

ಕಾರವಾರ: ಇಡೀ ಉತ್ತರ ಕನ್ನಡ ಇಲ್ಲಿ ಮೇಳೈಸಿತ್ತು. ನಗರದ ಕುಂಠಿ ಮಹಾಮ್ಮಾಯಿ ದೇವಸ್ಥಾನ ಸಮೀಪದ ಬಜಾರ್ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ವಸ್ತು ಪ್ರದರ್ಶನ ಗಮನ ಸೆಳೆಯಿತು.
ಜಿಲ್ಲೆಯ ವೈವಿಧ್ಯತೆಯನ್ನು ಬಿಂಬಿಸುವ 20 ಕ್ಕೂ ಅಧಿಕ ಥರ್ಮಾಕೋಲ್ ಮಾದರಿಗಳನ್ನು ತಯಾರಿಸಿ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಮಾತ್ರವಲ್ಲ ವಿದ್ಯಾರ್ಥಿಗಳು ತಮ್ಮ ಮಾದರಿಗಳ ಬಗ್ಗೆ ಪಟಪಟನೆ ಇಂಗ್ಲಿಷ್‌ನಲ್ಲಿ ವಿವರಣೆ ನೀಡಿದರು. ಮಕ್ಕಳ ಪ್ರತಿಭೆ ಕಂಡು ಗಣ್ಯರು ಬೆರಗಾದರು.
ಮುರ್ಡೇಶ್ವರ, ಯಾಣ ಮುಂತಾದ ಪೌರಾಣಿಕ ತಾಣಗಳು, ಸೀಬರ್ಡ್, ಕೈಗಾ, ಮುಂತಾದ ಜಿಲ್ಲೆಯ ಮಹತ್ವದ ಯೋಜನೆಗಳು, ಜಲಪಾತಗಳು, ಜಿಲ್ಲೆಯ ಪರಿಸರದ ಮಹತ್ವ, ದಾಂಡೇಲಿ ವನ್ಯಜೀವಿ ಅಭಯಾರಣ್ಯ ಒಟ್ಟಿನಲ್ಲಿ ಸಮಗ್ರ ಉತ್ತರ ಕನ್ನಡದ ಮಹತ್ವವನ್ನು ಬಿಚ್ಚಿಡಲಾಗಿತ್ತು. ಅಲ್ಲದೆ, ಶಾಲೆಯ ಹಳೆಯ ಕಟ್ಟಡ ಹಾಗೂ ಬಿಇಎಲ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಹೊಸ ಕಟ್ಟಡ ಕೂಡ ಗಮನ ಸೆಳೆಯಿತು.
ಸಾಂಪ್ರದಾಯಿಕ ಆಚರಣೆ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ರಾಯ್ಕರ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಅವರನ್ನು ಅರಿಶಿನ, ಕುಂಕುಮದೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಜಿಪಂ ಉಪ ಕಾರ್ಯದರ್ಶಿ ಎನ್.ಜಿ.ನಾಯಕ, ಬಿಇಒ ಚಂದ್ರಹಾಸ ರಾಯ್ಕರ್, ನಗರಸಭೆ ಸದಸ್ಯ ಪ್ರೇಮಾನಂದ ಗುನಗಾ ಇದ್ದರು. ಪ್ರಾರಂಭದಲ್ಲಿ ಮಕ್ಕಳು ಪೂರ್ಣಕುಂಭ ಹಿಡಿದು, ಪಕ್ಕದ ಕುಂಠಿ ಮಹಾಮ್ಮಾಯಿ ದೇವಸ್ಥಾನಕ್ಕೆ ತೆರಳಿ, ಉಡಿ ತುಂಬಿ ಪೂಜೆ ಸಲ್ಲಿಸಿದರು. ನಂತರ ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಮಿತ್ರವೃಂದ ಪ್ರಸಾದ್, ವಿಮಲಾ ಕಾಮತ್, ಆಶಾಲತಾ ನಾಯ್ಕ, ಮೀರಾ ಹೆಗಡೆ, ಶಾರದಾ ನಾಯ್ಕ, ಶೈಲಾ ಸಾಳುಂಕೆ, ಸಂಜೀವಿನಿ ನಾಯಕ, ಲವಿನಾ ಡಿಸಿಲ್ವಾ, ಅವರನ್ನು ಸನ್ಮಾನಿಸಲಾಯಿತು. ಮುಕ್ತಾ ಶೆಟ್ಟಿ, ನಿರ್ಮಲಾ ನಾಯ್ಕ ಹಾಗೂ ಯಮುನಾ ಪಟಗಾರ ಅವರ ಮನೆಗಳಿಗೇ ತೆರಳಿ ಸನ್ಮಾನಿಸಲಾಯಿತು.ಈ ಕಾರ್ಯಕ್ರಮಕ್ಕೆ ಡಿಡಿಪಿಐ ಲತಾ ನಾಯಕ ಸಾಕ್ಷಿಯಾದರು.
ಇಂದು ಶತಮಾನೋತ್ಸವ:
ಶಾಲೆಯ ಶತಮಾನೋತ್ಸವ ಸಮಾರಂಭವು ಜ.2 ರಂದು ಸಾಯಂಕಾಲ 4.30 ಕ್ಕೆ ಶಾಲೆಯ ಆವರಣದಲ್ಲಿ ನಡೆಯಲಿದೆ. ಸಚಿವ ಮಂಕಾಳ ಎಸ್.ವೈದ್ಯ ಉದ್ಘಾಟಿಸಲಿದ್ದು, ಶಾಸಕ ಸತೀಶ ಸೈಲ್ ಅಧ್ಯಕ್ಷತೆ ವಹಿಸುವರು.