ಅನ್ನದ ಋಣ, ಅಮ್ಮನ ಋಣ, ತಿಳಿದವನೇ ಜಾಣ...

Untitled design (1)
Published on

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ಮಾಡಿದ ಸಾಲವನ್ನು ತೀರಿಸಬಹುದು. ಆದರೆ, ಪಡೆದುಕೊಂಡು ಬಂದ ಋಣವನ್ನು ಯಾವತ್ತೂ ತೀರಿಸಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಋಣಮುಕ್ತರು ಎನ್ನುವವರು ಯಾರೂ ಇಲ್ಲ. ಸೃಷ್ಟಿಯ ವಿಶೇಷತೆಯೇ ಅದು. ನಾನು ಸರ್ವತಂತ್ರಸ್ವತಂತ್ರ, ಯಾವ ಋಣವೂ ನನಗಿಲ್ಲ ಎಂದು ಯಾರಾದರೂ ಹೇಳಿಕೊಂಡರೆ, ಅದು ನಿಜವಲ್ಲ.

ನಾವೆಲ್ಲರೂ ಹುಟ್ಟುವಾಗಲೇ ಮಾತೃ ಋಣ, ಪಿತೃ ಋಣ ಹೊತ್ತು ಭೂಮಿಗೆ ಬಂದಿರುತ್ತೇವೆ. ಈ ಋಣವನ್ನು ತೀರಿಸುವುದು ಅಸಾಧ್ಯ. ಜಗತ್ತಿಗೆ ಪಾರ್ವತಿ ಪರಮೇಶ್ವರರು ತಂದೆ-ತಾಯಿಯಾದರೆ, ಮಕ್ಕಳಿಗೆ ತಂದೆ-ತಾಯಿಯೇ ದೇವರು ಎನ್ನುವುದು ಅದೇ ಕಾರಣಕ್ಕೆ. ‘ಅಪ್ಪ-ಅಮ್ಮ ಅನ್ನಿಸಿಕೊಂಡಿದ್ದಕ್ಕೆ ನನಗೆಂದು ಏನು ಮಾಡಿಟ್ಟಿದ್ದೀರಿ’ ಎಂದು ಕೆಲವು ಮಕ್ಕಳು ಹೆತ್ತವರನ್ನು ನಿಂದಿಸುತ್ತಿರುತ್ತಾರೆ. ಕೆಲವರು, ‘ನಾನು ಸೆಲ್ಪ್ ಮೇಡ್ ಮ್ಯಾನ್, ಅಪ್ಪ-ಅಮ್ಮನ ಬಳಿ ಒಂದು ರೂಪಾಯಿಗೂ ಕೈಚಾಚದೆ ಎಲ್ಲವನ್ನೂ ಸ್ವತಃ ಸಂಪಾದಿಸಿದ್ದೇನೆ; ಸಾಧನೆ ಮಾಡಿದ್ದೇನೆ’ ಎಂದು ಕೊಚ್ಚಿಕೊಳ್ಳುತ್ತಿರುತ್ತಾರೆ. ಕೆಲವು ಶ್ರೀಮಂತ ಕುಟುಂಬಗಳಲ್ಲಿ ಮಕ್ಕಳು ಸಾಯುವವರೆಗೂ ಪಿತ್ರಾರ್ಜಿತ ಋಣದಲ್ಲೇ ಇರುತ್ತಾರೆ ಅದು ಬೇರೆ ಮಾತು. ಆದರೆ, ತಂದೆ-ತಾಯಿ ಮಕ್ಕಳಿಗೆ ಜನ್ಮನೀಡಿ ಪಾಲಿಸುವುದು, ಸಂಸ್ಕಾರ ಕಲಿಸಿ ಬೆಳೆಸುವುದೇ ಜಗತ್ತಿನಲ್ಲಿ ಮಕ್ಕಳ ಮೇಲಿರುವ ಅತ್ಯಂತ ದೊಡ್ಡ ಋಣ. ಇದು ಹಣದಿಂದ ಅಳೆಯುವಂಥದ್ದಲ್ಲ. ವಸ್ತುಗಳನ್ನು ಕೊಟ್ಟು ತೀರಿಸುವಂಥದ್ದೂ ಅಲ್ಲ. ಮಕ್ಕಳನ್ನು ಬಾಲ್ಯದಲ್ಲಿ ತಂದೆ-ತಾಯಿ ಸಾಕುತ್ತಾರೆ. ತಂದೆ-ತಾಯಿಗೆ ವಯಸ್ಸಾಗಿ ಮಕ್ಕಳಂತಾದ ಮೇಲೆ ಮಕ್ಕಳು ಅವರನ್ನು ಗೌರವಯುತವಾಗಿ ನೋಡಿಕೊಳ್ಳುವುದು ಭಾರತೀಯ ಸಂಸ್ಕೃತಿ, ಸಮಾಜದ ಪದ್ಧತಿ.

ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಬ್ಬರಿಗೂ ಪಿತೃ ಋಣ, ದೇವ ಋಣ, ಋಷಿ ಋಣ, ಭೂತ ಋಣ, ಮನುಷ್ಯ ಋಣ ಹೀಗೆ ಪಂಚ ಋಣಗಳಿರುತ್ತವೆ. ನಮ್ಮ ಮನೆ ದೇವರು, ಕುಲದೇವರು, ಇಷ್ಟ ದೇವರು, ಗ್ರಾಮ ದೇವರು ಹೀಗೆ ನಂಬಿದ ದೇವರಿಗೆ ನಡೆದುಕೊಳ್ಳುವುದು ದೇವ ಋಣ ಸಂದಾಯ ಮಾಡುವ ಬಗೆ. ಋಷಿ ಋಣವೆಂದರೆ, ನಿತ್ಯಬದುಕಿನಲ್ಲಿ ಅನುಸರಿಸುವ, ಪರಿಪಾಲಿಸುವ ಶಾಸ್ತ್ರ, ಸಂಪ್ರದಾಯಗಳು, ಪಠಿಸುವ ಶ್ಲೋಕಗಳು, ಮಂತ್ರಗಳು, ಅಧ್ಯಯನ ಮಾಡುವ ಪೌರಾಣಿಕ-ಶಾಸ್ತ್ರ ಗ್ರಂಥಗಳು ಇವೆಲ್ಲವೂ ಸನಾತನ ಋಷಿ-ಮುನಿಗಳ ಕೊಡುಗೆ. ಅದೇ ರೀತಿ ಹೊರಜಗತ್ತಿನಲ್ಲಿ, ಸಮಾಜದಲ್ಲಿ, ವಿದ್ಯಾಸಂಸ್ಥೆಗಳಲ್ಲಿ ನಮಗೆ ಶಿಕ್ಷಣ, ಜೀವನದ ಮೌಲ್ಯಗಳನ್ನು ಕಲಿಸುವ ಪ್ರತಿಯೊಬ್ಬರೂ ಗುರುಗಳೇ. ಒಂದಕ್ಷರ ಕಲಿಸಿದವರೂ ಗುರು ಎನ್ನುವಂತೆ, ಮುಂದಿನ ಪೀಳಿಗೆಗೆ ನಮ್ಮಲ್ಲಿರುವ ಜ್ಞಾನವನ್ನು ವರ್ಗಾಯಿಸುವ ಮೂಲಕ, ಋಷಿ ಋಣ ತೀರಿಸುವ ಪ್ರಯತ್ನ ಮಾಡಬಹುದು. ಭೂತ ಋಣವೆಂದರೆ ನಾವು ಪ್ರಕೃತಿಯ ಮಕ್ಕಳು. ಪ್ರಕೃತಿಯಲ್ಲಿ ಲಭ್ಯವಿರುವ ಪ್ರತಿಯೊಂದರಿಂದರೂ ನಮ್ಮ ನಿತ್ಯಜೀವನದಲ್ಲಿ ಉಪಕಾರ ಪಡೆಯುತ್ತಿರುತ್ತೇವೆ. ದನಕರು, ಬೆಕ್ಕು, ನಾಯಿಗಳಂಥ ಸಾಕು ಪ್ರಾಣಿಗಳಿರಬಹುದು, ಹೂವು, ಹಣ್ಣು, ತರಕಾರಿಗಳಿರಬಹುದು, ಮರ, ಗಿಡ, ಕೆರೆ, ನದಿ ಹೀಗೆ ಪ್ರಕೃತಿಯ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಬದುಕು ಕಟ್ಟಿಕೊಂಡಿರುವ ನಾವು, ಪ್ರಕೃತಿಯ ಬಗ್ಗೆ, ಪ್ರಾಣಿ ಜಗತ್ತಿನ ಬಗ್ಗೆ, ಸಹಾನುಭೂತಿ, ಉಪಕಾರ ಭಾವನೆ ಹೊಂದುವುದೇ ಭೂತ ಋಣ ತೀರಿಸುವ ಮಾರ್ಗ.

ಇನ್ನು ಮನುಷ್ಯ ಋಣವೆಂದರೆ, ಯಾರೋ ಪುಣ್ಯಾತ್ಮರು ನೆಟ್ಟು ಬೆಳೆಸಿರುವ ಗಿಡ-ಮರಗಳು, ಕಟ್ಟಿಸಿರುವ ಕರೆಕಟ್ಟೆಗಳು, ಅನ್ನಛತ್ರಗಳು, ತಂಗುದಾಣಗಳು, ದೇಗುಲ, ದಾಸೋಹ ಮನೆಗಳ ಪ್ರಯೋಜನವನ್ನು ನಾವು ಪಡೆಯುತ್ತಿದ್ದೇವೆ. ನಾವೂ ಕೂಡ ನಮ್ಮ ಆದಾಯದಲ್ಲಿ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸುವ ಮೂಲಕ ಮನುಷ್ಯ ಋಣದಿಂದ ಮುಕ್ತರಾಗಬಹುದು ಎಂದು ಹಿರಿಯರು ಹೇಳುತ್ತಾರೆ.

ಋಣಗಳ ಕುರಿತು ವಿಚಾರ ಮಾಡುವಾಗ ಕೆಲವು ಋಣಗಳನ್ನು ಎಷ್ಟು ಜನ್ಮ ಎತ್ತಿ ಬಂದರೂ, ತೀರಿಸಲು ಸಾಧ್ಯವಾಗುವುದಿಲ್ಲ. ಅಮ್ಮನ ಋಣವೂ ಅಷ್ಟೇ. ಜಗತ್ತಿನಲ್ಲಿ ಯಾವುದೇ ವಸ್ತು ಕಳೆದುಹೋದರೆ, ಅದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ತರಬಹುದು. ಒಂದರಲ್ಲಿ ಕಳೆದುಕೊಂಡ ದುಃಖವನ್ನು ಇನ್ನೊಂದರಲ್ಲಿ ಮರೆಯಬಹುದು. ಆದರೆ, ಅಮ್ಮನಿಗೆ ಪರ್ಯಾಯವಿಲ್ಲ. ಏಕೆಂದರೆ, ಜಗತ್ತಿನಲ್ಲಿ ಯಾರೊಬ್ಬರೂ ಅಮ್ಮನನ್ನು ಆಯ್ಕೆ ಮಾಡಿಕೊಂಡು ಹುಟ್ಟಿದವರಲ್ಲ. ಅಮ್ಮನ ಮಡಿಲಲ್ಲಿ, ಅಮ್ಮನ ಕಣ್ಣುಗಳಲ್ಲಿ, ಅಮ್ಮನ ಮಾತುಗಳಲ್ಲಿ ಜಗತ್ತನ್ನು ಕಂಡವರು, ಅರ್ಥ ಮಾಡಿಕೊಂಡವರು ನಾವು. ದುಷ್ಟ ಮಹಿಳೆ ಇರಬಹುದು, ಆದರೆ, ದುಷ್ಟ ಅಮ್ಮ ಇರಲಾರಳು. ಜಗತ್ತಿನ ದೃಷ್ಟಿಯಲ್ಲಿ ಹೇಗೇ ಇದ್ದರೂ, ಮಕ್ಕಳ ಪಾಲಿಗೆ ಅಮ್ಮ ಕರುಣಾಮಯಿಯೇ. ಇಂಥ ಅಮ್ಮನ ಋಣವನ್ನು ತೀರಿಸುವುದು ಅಸಾಧ್ಯ.

ಅನೇಕ ಋಣಗಳು ನಮ್ಮ ಹಣೆಯಲ್ಲಿ ಬರೆಯದ ಹೊರತು ದಕ್ಕುವುದಿಲ್ಲ. ಉದಾಹರಣೆಗೆ ಮಣ್ಣಿನ ಋಣ, ಸಂಪತ್ತಿನ ಋಣ. ಕೆಲವು ಋಣಗಳು ತೀರಿದ ಮೇಲೆ ಅಲ್ಲಿ ಒಂದು ಕ್ಷಣವೂ ಇರಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಅನ್ನದ ಋಣ, ನೀರಿನ ಋಣ. ಇದರರ್ಥ, ನಾವು ಸೇವಿಸುವ ಆಹಾರ, ಕುಡಿಯುವ ನೀರು, ವಾಸ ಮಾಡುವ ಭೂಮಿಯ ಬಗ್ಗೆ ಗೌರವ, ಕೃತಜ್ಞತೆ ಬೆಳೆಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ತಿರಸ್ಕಾರ ಮಾಡಬಾರದು ಎಂದು ಹಿರಿಯರು ಹೇಳುವುದು ಇದೇ ಕಾರಣಕ್ಕೆ. ತಿನ್ನುವ ಒಂದೊಂದು ಅಗುಳಿನ ಮೇಲೂ ನಮ್ಮ ಹೆಸರು ಬರೆದಿರುತ್ತದೆ. ಯಾರ ಅನ್ನದ ಋಣ ಎಲ್ಲಿ ಬರೆದಿರುವುದೋ ಬ್ರಹ್ಮನಿಗೇ ಗೊತ್ತು ಎಂಬ ಮಾತಿದೆ. ಅದು ನಿಜವೂ ಹೌದು. ಕಾರ್ಯನಿಮಿತ್ತ ಯಾರ ಮನೆಗೋ ಹೋಗಿರುತ್ತೇವೆ. ಊಟ ಮಾಡಿಕೊಂಡು ಹೋಗಿ ಎನ್ನುತ್ತಾರೆ. ಇಲ್ಲ, ಹಸಿವಿಲ್ಲ, ಆಮೇಲೆ ಮಾಡುತ್ತೇವೆ ಎಂದು ಜಂಬ ಮಾಡಿಕೊಂಡು ಹೊರಟು ಬಿಡುತ್ತೇವೆ. ಆದರೆ, ಆ ದಿನ ಏನೇನೋ ಕಾರಣಾಂತರಗಳಿಂದ ಹೊರಗೆ ಎಲ್ಲೂ ಊಟ ಮಾಡಲು ಸಾಧ್ಯವಾಗುವುದಿಲ್ಲ. ಹಸಿದ ಹೊಟ್ಟೆಗೆ ಕನಿಷ್ಠ ಒಂದು ಬಾಳೆಹಣ್ಣೂ ಸಿಗುವುದಿಲ್ಲ. ಇಂಥ ಅನುಭವ ಅನೇಕರಿಗೆ ಆಗಿರುತ್ತದೆ. ಕೆಲವೊಮ್ಮೆ ನಿರೀಕ್ಷೆಯೇ ಮಾಡದ ಜಾಗದಲ್ಲಿ, ಅಪರಿಚಿತರ ಜತೆ ಮೃಷ್ಟಾನ್ನ ಭೋಜನ ಮಾಡುತ್ತೇವೆ. ಅಂದರೆ, ನಮ್ಮ ಅನ್ನದ ಋಣ ಯಾವ ಹೊತ್ತು ಎಲ್ಲಿರುತ್ತದೆ ಎನ್ನುವುದು ನಮಗೇ ಗೊತ್ತಿರುವುದಿಲ್ಲ.

ಇದೇ ಕಾರಣಕ್ಕೆ ನಮ್ಮ ಸಮಾಜ, ನಮ್ಮ ಸಂಸ್ಕಾರ ಕಲಿಸುವ ಒಂದು ಸಂಗತಿಯೆಂದರೆ ಅನ್ನವನ್ನು ಗೌರವಿಸುವುದು. ಗೌರವಿಸುವುದೆಂದರೆ ಹೇಗೆ? ಆಹಾರವನ್ನು ತಿರಸ್ಕಾರದಿಂದ ಕಾಣದಿರುವುದು. ನಮಗೆ ಎಷ್ಟು ಬೇಕೋ ಅಷ್ಟೇ ತಿನ್ನುವುದು. ಅನ್ನವನ್ನು ಚೆಲ್ಲದಿರುವುದು.

ಅನೇಕ ಚಲನಚಿತ್ರಗಳಲ್ಲಿ, ಟಿವಿ ಧಾರಾವಾಹಿಗಳಲ್ಲಿ ತಿನ್ನುವ ಅನ್ನದ ಬಗ್ಗೆ ತಿರಸ್ಕಾರದ ದೃಶ್ಯಗಳನ್ನು ಕಾಣುತ್ತಿರುತ್ತೇವೆ. ಪಾತ್ರಧಾರಿಗಳಿಗೆ ಸಿಟ್ಟು, ಆಕ್ರೋಶ ತೋರಿಸುವ ದೃಶ್ಯದಲ್ಲಿ ಊಟ ಮಾಡುತ್ತಿರುವ ತಟ್ಟೆಯಲ್ಲಿ ಇನ್ನೂ ಆಹಾರ ಉಳಿದಿರುವಂತೆಯೇ ಕೈತೊಳೆದುಕೊಳ್ಳುತ್ತಾರೆ. ಅನ್ನದ ತಟ್ಟೆಯನ್ನು ಎತ್ತಿ ಎಸೆಯುತ್ತಾರೆ. ಒದ್ದು ಹೊರಗೆ ಹೋಗುತ್ತಾರೆ. ದೃಶ್ಯ ಮಾಧ್ಯಮವೆನ್ನುವುದು ಬಹಳ ಪ್ರಭಾವಿ. ಜನ ಇದನ್ನು ಅನುಕರಿಸುತ್ತಾರೆ. ಸಿಟ್ಟು ಬಂದಿರುವುದನ್ನು ತೋರಿಸುವುದಕ್ಕೆ ಸಾವಿರ ಮಾರ್ಗಗಳಿವೆ. ಹಾಗಾಗಿ ಅನ್ನವನ್ನು ಅಗೌರವಿಸುವಂಥ ದೃಶ್ಯಗಳನ್ನು ತೋರಿಸಬೇಡಿ ಎಂದು ಯಾರಾದರೂ ತಿಳಿವಳಿಕೆ ಹೇಳುವ ಅಗತ್ಯವಿದೆ. ಯಾವುದೇ ದೇಶದ ಅಭಿವೃದ್ಧಿಗೆ ಮೊದಲ ಮಾನದಂಡವೇ ಆಹಾರ ಭದ್ರತೆ. ಹೊಟ್ಟೆಗೆ ಹಿಟ್ಟಿದ್ದರಷ್ಟೇ ಬೇರೆ ಎಲ್ಲ ಜ್ಞಾನ, ವಿಜ್ಞಾನ, ತಂತ್ರಜ್ಞಾನ. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ನಾವು ಬೆಳೆಯುವ ಆಹಾರ ಉತ್ಪನ್ನಗಳ ಬಗ್ಗೆ ಪೂಜ್ಯಭಾವ ಹೊಂದಿರಬೇಕಾದ್ದು ಕರ್ತವ್ಯ.

ಊಟಕ್ಕೆ ಕುಳಿತಾಗ ಮಾತನಾಡಬಾರದು ಎಂದು ನಮ್ಮಲ್ಲೊಂದು ಸಂಸ್ಕಾರವಿದೆ. ಬದುಕು ಆಧುನಿಕವಾದ ಮೇಲೆ ಹೆಚ್ಚಿನವರ ಕಣ್ಣು-ಗಮನ ಎರಡೂ ಊಟದ ಕಡೆ ಇರುವುದಿಲ್ಲ. ಕೈ-ಬಾಯಿಗಳು ಯಾಂತ್ರಿಕವಾಗಿ ಅವುಗಳ ಕೆಲಸ ಮಾಡುತ್ತಿರುತ್ತವೆ. ಊಟ ಮಾಡುವವರ ಗಮನ ಟಿವಿ ಮೇಲಿರುತ್ತದೆ ಇಲ್ಲವೇ ಮೊಬೈಲ್ ರೀಲ್ಸ್​ಗಳಲ್ಲಿ, ವಾಟ್ಸ್​ಆಪ್, ಫೇಸ್​ಬುಕ್​ಗಳಲ್ಲಿ ಮುಳುಗಿರುತ್ತವೆ.

ಅನ್ನಪೂರ್ಣೆ ಸದಾಪೂರ್ಣೆ | ಶಂಕರ ಪ್ರಾಣವಲ್ಲಭೆ | ಜ್ಞಾನ ವೈರಾಗ್ಯ ಸಿಧ್ಯರ್ಥಂ | ಭಿಕ್ಷಾಂ ದೇಹೀ ಚ ಪಾರ್ವತಿ (ಆಹಾರ ಮತ್ತು ಪೋಷಣೆಯ ದೇವತೆಯಾಗಿರುವ ಅನ್ನಪೂರ್ಣೆಯೇ, ಸದಾ ಪೂರ್ಣವಾಗಿದ್ದು ಎಲ್ಲ ಜೀವಿಗಳನ್ನು ಪೋಷಿಸುವ ಸದಾಪೂರ್ಣೆಯೆ, ಭಗವಾನ್ ಶಂಕರನಿಗೆ ಅತ್ಯಂತ ಪ್ರೀತಿಪಾತ್ರಳಾದವಳೇ, ಜ್ಞಾನ, ವೈರಾಗ್ಯಗಳನ್ನು ದಯಪಾಲಿಸುವವಳೇ, ಸದಾ ಕಾಲ ನಮ್ಮೊಂದಿಗೆ ನೆಲೆಸಿ ಆಹಾರದ (ಧನ, ಧಾನ್ಯ, ಸಂಪತ್ತು) ಭಿಕ್ಷೆಯನ್ನು ಕರುಣಿಸು) ಎಂದು ಪ್ರಾರ್ಥಿಸಿ ಊಟ ಆರಂಭಿಸುವುದು ನಮ್ಮ ಪದ್ಧತಿ, ಸಂಸ್ಕೃತಿ. ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಂ | ಬ್ರಹ್ಮ್ಯ ತೇನ ಗಂತವ್ಯಂ ಬ್ರಹ್ಮಕರ್ಮ ಸಮಾಧಿನಾ|| ಮೊದಲಾದ ಮಂತ್ರಗಳ ಸಾರವೂ ಅದೇ. ಅಂದರೆ, ಆಹಾರ ಸೇವನೆ ಸಂದರ್ಭದಲ್ಲಿ ಮಂತ್ರ ಪಠಣದ ಮೂಲಕ ಅನ್ನದ ಪಾವಿತ್ರ್ಯವನ್ನು, ದೈವಿಕ ಮಹತ್ವವನ್ನು ಅರಿಯಲಾಗುತ್ತದೆ. ಬದುಕಿನ ಕಷ್ಟ-ನಷ್ಟಗಳು ಏನೇ ಇದ್ದರೂ, ಊಟದ ಸಮಯದಲ್ಲಿ ಶಾಂತವಾಗಿರಬೇಕು, ನಿರ್ಮಲ ಮನಸ್ಸಿನಿಂದ ಆಹಾರ ಸೇವಿಸಬೇಕು. ಇದರಿಂದಾಗಿ ಸೇವಿಸಿದ ಆಹಾರದ ಜೀರ್ಣಕ್ರಿಯೆ ಸುಗಮವಾಗುತ್ತದೆ. ಆಹಾರದ ಕುರಿತು ಕೃತಜ್ಞತಾ ಭಾವನೆ ಹೊಂದಿರಬೇಕು. ಊಟವೆನ್ನುವುದು ಹಸಿವು ನೀಗಿಸುವ ಯಾಂತ್ರಿಕ ಕ್ರಿಯೆಯಾಗದೆ, ದೈವಿಕ, ಆಧ್ಯಾತ್ಮಿಕ ಕ್ರಿಯೆ ಎಂದು ಭಾವಿಸಬೇಕು. ಯಜ್ಞಗಳಿಗೆ ಹವಿಸ್ಸನ್ನು ಸಲ್ಲಿಸುವ ಹಾಗೆ ಊಟವೆನ್ನುವುದು ಜಟರಾಗ್ನಿಗೆ ಆಹುತಿ ಅರ್ಪಿಸುವ ಹೋಮ ಎಂದು ಉಪನಿಷತ್ತುಗಳು ಹೇಳುತ್ತವೆ.

ಅಗ್ನಿ ಮತ್ತು ಆದಿತ್ಯರು (ಸೂರ್ಯ) ಜಗತ್ತಿನ ಸಾರಭೂತರಾದ ದೇವತೆಗಳು. ಆಹಾರ ಧಾನ್ಯಗಳು ಬೆಳೆಯುವುದಕ್ಕೂ, ಹೊಟ್ಟೆಯಲ್ಲಿ ಕರಗುವುದಕ್ಕೂ ಇವರಿಬ್ಬರು ಕಾರಣಕರ್ತರು. ಊಟವನ್ನು ದೈವೀ ಭಾವನೆಯಿಂದ, ಕೃತಜ್ಞತೆಯಿಂದ, ಮಾಡುವುದರಿಂದ ಅನ್ನದಾತ (ರೈತ) ಮತ್ತು ಅನ್ನಭೋಕ್ತ (ಊಟ ಮಾಡುವವನು) ಇಬ್ಬರೂ ಸುಖವಾಗಿರುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ. ‘ಅನ್ನದಾತೋ ಸುಖಿಭವ’ ಎಂಬ ಮಾತಿನರ್ಥವೂ ಅದೇ.

ನಾವು ಅನುಭವಿಸಿದ ಕಷ್ಟವನ್ನು ನಮ್ಮ ಮಕ್ಕಳೂ ಅನುಭವಿಸಬಾರದು ಎಂದು ಆಧುನಿಕ ಸಮಾಜದಲ್ಲಿ ಪ್ರತಿಯೊಬ್ಬ ತಂದೆ-ತಾಯಿ ಕಷ್ಟಪಡುತ್ತಾರೆ. ತಮ್ಮ ಪರಿಸ್ಥಿತಿ ಹೇಗೇ ಇದ್ದರೂ, ಮಕ್ಕಳಿಗೆ ಯಾವುದೇ ಸೌಲಭ್ಯ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಮಕ್ಕಳು ಚೆನ್ನಾಗಿರಲಿ ಎಂದು ಕಾಳಜಿ ವಹಿಸುವುದು ತಪ್ಪಲ್ಲ. ಆದರೆ, ಮಕ್ಕಳನ್ನು ಲೋಕದ ಪ್ರಾಯೋಗಿಕ ಸತ್ಯಗಳಿಂದ ದೂರವಿರಿಸುವುದೂ ಸರಿಯಲ್ಲ. ಏಕೆಂದರೆ, ದುಡ್ಡಿನ ಮಹತ್ವ, ಸಮಯ, ಶಿಸ್ತಿನ ಮಹತ್ವ ಎಲ್ಲಕ್ಕಿಂತ ಮುಖ್ಯವಾಗಿ ಅನ್ನದ ಮಹತ್ವವನ್ನು ಮಕ್ಕಳಿಗೆ ತಿಳಿಸದೇ ಇದ್ದಲ್ಲಿ ಭವಿಷ್ಯದಲ್ಲಿ ತೊಂದರೆ ಅನುಭವಿಸುತ್ತಾರೆ. ಅದರಲ್ಲೂ ಊಟದ ಶಿಸ್ತನ್ನು ಮಕ್ಕಳಿಗೆ ಕಲಿಸಲೇಬೇಕು. ಏನನ್ನು ತಿನ್ನಬೇಕು, ಎಷ್ಟು ತಿನ್ನಬೇಕು, ವ್ಯರ್ಥ ಮಾಡದೇ ತಿನ್ನಬೇಕು ಎಂಬ ಮಹತ್ವ ಅರ್ಥ ಮಾಡಿಸಲೇಬೇಕು. ಅನೇಕ ಮಕ್ಕಳು ಹೋಟೆಲ್​ಗಳಲ್ಲಿ ತರಹೇವಾರಿ ಪದಾರ್ಥ ಆರ್ಡರ್ ಮಾಡುತ್ತಾರೆ. ಯಾವುದನ್ನೂ ಪೂರ್ತಿಯಾಗಿ ತಿನ್ನದೆ, ಅರ್ಧಂಬರ್ಧ ತಿಂದು, ಉಳಿದಿದ್ದನ್ನು ಬಿಟ್ಟು ಎದ್ದು ಹೋಗುತ್ತಾರೆ. ಅನೇಕ ಮನೆಗಳಲ್ಲಿ ಖಾರ, ಸಪ್ಪೆ, ಉಪ್ಪು, ಹಸಿವಿಲ್ಲ, ಇಷ್ಟವಾಗುತ್ತಿಲ್ಲ, ಮೂಡಿಲ್ಲ... ಇನ್ನೇನೋ ಸಬೂಬು ಹೇಳಿ ಬಡಿಸಿದ್ದನ್ನು ತಾಟಿನಲ್ಲೇ ಬಿಟ್ಟು ಎದ್ದು ಹೋಗುತ್ತಾರೆ. ಮದುವೆ ಮನೆಗಳಲ್ಲಂತೂ ಎಲೆಗಳಲ್ಲಿ ವ್ಯರ್ಥ ಮಾಡಿ ಚೆಲ್ಲಿ ಹೋಗಿರುವ ಊಟವೇ ಇನ್ನೊಂದು 50-100 ಜನರಿಗಾಗುವಷ್ಟಿರುತ್ತದೆ. ಆಹಾರ ಸೇವನೆ ಎನ್ನುವುದು ನಮ್ಮ ದೇಹದ ಅಗತ್ಯ. ಆದರೆ, ಬಡವನಾಗಲೀ, ಸಿರಿವಂತನಾಗಲಿ, ಆಹಾರ ವ್ಯರ್ಥ ಮಾಡುವ ಅಧಿಕಾರ ಯಾರಿಗೂ ಇಲ್ಲ. ಹಣ ಜಾಸ್ತಿ ಇದೆ ಎಂದು ಯಾರೊಬ್ಬರೂ ರಸ್ತೆಯಲ್ಲಿ ಬಿಸಾಡುವುದಿಲ್ಲ. ಹಾಗಿರುವಾಗ ಅನ್ನ ಹೆಚ್ಚಾಯಿತು ಎಂದು ರಸ್ತೆಗೆ, ಕಸದ ಗುಂಡಿಗೆ ಎಸೆಯುವುದೇಕೆ? ಅಡುಗೆ ಮಾಡುವಾಗ ಒಂದು ಹಿಡಿ ಅಕ್ಕಿ ಕಡಿಮೆ ಹಾಕಿದರೂ ಪರವಾಗಿಲ್ಲ. ಏಕೆಂದರೆ, ಅಕ್ಕಿ ಉಳಿದರೆ ನಾಳೆಯೂ ಅನ್ನ ಮಾಡಬಹುದು. ಅನ್ನ ಉಳಿದರೆ ನಾಳೆಗೆ ಹಳಸುತ್ತದೆ.

ಅನ್ನ ದೇವರಿಗಿಂತ ಇನ್ನು ದೇವರು ಇಲ್ಲ | ಅನ್ನಕ್ಕೆ ಮೇಲು ಹಿರಿದಿಲ್ಲ| ಲೋಕಕ್ಕೆ ಅನ್ನವೇ ಪ್ರಾಣ ಸರ್ವಜ್ಞ || ಎಂದು ಸರ್ವಜ್ಞ ಕವಿ ಹೇಳಿದ್ದೂ ಅದನ್ನೇ. ‘ಹಸಿದವ ಬಲ್ಲ, ಹಸಿವೆಯ ಶೂಲಿ’ ಎಂದು ಅನ್ನಾವತಾರ ಕವಿತೆಯಲ್ಲಿ ವರಕವಿ ಬೇಂದ್ರೆ ಅನ್ನದ ಮಹಿಮೆ ವರ್ಣಿಸುತ್ತಾರೆ. ಅಂದರೆ, ಅನ್ನದ ಮಹತ್ವ ಗೌರವಿಸುವವನನ್ನು ಜಗತ್ತೂ ಗೌರವಿಸುತ್ತದೆ. ಹೊಟ್ಟೆಗೆ ಹೆಚ್ಚಾಯಿತು ಎಂದು ವ್ಯರ್ಥ ಮಾಡುವವರು, ಹಸಿದವರ ಸಂಕಟದ ಬಗ್ಗೆ ಸ್ವಲ್ಪ ಯೋಚಿಸಿದರೆ, ಮತ್ತೊಮ್ಮೆ ಅನ್ನ ಹಾಳು ಮಾಡುವುದಿಲ್ಲ.

12ನೇ ಶತಮಾನದಲ್ಲಿ ಬಸವಾದಿ ಶರಣರ ಕೀರ್ತಿಯನ್ನು ತಿಳಿದು ದೂರದ ಅಫಘಾನಿಸ್ತಾನದಿಂದ ಬಂದಿದ್ದ ಮರುಳ ಶಂಕರದೇವರು ಬಸವಣ್ಣರ ಮಹಾಮನೆಯಲ್ಲಿ ಗುಪ್ತ ಭಕ್ತರಾಗಿ ಉಳಿದುಕೊಂಡು 12 ವರ್ಷಗಳ ಕಾಲ ಶರಣರ ಎಂಜಲು ಎಲೆಗಳಲ್ಲಿ ಉಳಿದಿರುವ ಅನ್ನವನ್ನು ಸಂಗ್ರಹಿಸಿ ಸೇವಿಸುತ್ತಿದ್ದರು. ಇವರ ತಪಸ್ಸನ್ನು ಕಂಡು ಅಲ್ಲಮ ಪ್ರಭುಗಳೇ ಆಶ್ಚರ್ಯಗೊಂಡು ‘ಕಂಡೆನೊಂದ ಆಶ್ಚರ್ಯವ, ಮಾಣಿಕ್ಯ ಕಂಡೆ’ ಎಂದು ಉದ್ಗರಿಸುತ್ತಾರೆ. ಶಿವಪ್ರಸಾದದ ಮಹತ್ವ ಅರಿತಿದ್ದ ಮರುಳ ಶಂಕರ ದೇವರು ಲೋಕದ ಕಣ್ಣು ತೆರೆಸಿದ ಮಹಾನ್ ಶರಣರು. ಅನ್ನವೆಂಬುದು ಜೀವಿಗಳಿಗೆ ದೇವರ ಪ್ರಸಾದ. ಹಿತವಾಗಿ,ಮಿತವಾಗಿ ಎಷ್ಟು ಬೇಕೋ ಅಷ್ಟೇ ಸೇವಿಸುವುದು, ವ್ಯರ್ಥ ಮಾಡದಿರುವುದು, ಹಸಿದವರೊಂದಿಗೆ ಹಂಚಿ ತಿನ್ನುವುದು ನಾವೆಲ್ಲರೂ ಮಾಡಲೇಬಹುದಾದ ಕೆಲಸ. ಏಕೆಂದರೆ, ಅನ್ನವನ್ನು, ಅಮ್ಮನನ್ನು ಗೌರವಿಸುವವರು ಜೀವನದಲ್ಲಿ ಯಾವತ್ತೂ ಸೋಲುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net