

ಬಂಟ್ವಾಳ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲ್ಪಡುತ್ತಿರುವ ಗಿರಿಗುಡ್ಡೆ ಶ್ರೀ ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಹಾಸ್ಟೆಲ್ ಡೇ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಶನಿವಾರ ಸಂಜೆ ವಿದ್ಯಾರ್ಥಿ ನಿಲಯದ ಆವರಣದಲ್ಲಿ ನಡೆಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾತು ಉತ್ತಮವಾಗಿರಬೇಕು. ಮಾತಿನಲ್ಲಿ ಇನ್ನೊಬ್ಬರನ್ನು ನಿಂದಿಸದೆ, ನೋಯಿಸದೆ, ವಿಡಂಬನೆ ಮಾಡದೆ ಸದ್ವಿಚಾರ ಹಾಗೂ ಮೌಲ್ಯ ಮೈಗೂಡಿಸಿಕೊಂಡಾಗ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.
ವಾಮದಪದವು ವಿದ್ಯಾರ್ಥಿನಿ ನಿಲಯದ ವಾರ್ಡನ್ ಭವಾನಿ, ಜಿಪಿಟಿಯ ಕಂಪ್ಯೂಟರ್ ಶಿಕ್ಷಕ ಶ್ರೀನಿವಾಸ ಗೌಡ, ಶಂಭೂರು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ವಾರ್ಡನ್ ವಿಶ್ವನಾಥ ಉಪಸ್ಥಿತರಿದ್ದರು. ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.
ಗಿರಿಗುಡ್ಡೆ ವಿದ್ಯಾರ್ಥಿ ನಿಲಯದ ವಾರ್ಡನ್ ಪುಷ್ಪಲತಾ ಸ್ವಾಗತಿಸಿದರು. ಕೌಶಲ್ ಬಹುಮಾನಿತರ ಪಟ್ಟಿ ವಾಚಿಸಿದರು. ನಿಖಿಲ್ ವಂದಿಸಿದರು. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.