

ಕಾರ್ಕಳ: ಬಿ.ಜಿ.ರಾಮಕೃಷ್ಣ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಕೊಟ್ಟಿದ್ದನ್ನು ವಾಪಸ್ ತೆಗೆದುಕೊಂಡ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಉಡುಪಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ ಹನ್ನೊಂದು ಜನರ ಮೇಲೆ ಎಫ್‌ಐಆರ್ ದಾಖಲಿಸಲು ಸರ್ಕಾರ ಸೂಚನೆ ನೀಡಿರುವುದು ಖಂಡನೀಯ ಎಂದು ಶಾಸಕ ವಿ.ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದ ಮೌಲ್ಯ, ಅಭಿವ್ಯಕ್ತಿ ಸ್ವಾತಂತ್ರೃದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದುವರೆಗೆ ಆಡಿದ ಮಾತುಗಳೆಲ್ಲ ಕೇವಲ ತೋರಿಕೆ. ಈ ಎಲ್ಲ ಮಾತುಗಳು ಪ್ರತಿಪಕ್ಷದಲ್ಲಿ ಇದ್ದಾಗ ಸುಲಭವಾಗಿ ಲಭಿಸುವ ಭಾಷಣದ ಸರಕ್ಕೆಂಬುದು ದೃಢಪಟ್ಟಿದೆ. ಅಧಿಕಾರದಲ್ಲಿ ಇದ್ದಾಗ ಸಿದ್ದರಾಮಯ್ಯನವರಿಗೆ ಒಂದು ಪ್ರತಿಭಟನೆ ಸಹಿಸಲಾಗದಂತಹ ನಿರಂಕುಶ ಮನಸ್ಥಿತಿ ಆವರಿಸುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಿಂದಲೂ ವಿಪಕ್ಷದ ಶಾಸಕರನ್ನು ಗುರಿಯಾಗಿಸಿಕೊಂಡು ದ್ವೇಷ ರಾಜಕಾರಣ ನಡೆಸಲಾಗುತ್ತಿತ್ತು. ಈಗ ಹೋರಾಟಗಾರರನ್ನು ದಮನಿಸುವುದಕ್ಕೆ ಸರ್ಕಾರ ಮುಂದಾಗಿದೆ. ಸಿದ್ದರಾಮಯ್ಯನವರೇ ಅಧಿಕಾರ ಶಾಶ್ವತವಲ್ಲ. ದೌರ್ಜನ್ಯಕ್ಕೆ ಜನ ಬೆದರುವುದಿಲ್ಲ. ಜನತಾ ನ್ಯಾಯಾಲಯದಲ್ಲಿ ಸಾಕ್ಷಿ ನಾಶ ಸುಲಭವಲ್ಲ ಎಂಬುದು ನೆನಪಿರಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.