

ಸುಬ್ರಹ್ಮಣ್ಯ: ಆಧುನಿಕ ಪ್ರಪಂಚದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದು, ಅತ್ಯುನ್ನತ ಹುದ್ದೆ ಅಲಂಕರಿಸಿರುತ್ತಾರೆ. ನಾರಿ ಶಕ್ತಿ ನಮ್ಮ ದೇಶದ ಆಸ್ತಿ. ದೇಶದ ಆಸ್ತಿಯಾಗಿರುವ ನಾರಿ ಶಕ್ತಿಯಿಂದ ರಾಷ್ಟ್ರದ ಔನತ್ಯ ಸಾಧ್ಯ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.
ಸುಬ್ರಹ್ಮಣ್ಯ ಶ್ರೀ ವಾಣಿ ವನಿತಾ ಸಮಾಜ, ಸುಬ್ರಹ್ಮಣ್ಯ ಗ್ರಾಪಂ, ಕರ್ನಾಟಕ ರಾಜ್ಯ ಮಹಿಳಾ ತರಬೇತುದಾರರ ಸಂಚಲನ ಸಮನ್ವಯ ಸಮಿತಿ ಮಂಗಳೂರು, ಸುಳ್ಯ ತಾಲೂಕು ಮಹಿಳಾ ಮಂಡಲ ಒಕ್ಕೂಟ, ಸುಬ್ರಹ್ಮಣ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ, ಸುಬ್ರಹ್ಮಣ್ಯ ಇನ್ನರ್ವ್ಹೀಲ್ ಕ್ಲಬ್, ಓಂ ಶ್ರೀ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ, ಶ್ರೀ ಶಕ್ತಿ ಸಂಘ, ಸುಬ್ರಹ್ಮಣ್ಯ ನವೋದಯ ಸ್ವಸಹಾಯ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತ ಆಶಯದಲ್ಲಿ ಶುಕ್ರವಾರ ಸುಬ್ರಹ್ಮಣ್ಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ನಾರಿ ಶಕ್ತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲೂಕು, ಜಿಲ್ಲೆ, ರಾಜ್ಯ, ದೇಶದ ಎಲ್ಲ ಸಾರ್ವಜನಿಕ ಸಂಸ್ಥೆ, ಉದ್ದಿಮೆ, ಸಂಘ-ಸಂಸ್ಥೆಗಳಲ್ಲಿ ನಾಯಕತ್ವದ ಗುಣ ಬೆಳೆಸಿಕೊಂಡು ಸಾರಥಿಯಾಗಿ ಮುನ್ನಡೆಯುತ್ತಿದ್ದಾರೆ. ಮಹಿಳೆಯರು ಸಬಲರಾಗಿ ಸರ್ವ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದರು.
ಸುಬ್ರಹ್ಮಣ್ಯ ಗ್ರಾಪಂ ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಶ್ರೀ ದೇವಳ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ರೋಟರಿ ವಲಯ ಸೇನಾನಿ ವಿಶ್ವನಾಥ ನಡುತೋಟ, ಕರ್ನಾಟಕ ರಾಜ್ಯ ಮಹಿಳಾ ತರಬೇತುದಾರರ ಸಂಚಲನ ಸಮಿತಿ ಅಧ್ಯಕ್ಷೆ ಆಶಾಲತಾ ಸುವರ್ಣ, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ ಮಧುಮತಿ ಬೊಳ್ಳೂರು, ವಾಣಿ ವನಿತಾ ಸಮಾಜ ಅಧ್ಯಕ್ಷೆ ಪುಷ್ಪಾ ಕೆ., ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಗುಣವತಿ, ಹಾಲು ಉತ್ಪಾದಕ ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ಪ್ರೇಮಾ ರಘು, ನವೋದಯ ಸಹಾಯ ಸಂಘ ಅಧ್ಯಕ್ಷೆ ಸವಿತಾ, ಗ್ರಾಮ ಅಭಿವೃದ್ಧಿ ಯೋಜನೆ ಅಧ್ಯಕ್ಷೆ ಪವಿತ್ರಾ ದಿನೇಶ್, ವಾಣಿ ವನಿತಾ ಸಮಾಜ ಮಾಜಿ ಅಧ್ಯಕ್ಷರಾದ ಶೋಭಾ ನಲ್ಲೂರಾಯ, ತ್ರಿವೇಣಿ ದಾಮ್ಲೆ, ರತ್ನಾವತಿ ನೂಚಿಲ, ಹೇಮಾವತಿ ನೂಚಿಲ, ಸುಜಾತಾ ಗಣೇಶ್ ಉಪಸ್ಥಿತರಿದ್ದರು.
ನಾರಿ ಶಕ್ತಿ ಜಾಥಾ
ನಾರಿ ಶಕ್ತಿ ಜಾಥಾ ಕುಕ್ಕೆ ದೇವಳ ರಥಬೀದಿಯಿಂದ ಆರಂಭವಾಯಿತು. ಮುಖ್ಯ ರಸ್ತೆಯಲ್ಲಿ ಘೋಷಣೆಗಳೊಂದಿಗೆ ಗ್ರಾಪಂ ಸಭಾಭವನದ ತನಕ ಜಾಥಾ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಹಿಳಾ ಆಟೋ ಚಾಲಕಿ ಲೀಲಾವತಿ, ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ಲಲಿತಾ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು. ನಂತರ ಮಲ್ಲಿಕಾ ಜ್ಯೋತಿ ಗುಡ್ಡೆ ಅವರಿಂದ ಏಕವ್ಯಕ್ತಿ ನಾಟಕ ಪ್ರದರ್ಶನಗೊಂಡಿತು.