

Marriage : ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾ ಸ್ಥಳ ಅಣ್ಣಾವರಂನಲ್ಲಿರುವ ವೀರ ವೆಂಕಟ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಮುಂಜಾನೆ ನಡೆಯುತ್ತಿದ್ದ ಮದುವೆಯೊಂದು ಮುರಿದುಬಿದ್ದಿದೆ.
ಇಲ್ಲಿನ ರಾಮ ದೇವಾಲಯದ ವಿಶ್ರಾಂತಿ ಗೃಹದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ವಧು ಜೋರಾಗಿ ಅಳುತ್ತಿದ್ದಳು. ಅಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಗಮನಿಸಿ, ಅವಳ ಬಳಿಗೆ ಹೋಗಿ ಪ್ರಶ್ನಿಸಿದಾಗ, ಈ ಮದುವೆ ತನಗೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ತನಗಿಂತ 20 ವರ್ಷ ದೊಡ್ಡವನಾದ ವ್ಯಕ್ತಿಯೊಂದಿಗೆ ಮದುವೆ ಮಾಡಿಸುತ್ತಿದ್ದಾರೆ ಎಂದು ಆಕೆ ದುಃಖಿಸಿದಳು, ತನಗೆ ಕೇವಲ 22 ವರ್ಷ ಎಂದು ಇದೇ ಸಂದರ್ಭದಲ್ಲಿ ಹೇಳಿದಳು.
ಅಲ್ಲಿನ ಭದ್ರತಾ ಸಿಬ್ಬಂದಿ ತಕ್ಷಣ ಮದುವೆಯನ್ನು ನಿಲ್ಲಿಸಿ, ವಧು-ವರರು ಮತ್ತು ಎರಡೂ ಕುಟುಂಬದ ಹಿರಿಯರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದರು. ಸಬ್-ಇನ್ಸ್ಪೆಕ್ಟರ್ ಶ್ರೀಹರಿ ರಾಜು, ವಧುವನ್ನು ವಿಚಾರಿಸಿದಾಗ, ಅವಳು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಸುತ್ತಿರುವುದಾಗಿ ಮತ್ತು ವರನಿಗೆ 42 ವರ್ಷ ವಯಸ್ಸಾಗಿದೆ ಎಂದು ಹೇಳಿದಳು.
ಪೊಲೀಸರು ವಧು-ವರರ ಕುಟುಂಬ ಸದಸ್ಯರಿಗೆ ಕೌನ್ಸೆಲಿಂಗ್ ನೀಡಿ, ಹುಡುಗಿಯ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಸುವುದು ಅಪರಾಧ ಎಂದು ಹೇಳಿ ಅವರನ್ನು ಕಳುಹಿಸಿದರು. ಮದುವೆ ಮಾಡಿಕೊಡಲು ಒಪ್ಪಿದ ಅರ್ಚಕನಿಗೂ ಇದೇ ವೇಳೆ ವಾರ್ನಿಂಗ್ ಕೊಡಲಾಯಿತು.
ವಧು-ವರರಿಬ್ಬರೂ ನೆಲ್ಲೂರು ಜಿಲ್ಲೆಯವರು. ವಧು ಉತ್ತುಕೂರಿನವರಾಗಿದ್ದು, ವರ ಕಂದುಕೂರಿನವರು. ಬಲಿಜ ಸಮುದಾಯಕ್ಕೆ ಸೇರಿದ ವಧುವಿನ ಕುಟುಂಬ ಬಡವರಾಗಿದ್ದು, ಮದುವೆ ಮಾಡಲು ಆರ್ಥಿಕವಾಗಿ ಅಸಮರ್ಥರಾಗಿದ್ದರಿಂದ ಅವರು ಬ್ರಾಹ್ಮಣ ವರನಿಗೆ ಹುಡುಗಿಯನ್ನು ಮದುವೆ ಮಾಡಲು ನಿರ್ಧರಿಸಿದರು ಎಂದು ತಿಳಿದುಬಂದಿದೆ.
ಈ ಸಂಬಂಧ ಯಾರೂ ಲಿಖಿತ ದೂರು ದಾಖಲಿಸದ ಕಾರಣ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)