

ಅನೇಕ ದುಶ್ಚಟಗಳು ಯುವಜನರ ಜೀವನಕ್ಕೆ ಕಂಟಕ ತರುತ್ತಿವೆ. ಅದರಲ್ಲೂ, ಮಾದಕದ್ರವ್ಯಗಳ ಸೇವನೆ ಹೆಚ್ಚುತ್ತಲೇ ಸಾಗಿರುವುದು ಗಂಭೀರ ವಿಷಯ. ಪ್ರೌಢಶಾಲಾ ಮಕ್ಕಳಿಂದ ಹಿಡಿದು ಮೂವತ್ತು ವರ್ಷದ ಯುವಕ-ಯುವತಿಯರು ಈ ಚಟಕ್ಕೆ ಒಳಪಡುತ್ತಿದ್ದು, ಸಣ್ಣ ನಗರಗಳಿಗೂ ಈ ಪಿಡುಗು ಕಾಲಿಟ್ಟಿದೆ. ಡ್ರಗ್ಸ್ ಪೂರೈಕೆ ಜಾಲಗಳನ್ನು ಪತ್ತೆ ಮಾಡಲಾಗುತ್ತಿದ್ದರೂ, ರಹಸ್ಯವಾಗಿ ಕಾರ್ಯಾಚರಿಸುತ್ತಿರುವ ದುಷ್ಟಶಕ್ತಿಗಳಿಗೆ ಕೊರತೆಯೇನಿಲ್ಲ. ಹೊಸವರ್ಷಕ್ಕೆಂದು ಪೂರೈಸಲು ಸಂಗ್ರಹಿಸಲಾಗಿದ್ದ 21 ಕೋಟಿ ರೂಪಾಯಿ ಮೂಲ್ಯದ 16 ಕೆಜಿ ಡ್ರಗ್ಸ್ನ್ನು ಮಹತ್ವದ ಕಾರ್ಯಾಚರಣೆಯ ಮೂಲಕ ಬೆಂಗಳೂರಿನ ಸಿಸಿಬಿ ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಪೆಡ್ಲರ್ ಆಗಿದ್ದು, ತನ್ನದೇ ತಂಡ ಕಟ್ಟಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಆದರೆ, ಇಂಥ ಜಾಲಗಳು ವ್ಯಾಪಕವಾಗಿ ಹಬ್ಬಿಕೊಂಡಿದ್ದು, ಇದರ ವಿರುದ್ಧ ಆಂದೋಲನದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ, ಈ ಸಮಸ್ಯೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಸ್ಥಳೀಯರ ಸಹಕಾರವಿಲ್ಲದೆ ವಿದೇಶಿ ಪ್ರಜೆಗಳು ಇಂಥ ಕೃತ್ಯಗಳನ್ನು ನಡೆಸಲು ಸಾಧ್ಯವಿಲ್ಲ. ಹಾಗಾಗಿ, ಡ್ರಗ್ಸ್ ಜಾಲಕ್ಕೆ ಸಹಕರಿಸುತ್ತಿರುವವರ ವಿರುದ್ಧವೂ ಕಠಿಣ ಕ್ರಮ ಅಗತ್ಯ.
ಹುಕ್ಕಾ ಬಾರ್ಗಳಂತೂ ಇತ್ತೀಚಿನ ದಿನಗಳಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ವಾಸ್ತವವನ್ನು ಮರೆತು, ನಶೆಯಲ್ಲಿ ತೇಲುವ ಯುವಕರು ಅಶಾಂತಿ ಸೃಷ್ಟಿಸುವ ಇಲ್ಲವೆ ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆಯೂ ಇರುತ್ತದೆ. ಈ ಬಗೆಯ ಕೆಲ ರಾದ್ಧಾಂತಗಳು ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಪ್ರಶ್ನೆ ಸೃಷ್ಟಿಸಿದೆ. ‘ಹುಕ್ಕಾ ಬಾರ್ ನಿಯಂತ್ರಣಕ್ಕೆ ಕಾನೂನು ತರಲು ಪ್ರಯತ್ನಿಸಲಾಗುವುದು ಮತ್ತು ಹುಕ್ಕಾ ಬಾರ್ ಸ್ಥಾಪನೆಗೆ ಬೖಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಯಾವುದೇ ರೀತಿಯ ವ್ಯಾಪಾರ ಪರವಾನಗಿ ನೀಡುವುದಿಲ್ಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಕಾನೂನು ತರುವುದು ಉತ್ತಮ ಚಿಂತನೆಯೇ. ಆದರೆ, ಕಾನೂನು ಅಥವಾ ನಿಯಮದ ಹೆಸರಿನಲ್ಲಿ ಭ್ರಷ್ಟ ನೌಕರವರ್ಗವು ಲಂಚ ಪಡೆಯಲು ಹೊಸ ದಾರಿಯನ್ನು ಇದು ಸೃಷ್ಟಿಸಿಕೊಡಬಾರದು. ಏಕೆಂದರೆ, ಎಷ್ಟೋ ಕಡೆ ಬೆದರಿಕೆ ತಂತ್ರ ಪ್ರಯೋಗಿಸಿ ಭ್ರಷ್ಟ ಅಧಿಕಾರಿವರ್ಗ ದುಡ್ಡು ಮಾಡಿಕೊಳ್ಳುತ್ತಿರುವುದು ರಹಸ್ಯವೇನಲ್ಲ. ಇಂಥ ಅಪಸವ್ಯಕ್ಕೆ ಅವಕಾಶ ಮಾಡಿಕೊಡಬಾರದು. ಅಲ್ಲದೆ, ಪಂಜಾಬ್, ರಾಜಸ್ಥಾನ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಹುಕ್ಕಾ ಬಾರ್ಗಳನ್ನು ನಿಷೇಧಿಸಲಾಗಿದ್ದು, ಕರ್ನಾಟಕದಲ್ಲಿಯೂ ನಿಷೇಧ ಮಾಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ.