ಆಧ್ಯಾತ್ಮ ಸಾಧನೆಯ ಮೊದಲ ಹೆಜ್ಜೆ ಶ್ರವಣ; ಶ್ರೀಶೈಲ ಜಗದ್ಗುರುಗಳ ಅಭಿಮತ, ಶ್ರಾವಣ ಪುರಾಣಕ್ಕೆ ಚಾಲನೆ

srishaila
Published on

ಶ್ರೀಶೈಲ : ಯಾವುದೇ ಪುರಾಣ, ಪುಣ್ಯಕತೆ, ಪ್ರವಚನಗಳನ್ನು ಶ್ರವಣ ಮಾಡುವುದು ಆಧ್ಯಾತ್ಮಿಕ ಸಾಧನೆಯ ಮೊದಲ ಹೆಜ್ಜೆಯಾಗಿದ್ದು, ಶ್ರವಣ ಮನನ ಮತ್ತು ನಿಧಿಧ್ಯಾಸಗಳ ಮೂಲಕ ಜೀವಾತ್ಮನು ತನ್ನ ಆತ್ಮ ವಿಕಾಸವನ್ನು ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ.

ಶ್ರಾವಣ ಮಾಸದ ಅಂಗವಾಗಿ ಶ್ರೀಶೈಲ ಸೂರ್ಯ ಸಿಂಹಾಸನ ಪೀಠದಲ್ಲಿ ಹಮ್ಮಿಕೊಂಡಿರುವ ದೇವರ ದಾಸಿಮಯ್ಯನವರ ಪುರಾಣ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇತ್ತೀಚೆಗೆ ನಾಡಿನಲ್ಲಿ ಪುರಾಣ ಪ್ರವಚನ ಆಲಿಸುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದು ಶೋಚನೀಯ ಸಂಗತಿ. ಶ್ರವಣವು ನವ ವಿಧ ಭಕ್ತಿಗಳಲ್ಲಿ ಒಂದಾಗಿದ್ದು, ನಮ್ಮ ಪೂರ್ವಿಕರ ಜೀವನ ಚರಿತ್ರೆಯನ್ನು ಕೇಳಿ ತಿಳಿದುಕೊಳ್ಳುವುದರಿಂದ ಇತಿಹಾಸದ ಅರಿವು ಉಂಟಾಗುತ್ತದೆ. ಆದ್ಯ ವಚನಕಾರರಾದ ದೇವರ ದಾಸಿಮಯ್ಯನವರು ಶಿವಶರಣರ ಮತ್ತು ಶ್ರೀಶೈಲದ ನಡುವಿನ ಸೇತುವಾಗಿದ್ದರು. ಶಿವಶರಣರ ಸ್ವರ್ಗವೆಂದು ಕರೆಯಲಾಗುವ ಶ್ರೀಶೈಲಕ್ಕೆ ಮೊದಲು ಆಗಮಿಸಿದ ಕರ್ನಾಟಕದ ಶರಣರಲ್ಲಿ ದೇವರ ದಾಸಿಮಯ್ಯನವರು ಮೊದಲಿಗರು. ಇವರನ್ನು ಅನುಸರಿಸಿ ಮುಂದೆ ಹಲವಾರು ಶರಣರು ತಮ್ಮ ಆಧ್ಯಾತ್ಮ ಅನುಸಂದಾನಕ್ಕಾಗಿ ಶ್ರೀಶೈಲ ಕ್ಷೇತ್ರಕ್ಕೆ ಆಗಮಿಸಿದರು. 11ನೇ ಶತಮಾನದಲ್ಲಿ ಶ್ರೀಶೈಲ ಪೀಠದ ಜಗದ್ಗುರುಗಳಾಗಿದ್ದ ಶ್ರೀಚಂದ್ರಗುಂಡ ಶಿವಾಚಾರ್ಯ ಭಗವತ್ಪಾದರು ನಡೆಸುತ್ತಿದ್ದ ಗುರುಕುಲದಲ್ಲಿ ದೇವರ ದಾಸಿಮಾರ್ಯರು ಅಧ್ಯಯನ ಮಾಡಿರುವ ಬಗ್ಗೆ ಸಿದ್ದಯ್ಯ ಪುರಾಣಿಕರು ಬರೆದ ಶರಣ ಚರಿತಾಮೃತ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಶ್ರೀಶೈಲದಲ್ಲಿ ತಮ್ಮ ಆಧ್ಯಾತ್ಮ ಸಾಧನೆ ಆರಂಭಿಸಿದ ದೇವರ ದಾಸಿಮಯ್ಯನವರ ಪುರಾಣವನ್ನು ಶ್ರೀಶೈಲದಲ್ಲಿ ನಡೆಸುತ್ತಿರುವುದು ಶ್ಲಾಘನೀಯ ಎಂದು ಜಗದ್ಗುರುಗಳು ವಿವರಿಸಿದರು.

ಜೈನಾಪುರದ ಶ್ರೀರೇಣುಕ ಶಿವಾಚಾರ್ಯ ಸ್ವಾಮಿಗಳು ದೇವರ ದಾಸಿಮಾರ್ಯರ ಪುರಾಣ ಪ್ರವಚನ ನಡೆಸಿಕೊಟ್ಟರು. ಶ್ರೀಶೈಲ ಟ್ರಸ್ಟ್ ಬೋರ್ಡಿನ ಕಾರ್ಯನಿರ್ವಹಣಾಧಿಕಾರಿ ಎಂ.ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿದರು. ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರಾದ ವೀರಯ್ಯ ಸ್ವಾಮಿಗಳು, ಶಿವಪ್ರಸಾದ್ ಸ್ವಾಮಿಗಳು, ನಾಗರಾಜ ಶಾಸ್ತ್ರಿಗಳು ಕಲಬುರಗಿಯ ಇಂಜಿನಿಯರ್ ಶಾಂತಗೌಡ ಬಿರಾದಾರ, ಪೀಠದ ವ್ಯವಸ್ಥಾಪಕ ಮಂಜುನಾರ್ಥ ಉಪಸ್ಥಿತರಿದ್ದರು. ಆ.23ರವರೆಗೆ ಶ್ರಾವಣ ಮಾಸ ಪೂರ್ತಿ ಪ್ರತಿದಿನ ಬೆಳಗ್ಗೆ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಸಂಜೆ ಪುರಾಣ ಪ್ರವಚನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net