

ಹೆಬ್ರಿ: ಚಾರ ಮೇಲ್ಬೇಟ್ಟು ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರಡಿ 3 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯದೊಂದಿಗೆ ಜೀರ್ಣೋದ್ಧಾರಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ. ಗರಡಿಯ ಬ್ರಹ್ಮಕಲಶೋತ್ಸವ ಏ.1ರಿಂದ 9ರವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮತ್ತು ಗೌರವಾಧ್ಯಕ್ಷ ಬಿ.ಹರ್ಷ ಶೆಟ್ಟಿ ಹುತ್ತುರ್ಕೆ ತಿಳಿಸಿದ್ದಾರೆ.
1ರಂದು ದೈವಗಳ ಬಿಂಬ ಮೆರವಣಿಗೆಯಲ್ಲಿ ಗರಡಿಗೆ ಆಗಮಿಸಲಿದೆ. 2ರಂದು ಮುಂಜಾನೆ ಚಾರ ಮಹಿಷಮರ್ದಿನಿ ದೇವಸ್ಥಾನ ಮತ್ತು ಕೆರೆಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಕಾಲದಲ್ಲಿ ಜ್ಯೋತಿ ಆಗಮನವಾಗಿ, ವಿವಿಧ ಗರಡಿಯಲ್ಲಿ ಗಣಪತಿ ಹೋಮ, ಉಗ್ರಾಣ ಮುಹೂರ್ತ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ಹೆರ್ಗ ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಲಿದೆ. 3ರಂದು ವಿವಿಧ ಧಾರ್ಮಿಕ ಕಾರ್ಯದೊಂದಿಗೆ ದೈವಗಳ ಬಿಂಬ ಪ್ರತಿಷ್ಠಾಪನಾ ಕಾರ್ಯಗಳು ನಡೆಯಲಿವು. 4ರಂದು ಬ್ರಹ್ಮಕಲಶೋತ್ಸವ, ಮಹಾ ಕುಂಭಾಭಿಷೇಕ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. 5ರಂದು ಗರಡಿಯ ಪರಿಸರ ಸ್ವಚ್ಛತೆ ನಡೆದು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಸಿದ್ಧಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏ.6ರಂದು ಕಂಬದ ಮುಹೂರ್ತ, 7ರಂದು ಅಗೆಲು ಸೇವೆ, 8ರಂದು ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಬೈದರ್ಕಳ ಸರ್ಸಲೆ ಹೊರಡುವುದು, ರಾತ್ರಿ ಶಿವರಾಯ ಕೋಲ, ಬೈದರ್ಕಳ ದರ್ಶನ, ಬೈದರ್ಕಳ ಮತ್ತು ಧೂಮಾವತಿಯ ಮುಖಾಮುಖಿ ಭೇಟಿ ನಡೆಯಲಿದೆ. 9ರಂದು ಸಂಜೆ ಮಯಾಂದಲಮ್ಮ ಕೋಲ, ಜುಮಾದಿ ಕೋಲ ನಡೆಯಲಿದೆ. 3ರಂದು ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಿ.ಹರ್ಷ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಾಸಕ ಸುನೀಲ್ ಕುಮಾರ್ ಉದ್ಘಾಟಿಸುವರು. 4ರಂದು ಧಾರ್ಮಿಕ ಸಭೆಯನ್ನು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಉದ್ಘಾಟಿಸುವರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಗರಡಿಯ ಆನುವಂಶಿಕ ಆಡಳಿತ ಮೋಕ್ತೇಸರ ಸುರೇಶ ಹೆಗ್ಡೆ ತಾರಾಳಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಪುರೋಹಿತ್ ಸುಬ್ರಹ್ಮಣ್ಯ ಹೇರಳೆ, ಪ್ರಮುಖರಾದ ಲಕ್ಷ್ಮಣ ಪೂಜಾರಿ, ಸುಧಾಕರ ಪೂಜಾರಿ, ಮಿಥುನ್ ಶೆಟ್ಟಿ ಚಾರ, ಸೀತಾರಾಮ ಹೆಗ್ಡೆ ಮಂಡಾಡಿ, ಪ್ರಸನ್ನ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.