

ಬೆಳ್ತಂಗಡಿ: ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಅನ್ನದಾನದಷ್ಟೇ ಪುಣ್ಯ ಕಾರ್ಯ. ಬದುಕು ಕಟ್ಟುವ ಬದುಕು ಕಾಪಾಡುವ ನೇಜಿ ನೆಡುವ ಕೆಲಸದಲ್ಲಿ ವಿದ್ಯಾರ್ಥಿಗಳ ಕೈ ಜೋಡನೆ ಶ್ಲಾಘನೀಯ. ಬದುಕು ಕಟ್ಟೋಣ ತಂಡದ ಹೆಸರಿಗೆ ವಿಶೇಷ ಕಾಳಜಿ ಇದೆ ಎಂದು ಸೋನಿಯಾ ಯಶೋವರ್ಮ ಹೇಳಿದರು.
ಬೆಳಾಲು ಅನಂತೋಡಿ ಅನಂತ ಪದ್ಮನಾಭ ದೇವಸ್ಥಾನದ ಬಳಿಯ ಗದ್ದೆಯಲ್ಲಿ ಭಾನುವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ) ಉಜಿರೆ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ನೇತೃತ್ವದಲ್ಲಿ, ಎಸ್.ಡಿ.ಎಂ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಸ್ಪೋರ್ಟ್ಸ್ ಕ್ಲಬ್, ಬೆಳ್ತಂಗಡಿ ರೋಟರಿ ಕ್ಲಬ್, ತಾಲೂಕು ಪತ್ರಕರ್ತರ ಸಂಘ, ಅನಂತೋಡಿ ದೇವಳ ವ್ಯವಸ್ಥಾಪನಾ ಸಮಿತಿ, ದೇವಸ್ಥಾನ ಸಂಯುಕ್ತ ಆಶ್ರಯದಲ್ಲಿ, 500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಯುವ ಸಿರಿ-ರೈತ ಭಾರತದ ಐಸಿರಿ ನೇಜಿ ನಾಟಿ ಕಾರ್ಯಕ್ರಮದಲ್ಲಿ ಗದ್ದೆಗೆ ಹಾಲೆರೆದು ಮಾತನಾಡಿದರು.
ಶಾಸಕ ಹರೀಶ್ ಪೂಂಜ ನೇಜಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಶಿಸ್ತು ಮತ್ತು ಬದ್ಧತೆಗೆ ಇನ್ನೊಂದು ರೂಪವೇ ಬದುಕು ಕಟ್ಟೋಣ ತಂಡ ಎಂದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಭತ್ತದ ತಳಿ ತಜ್ಞ ಬಿ.ಕೆ.ದೇವರಾಜ್ ಅವರನ್ನು ಗೌರವಿಸಲಾಯಿತು.
ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್‌ಕುಮಾರ್, ರಾಜೇಶ್ ಪೈ, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಸಿವಿಲ್ ವಿಭಾಗದ ಮುಖ್ಯಸ್ಥ ರವೀಶ್ ಪಡುಮಲೆ, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಧನಂಜಯ ರಾವ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಅನಂತೋಡಿ ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಕಾರ್ಯದರ್ಶಿ ದುರ್ಗಾ ಪ್ರಸಾದ್, ಗ್ರಾಪಂ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಧರ್ಮಸ್ಥಳ ಕೃಷಿ ವಿಭಾಗದ ಬಾಲಕೃಷ್ಣ ಪೂಜಾರಿ, ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಮಹೇಶ್ ಶೆಟ್ಟಿ, ದೀಪಾ ಆರ್.ರಾವ್, ಎಸ್.ಡಿ.ಎಂ ಸ್ಪೋರ್ಟ್ ಕ್ಲಬ್ ಮುಖ್ಯಸ್ಥ ರಮೇಶ್ ಮುಂತಾದವರು ಉಪಸ್ಥಿತರಿದ್ದರು.
ಅನಂತ ಪದ್ಮನಾಭ ದೇವರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ತೆಂಗಿನ ಕೊಂಬಿನ ತೆನೆ ಅರಳಿಸಲಾಯಿತು. 500ಕ್ಕೂ ಅಧಿಕ ವಿದ್ಯಾರ್ಥಿಗಳು, ಸಂಘಟನೆಗಳ ಸದಸ್ಯರು, ಊರವರು ಸೇರಿ 1000ಕ್ಕೂ ಅಧಿಕ ಮಂದಿ 4 ಗದ್ದೆಗಳಲ್ಲಿ ನೇಜಿ ನೆಡುವ ಕಾರ್ಯದಲ್ಲಿ ಸಂಧಿ ಪಾಡ್ದನದೊಂದಿಗೆ ಭಾಗಿಯಾದರು. ದೇವಸ್ಥಾನದ ಬಳಿಯಿಂದ ಪಲ್ಲಕ್ಕಿಯಲ್ಲಿ ನೇಜಿಯನ್ನು ಕಂಬಳದ ಕೋಣ, ಚೆಂಡೆ, ಕೊಂಬು ಕಹಳೆ, ವಾದ್ಯದೊಂದಿಗೆ ತರಲಾಯಿತು. ಸಮವಸ್ತ್ರ ಧರಿಸಿ, ತಲೆಗೆ ಮುಟ್ಟಾಳೆ ಇಟ್ಟು ಭಾಗವಹಿಸಿದ್ದರು. ನೇಜಿ ನೆಡುವ ಗದ್ದೆಯ ಅಕ್ಕಪಕ್ಕದ ಗದ್ದೆಗಳಲ್ಲಿ ಆನೆ, ಜಿಂಕೆ, ಆಕಳು, ಕರು ಮುಂತಾದ ಪ್ರಾಣಿಗಳ ಆಕೃತಿ ಇಡಲಾಗಿತ್ತು.
ನೇಜಿ ನೆಡುವ ಕೆಲಸ ಮಾತ್ರವಲ್ಲ ಅದನ್ನು ಮುಂದಕ್ಕೆ ಚೆನ್ನಾಗಿ ಬೆಳೆಸಿ ಕಟಾವು ಮಾಡಿ ಭತ್ತ ಮತ್ತು ಬೈಹುಲ್ಲನ್ನು ಬೇರ್ಪಡಿಸುವವರೆಗಿನ ಕೆಲಸ ನಮ್ಮಿಂದ ನಡೆಯುತ್ತದೆ. ಇದು ಎಲ್ಲರಿಗೂ ಪ್ರೇರಣೆಯಾಗಬೇಕು. ತಾಲೂಕಿನ ಹಲವೆಡೆಯಿಂದ ನಮ್ಮಲ್ಲೂ ಇಂತಹ ಕಾರ್ಯ ನಡೆಯಬೇಕು ಎಂದು ಕರೆ ಬರುತ್ತಿದೆ. ಮೋಹನ್‌ಕುಮಾರ್ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ