ಪಶುಗಳ ಚಿಕಿತ್ಸೆಗೆ ಮನೆ ಬಾಗಿಲಿಗೆ ಬರಲಿದೆ ಸಂಚಾರಿ ಆಸ್ಪತ್ರೆ

Animal-Ambulance
Published on


ಕಾರವಾರ: ಪಶುಗಳ ಚಿಕಿತ್ಸೆಗೆ ವರ್ಷಗಳ ಹಿಂದೆಯೇ ಮಂಜೂರಾದ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸೇವೆಯು ಈಗ ಜಿಲ್ಲೆಯಲ್ಲಿ ಪ್ರಾರಂಭವಾಗುತ್ತಿದೆ. ಪಶು ವೈದ್ಯರ ತೀವ್ರ ಕೊರತೆಯಿಂದ ಉಂಟಾಗುತ್ತಿರುವ ಸಮಸ್ಯೆಗೆ ಈ ಸಂಚಾರಿ ಪಶು ಚಿಕಿತ್ಸಾಲಯಗಳು ಕೊಂಚ ನಿವಾರಿಸುವ ನಿರೀಕ್ಷೆ ಮೂಡಿದೆ.

ರಾಷ್ಟ್ರೀಯ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿಜಿಲ್ಲೆಯ 12 ತಾಲೂಕುಗಳಿಗೆ ಒಂದೊಂದರಂತೆ 12 ಚಿಕಿತ್ಸಾ ವಾಹನಗಳು, ಯಲ್ಲಾಪುರದಲ್ಲಿರುವ ಪಶು ವೈದ್ಯಕಿಯ ಸೇವಾ ಇಲಾಖೆಯ ಪಾಲಿ ಕ್ಲಿನಿಕ್ ಗೆ ಒಂದು ವಾಹನ ಸೇರಿದಂತೆ ಒಟ್ಟು 13 ವಾಹನಗಳು ವರ್ಷದ ಹಿಂದೆಯೇ ಬಂದಿದ್ದವು. ಆದರೆ, ಟೆಂಡರ್‌ ಪ್ರಕ್ರಿಯೆಯ ಗೊಂದಲ ಹಾಗೂ ಟೆಂಡರ್‌ ಪಡೆದ ಸಂಸ್ಥೆಯ ವಿಳಂಬದಿಂದ ವಾಹನಗಳು ಓಡಾಟ ನಡೆಸುತ್ತಿರಲಿಲ್ಲ. ಈಗ ಸಂಚಾರಿ ವಾಹನಗಳ ಓಟಾಟ ಪ್ರಾರಂಭವಾಗಿದ್ದು, ಒಟ್ಟು 13 ವಾಹನಗಳಲ್ಲಿ 9 ಪಶುವೈದ್ಯರು ಮತ್ತು 13 ಪಶು ವೈದ್ಯ ಸಹಾಯಕರು ಹಾಗೂ ವಾಹನ ಚಾಲಕರು ಈ ಯೋಜನೆಯಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾರ್ವಜನಿಕರು ತಮ್ಮ ತುರ್ತು ಅರೋಗ್ಯ ಸಹಾಯ ಉಚಿತ ಸಹಾಯವಾಣಿ108 ಗೆ ಕರೆ ಮಾಡಿದಾಗ ಸ್ಪಂದಿಸುವ ರೀತಿಯಲ್ಲಿಯೇ
1962 ಸಹಾಯವಾಣಿ ಪಶುಗಳ ಆರೋಗ್ಯ ಸಹಾಯಕ್ಕೆ ಸ್ಪಂದಿಸಲಿದೆ. ಬೆಳಗ್ಗೆ 9 ರಿಂದ ಸಾಯಂಕಾಲ 5 ಗಂಟೆಯವರೆಗೆ ಕರೆ ಮಾಡಿದರೆ ಪಶುವೈದ್ಯರು ಸ್ಥಳಕ್ಕೆ ಬಂದು ಉಚಿತ ಚಿಕಿತ್ಸೆ ಹಾಗೂ ಅಗತ್ಯ ಔಷಧಗಳನ್ನು ನೀಡಲಿದ್ದು, ಜಿಲ್ಲೆಯಲ್ಲಿ ಈ ಸೇವೆಯನ್ನು ಒದಗಿಸಲು ಎಡುಸ್ಪಾರ್ಕ್ ಇಂಟರ್ ನ್ಯಾಷನಲ್ ಪ್ರೈ.ಲಿ ಎಂಬ ಸಂಸ್ಥೆಯು ಇದಕ್ಕಾಗಿ ಗುತ್ತಿಗೆ ಪಡೆದುಕೊಂಡಿದೆ.

ಜಿಲ್ಲೆಯಲ್ಲಿ 4.10 ಲಕ್ಷ ಹಸು, ಎಮ್ಮೆ ಮುಂತಾದ ಜಾನುವಾರುಗಳಿದ್ದು, 19,000 ಕುರಿ,ಮೇಕೆಗಳು, 75,000 ನಾಯಿಗಳಿದ್ದು ಸಾಕಷ್ಟು ಸಂಖ್ಯೆಯ ಇತರೆ ಸಾಕು ಪ್ರಾಣಿಗಳಿವೆ. ಪ್ರಸ್ತುತ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸೇವೆ ಪಡೆಯಲು ಉಚಿತ ಸಹಾಯವಾಣಿ1962 ಸಂಖ್ಯೆಗೆ ತಿಂಗಳಿಗೆ 400 ರಿಂದ 425 ಕರೆಗಳು ಬರುತ್ತಿದ್ದು, ಇನ್ನಷ್ಟು ಜನ ಇದರ ಪ್ರಯೋಜನ ಪಡೆಯುವಂತೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಮೋಹನ ಕುಮಾರ್‌ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net