12ನೇ ಶತಮಾನದ ಶರಣತತ್ವ ಇಂದಿಗೂ ಪ್ರಸ್ತುತ; ಮಾಜಿ ಸಿಎಂ ಬಿಎಸ್​ವೈ ಅಭಿಮತ, ಬಸವಶ್ರೀ ಪ್ರಶಸ್ತಿ ಪ್ರದಾನ

bsy
Published on

ಬೆಂಗಳೂರು: ಕಾಯಕ ಮತ್ತು ದಾಸೋಹದ ಮೂಲಕ ಸಮ ಸಮಾಜ ಕಟ್ಟಲು 12ನೇ ಶತಮಾನದ ಬಸವಾದಿ ಶರಣರು ನೀಡಿದ ತತ್ವ-ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶ್ರೀ ಬಸವೇಶ್ವರ ಸೇವಾ ಸಮಿತಿ, ಅಕ್ಕನ ಬಳಗ ಮಹಿಳಾ ಸಮಾಜ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ಜಿಲ್ಲಾ ಘಟಕ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಎನಗಿಂತ ಕಿರಿಯರಿಲ್ಲ ಎಂಬ ಆಧ್ಯಾತ್ಮ ಸಾಧನೆಯ ವಿಭಿನ್ನ ದೃಷ್ಟಿಕೋನವನ್ನು ಬಸವಣ್ಣನವರು ಸಾರಿದ್ದಾರೆ. ಅವರ ತತ್ವ-ಚಿಂತನೆಗಳು ಆದರ್ಶ ಬದುಕಿಗೆ ದಾರಿದೀಪಗಳಾಗಿವೆ. ನನ್ನ ಬದುಕಿನ ಪ್ರತಿ ಹಂತದಲ್ಲೂ ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ. ಅಂತಹ ಬಸವಣ್ಣನವರ ಹೆಸರಿನಲ್ಲಿ ನೀಡಿದ ಪ್ರಶಸ್ತಿ ಕೇವಲ ಗೌರವ ಮಾತ್ರವಲ್ಲದೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂಬ ಭಾವನೆಯಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ವೀರಶೈವ ಲಿಂಗಾಯತ ಸಮಾಜ ಬಾಂಧವರು ಒಗ್ಗಟ್ಟು ರೂಢಿಸಿಕೊಳ್ಳಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಸಮಾಜಕ್ಕೆ ಮತ್ತಷ್ಟು ಬಲ ಬರುತ್ತದೆ. ವೀರಶೈವ ಲಿಂಗಾಯತ ಮಠಗಳು ಯಾವುದೇ ಜಾತಿ, ಮತ ಎಂಬ ಭೇದವನ್ನೆಣಿಸದೆ ಅನ್ನ, ಅಕ್ಷರ, ಆಶ್ರಯವೆಂಬ ತ್ರಿವಿಧ ದಾಸೋಹವನ್ನು ಶತಮಾನಗಳಿಂದ ನೀಡುತ್ತ ಬಂದಿರುವುದರಿಂದ ಸಮಾಜದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇಂತಹ ವಿಶಾಲ ಚಿಂತನೆಯುಳ್ಳ ವೀರಶೈವ ಲಿಂಗಾಯತ ಸಮಾಜ ಒಳಪಂಗಡಗಳನ್ನು ಮರೆತು ಒಗ್ಗಟ್ಟಾಗಿ ಮುಂದೆ ಹೋಗಬೇಕಾದ ಅವಶ್ಯಕತೆ ಇದೆ ಎಂದು ಬಿಎಸ್‌ವೈ ಹೇಳಿದರು.

ಸಮಾರಂಭದಲ್ಲಿ ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಸುಶೀಲಮ್ಮ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ, ಡಾ. ದೀಪಕ್ ಶಿವರಾತ್ರಿ ಅವರಿಗೆ ಕಾಯಕ ಯೋಗಿ ಪ್ರಶಸ್ತಿ, ಜಿ.ಮರಿಸ್ವಾಮಿ ಅವರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಕೆಆರ್‌ಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಅತ್ಯುತ್ತಮ ಸೇವಾ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಅಭಾವೀಮ ಬೆಂಗಳೂರು ಘಟಕದ ಅಧ್ಯಕ್ಷ ಎಸ್.ಗುರುಸ್ವಾಮಿ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥಯ್ಯ, ಅಕ್ಕನ ಬಳಗದ ಅಧ್ಯಕ್ಷೆ ಪಂಕಜ ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net