ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ ಪ್ರಸ್ತಾವನೆ

meeting
ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ನಾಗರಾಜ್ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶನಿವಾರ ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಸಮುದಾಯ ಆಸ್ಪತ್ರೆಯಾದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆಯಾಗಲಿದೆ. ವೈದ್ಯಾಧಿಕಾರಿಗಳ ಕೊರತೆಯೂ ನೀಗಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಸಭೆ ಗಮನಕ್ಕೆ ತಂದರು. ಸದಸ್ಯ ಅರುಣ್ ಶೆಟ್ಟಿ ಪಾದೂರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುವ ತಾಲೂಕು ಕೇಂದ್ರವಾಗಿರುವ ಕಾಪುವಿನಲ್ಲಿ ಯಾವುದೇ ಅವಘಡ ನಡೆದರೂ ಪ್ರಥಮ ಚಿಕಿತ್ಸೆಗೆ ದೂರದ ಉಡುಪಿ ಜಿಲ್ಲಾ ಕೇಂದ್ರದ ಆಸ್ಪತ್ರೆ ಅವಲಂಭಿಸಬೇಕಾಗಿದೆ. ಪುರಸಭೆ ವ್ಯಾಪ್ತಿಯೊಳಗೆ ಬರುವ ಇಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕದೊಂದಿಗೆ ತಾಲೂಕು ಆಸ್ಪತ್ರೆಯಾದಲ್ಲಿ ಜನರಿಗೆ ಅನುಕೂಲವಾಗಲಿದೆ. ಈ ಹಿಂದೆ ಬೇಡಿಕೆ ಸಲ್ಲಿಸಲಾಗಿದೆ. ಮತ್ತೊಮ್ಮೆ ಪುರಸಭೆ ಸರ್ವಾನುಮತದ ನಿರ್ಣಯದೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸಿದರು. ತಿಂಗಳಿಗೊಮ್ಮೆ ಆರೋಗ್ಯ ಸಹಾಯಕಿಯರು ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಬೇಕು. ಡಯಾಲಿಸಿಸ್ ಘಟಕ ಆರಂಭಿಸಬೇಕು. ಮಕ್ಕಳ ತಜ್ಞರ ನೇಮಕವಾಗಬೇಕು ಎಂದು ಸದಸ್ಯರಾದ ಕಿರಣ್ ಆಳ್ವ, ನೂರುದ್ದೀನ್, ಬಾಬಣ್ಣ ನಾಯಕ್ ಆರೋಗ್ಯಾಧಿಕಾರಿಯವರನ್ನು ಆಗ್ರಹಿಸಿದರು. ಸಮುದಾಯ ಆಸ್ಪತ್ರೆಯಾದಲ್ಲಿ ಈ ಎಲ್ಲ ಸವಲತ್ತು ಲಭಿಸಲಿದೆ ಎಂದು ಉತ್ತರಿಸಿದರು. ಉಪಾಧ್ಯಕ್ಷೆ ಸರಿತಾ ಶಿವಾನಂದ, ಸ್ಥಾಯೀ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್ ಉಪಸ್ಥಿತರಿದ್ದರು. ಸದಸ್ಯರ ಕೋಳಿ ಜಗಳ: ಅಜೆಂಡಾ ಪ್ರಕಾರ ಸಭೆ ಮುಂದುವರೆಯುತ್ತಿದ್ದಂತೆ ಎಸ್‌ಸಿ, ಎಸ್‌ಟಿ ಅನುದಾನದಡಿ ಉಳಿಕೆ ಮೊತ್ತದಿಂದ ಸದಸ್ಯರೆಲ್ಲರ ಗಮನಕ್ಕೆ ತಾರದೆ ವಾರ್ಡೊಂದರಲ್ಲಿ ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧಪಡಿಸಿರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸದಸ್ಯ ಸತೀಶ್ಚಂದ್ರ ಮೂಳೂರು ಪ್ರಸ್ತಾಪಿಸಿದ ಮಾರಿಪೂಜೆ ಅಂಗಡಿ ಮಳಿಗೆ ಹರಾಜು ವಿಷಯ 2 ಗಂಟೆ ಚರ್ಚೆಗೊಂಡು ಸಭೆ ಕಲಾಪವನ್ನೇ ಬಲಿ ತೆಗೆದುಕೊಂಡಿತು. ಪ್ರಸ್ತಾಪಿಸಿದ ವಿಷಯದಿಂದ ಕೆರಳಿದ ಕಿರಣ್ ಆಳ್ವ ಮಳಿಗೆ ನೀಡುವಿಕೆಯಲ್ಲಿ ಉಂಟಾದ ಗೊಂದಲ ಸಭೆ ಮುಂದಿರಿಸಿ ಆಕ್ರೋಶ ವ್ಯಕ್ತಪಡಿಸಿದರು. ಆ ಹೊತ್ತಿಗಾಗಲೇ ವಿಷಯ ಪ್ರಸ್ತಾಪಿಸಿದ್ದ ಸದಸ್ಯ ಸಭೆಯಿಂದ ಹೊರ ಹೋಗಿಯಾಗಿತ್ತು. ಈ ನಡುವೆ ವಿವರಣೆ ಪಡೆಯಲು ಮುಂದಾದ ನಾಮನಿರ್ದೆೇಶಿತ ಸದಸ್ಯ ಬಾಬಣ್ಣ ನಾಯಕ್ ವಿರುದ್ಧ ಕಿರಣ್ ಆಳ್ವ ಕೇವಲವಾಗಿ ಮಾತನಾಡಿದರೆಂದು ಆರೋಪಿಸಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ದೀರ್ಘಕಾಲ ವಾಕ್ಸಮರಕ್ಕೆ ಕಾರಣವಾಯಿತು. ಹರಾಜು ವಿಷಯದಲ್ಲಾದ ಗೊಂದಲಗಳ ಬಗ್ಗೆ ವಿವರಿಸಿ ತನಗಾದ ನೋವನ್ನು ಅಧ್ಯಕ್ಷೆ ಹರಿಣಾಕ್ಷಿ ತೋಡಿಕೊಂಡರು. ಇಷ್ಟಾದರೂ ಚರ್ಚೆಗೆ ಕೊನೆಗಾಣದೆ ಕಿರಣ್ ಸಭೆಯಿಂದ ಹೊರ ನಡೆದರು. ಬಳಿಕವೂ ಸದಸ್ಯರು ವೈಯಿಕ್ತಿಕ ಪ್ರತಿಷ್ಠೆಯನ್ನೇ ಪಣಕ್ಕಿಟ್ಟವರಂತೆ ಮಾತನಾಡಲಾರಂಭಿಸಿದರು. ಹಿರಿಯ ಸದಸ್ಯರು ಅವರ ಮನವೊಲಿಸುವ ಪ್ರಯತ್ನ ನಡೆಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಚರ್ಚೆ ನಡೆಸಿದ ಸದಸ್ಯರೆಲ್ಲ ಸಭೆಯಿಂದ ಹೊರ ನಡೆದರು. ಅಧ್ಯಕ್ಷರು ಸದಸ್ಯರ ಮಾತಿನಿಂದಾದ ನೋವಿಗೆ ಬಾಬಣ್ಣ ನಾಯಕ್ ಅವರಲ್ಲಿ ಕ್ಷಮೆಯಾಚಿಸಿದರು. ಕೊನೆಗೆ ಉಳಿದ ಬೆರಳೆಣಿಕೆ ಸದಸ್ಯರ ಉಪಸ್ಥಿಯಲ್ಲಿ ಅಜೆಂಡದಲ್ಲಿನ ವಿಷಯಗಳಿಗೆ ಅನುಮೋದನೆ ಪಡೆಯಲಾಯಿತು.

ಸಮರ್ಪಕ ನೀರು ಪೂರೈಸಲು ಸೂಚನೆ

ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಪೂರೈಕೆಯಿಂದಾಗುತ್ತಿರುವ ತೊಂದರೆ ಬಗ್ಗೆ ಸದಸ್ಯರು ದೂರಿದರು. ನಾಗರಿಕರು ಸದಸ್ಯರು ಹಾಗೂ ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಾರೆ. ಮುಖ್ಯಾಧಿಕಾರಿ ನಾಗರಾಜ್ ಅವರು ವಾಟರ್‌ಮನ್‌ಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಪಡೆದು, ಸಸೂತ್ರವಾಗಿ ನೀರು ಪೂರೈಕೆ ಮಾಡುವಂತೆ ಅವರಿಗೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net