಹೆದರಿ ಮತ್ತೆ ಆಫೀಸಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇನ್ನೂ ಕೆಲವು ಜನರು ಮಾಸ್ಕ್ ಧರಿಸಲು, ಕರೊನಾ ಲಸಿಕೆ ಹಾಕಿಸಿಕೊಳ್ಳಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಗಗನಕ್ಕೇರಿದ್ದು ಇದರ ಪರಿಣಾಮ ಅಮೆರಿಕದಲ್ಲಿ ಎಲ್ಲ ವಸ್ತುಗಳ ಬೆಲೆಗಳು ಸಿಕ್ಕಾಪಟ್ಟೆ ಜಾಸ್ತಿಯಾಗಿವೆ. ‘ಥ್ಯಾಂಕ್ಸ್ ಗಿವಿಂಗ್’ ಮತ್ತು ಕ್ರಿಸ್ವುಸ್ ಹಬ್ಬಗಳು ಸದ್ಯದಲ್ಲಿ ಬರಲಿದ್ದು, ಜನಸಂದಣಿಯಿಂದಾಗಿ ಮತ್ತೆ ಕರೊನಾ ಅಲೆ ಅಮೆರಿಕವನ್ನು ಅಪ್ಪಳಿಸುವ ಸಂಭವವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಮೆರಿಕದಲ್ಲಿ ತಂತ್ರಜ್ಞಾನ ಮತ್ತು ಸಾಫ್ಟ್ವೇರ್ ಕ್ಷೇತ್ರದಲ್ಲಿ ಸಹಿತ ನುರಿತ ಸಿಬ್ಬಂದಿಯ ತೀವ್ರ ಕೊರತೆ ಇರುವುದರಿಂದ ಭಾರತೀಯರ H1B rejection (ತಿರಸ್ಕಾರಗೊಳ್ಳುವ) ಸಂಖ್ಯೆ ತುಂಬ ಕಡಿಮೆ ಆಗುವ ಸಾಧ್ಯತೆ ಇದೆ. ಇದು ಅಮೆರಿಕಕ್ಕೆ ಬರಲು ಇಚ್ಛಿಸುವ ಭಾರತೀಯರಿಗೆ ಒಳ್ಳೆಯ ಸುದ್ದಿ ಆಗಲಿದೆ.